ಕಳೆದ ಐದು ದಿನದ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದ ಬಂಗಾಳದ ಕ್ರೀಡಾ ಸಚಿವ ಹಾಗೂ ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary) ಇದೀಗ ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ವಾಸ್ತವವಾಗಿ ಕಳೆದ ಬಾರಿಯ ರಣಜಿ ಆರಂಭಕ್ಕೂ ಮುನ್ನ ತನ್ನ ನಿವೃತ್ತಿ ಬಗ್ಗೆ ಮಾತನಾಡಿದ್ದ ಮನೋಜ್, ರಣಜಿ ಟ್ರೋಫಿಯಲ್ಲಿ (Ranji Trophy) ತಂಡವನ್ನು ಚಾಂಪಿಯನ್ ಮಾಡಿಯೇ ಆನಂತರ ವೃತ್ತಿ ಬದುಕಿಗೆ ನಿವೃತ್ತಿ ಹೇಳುತ್ತೇನೆ ಎಂದಿದ್ದರು. ಆದರೆ ಕಳೆದ ಬಾರಿ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಬಂಗಾಳ ತಂಡ ಸೌರಾಷ್ಟ್ರ ಎದುರು ಸೋತು, ಚಾಂಪಿಯನ್ ಪಟ್ಟದಿಂದ ವಂಚಿತವಾಗಿತ್ತು. ಆ ಬಳಿಕವೂ ಮನೋಜ್ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ.
ಆದರೆ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮನೋಜ್ ಹಂಚಿಕೊಂಡಿದ್ದ ಒಂದು ಪೋಸ್ಟ್ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಪೋಸ್ಟ್ನಲ್ಲಿ ತಾನು ಕ್ರಿಕೆಟ್ನಿಂದ ದೂರ ಸರಿಯುತ್ತಿರುವುದಾಗಿ ಮನೋಜ್ ತಿಳಿಸಿದ್ದರು. ಆದರೆ ಇದೀಗ ತಮ್ಮ ನಿರ್ಧಾರ ಪ್ರಕಟಿಸಿ ಐದು ದಿನಗಳ ಬಳಿಕ ಪ್ರತಿಕಾಗೋಷ್ಠಿ ನಡೆಸಿದ ಮನೋಜ್, ಎಲ್ಲರ ಪ್ರೀತಿ ಹಾಗೂ ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ಮನವಿಗೆ ಮಣಿದು ತಮ್ಮ ನಿರ್ಧಾರವನ್ನು ಬದಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಆತುರದ ನಿರ್ಧಾರಕ್ಕಾಗಿ ಬೆಂಬಲಿಗರ ಕ್ಷಮೆಯನ್ನೂ ಕೇಳಿದ್ದಾರೆ.
Ranji Trophy: ಸಂಕಷ್ಟದಲ್ಲಿದ್ದ ತಂಡಕ್ಕೆ ಕ್ರೀಡಾ ಸಚಿವರ ನೆರವು; ರಣಜಿ ಸೆಮಿಫೈನಲ್ನಲ್ಲಿ ಮನೋಜ್ ಅಬ್ಬರ
ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ನೇಹಾಶಿಸ್ ಗಂಗೋಪಾಧ್ಯಾಯ, ‘ಮನೋಜ್ ನಿವೃತ್ತಿಯ ಬಗ್ಗೆ ತಿಳಿದ ನಂತರ ಮನೋಜ್ ಅವರ ನಿರ್ಧಾರದಿಂದ ನನಗೆ ತುಂಬಾ ಆಶ್ಚರ್ಯವಾಯಿತು. ಆ ಬಳಿಕ ನಾನು ಅವರೊಂದಿಗೆ ಮಾತನಾಡಿದೆ. ಸುಮಾರು ಎರಡು ದಶಕಗಳ ಕಾಲ ಬಂಗಾಳ ಪರ ಆಡಿದ ನಂತರ ಈ ರೀತಿ ನಿವೃತ್ತಿ ಹೊಂದುವುದು ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಿದೆ. ಅವರಂತಹ ಕ್ರಿಕೆಟಿಗ ಮತ್ತು ನಾಯಕ ಈ ರೀತಿ ನಿವೃತ್ತಿ ಹೊಂದುವುದು ಸರಿ ಅಲ್ಲ. ಬಂಗಾಳಿ ಕ್ರಿಕೆಟ್‌ಗೆ ಅವರ ಕೊಡುಗೆ ಅಪ್ರತಿಮವಾಗಿದೆ. ಹೀಗಾಗಿ ಅವರಿಗೆ ನಾಯಕನ ಬೀಳ್ಕೊಡುಗೆ ನೀಡಬೇಕು’ ಎಂದು ಮನವಿ ಮಾಡಿದೆ ಎಂದಿದ್ದಾರೆ.
ಇನ್ನು ತಮ್ಮ ನಿರ್ಧಾರದಿಂದ ಹಿಂದೆ ಸರಿದಿರುವ ಬಗ್ಗೆ ಮಾತನಾಡಿದ ಮನೋಜ್ ತಿವಾರಿ, ‘ನಾನು ಹಠಾತ್ ನಿವೃತ್ತಿ ನಿರ್ಧಾರ ತೆಗೆದುಕೊಂಡೆ. ನನ್ನ ಕುಟುಂಬದವರೂ ಸಹ ಇಂತಹ ನಿರ್ಧಾರದಿಂದ ಅತೃಪ್ತರಾಗಿದ್ದರು. ಸಹ ಆಟಗಾರರು ಮತ್ತು ಬೆಂಬಲಿಗರು ಕೂಡ ನಿರಾಶೆಗೊಂಡರು. ಸೋಶಿಯಲ್ ಮೀಡಿಯಾದಲ್ಲಿ ನಿವೃತ್ತಿ ಘೋಷಿಸಿದ್ದರಿಂದ ನನ್ನ ಹೆಂಡತಿಯೂ ಅತೃಪ್ತಳಾಗಿದ್ದಳು. ಆ ಬಳಿಕ ಸ್ನೇಹಶಿಸ್ ದಾರ್ ನನ್ನ ಬಳಿ ಮಾತನಾಡಿ ಬಂಗಾಳ ಪರ ಇನ್ನೂ ಒಂದು ಸೀಸನ್ ಆಡುವಂತೆ ನನಗೆ ಮನವರಿಕೆ ಮಾಡಿಕೊಟ್ಟರು. ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್‌ನಿಂದ ನನಗೆ ದೊರೆತ ಪ್ರೀತಿ ಮತ್ತು ಗೌರವವನ್ನು ನಾನು ಎಂದಿಗೂ ಮರೆಯುವುದಿಲ್ಲ. ಈ ದುಡುಕಿನ ನಿರ್ಧಾರಕ್ಕಾಗಿ ನಾನು ಎಲ್ಲಾ ಅಭಿಮಾನಿಗಳು ಮತ್ತು ಬಂಗಾಳ ಕ್ರಿಕೆಟ್‌ನ ನನ್ನ ಹಿತೈಷಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ಹೊಸ ಸೀಸನ್ನಲ್ಲಿ ಬಂಗಾಳ ಕ್ರಿಕೆಟ್ ಅನ್ನು ಮೇಲ್ಪಂಕ್ತಿಗೇರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ