Mark Chapman: ಅಂದು ಹಾಂಕಾಂಗ್ ಬ್ಯಾಟ್ಸ್​ಮನ್, ಇಂದು ನ್ಯೂಜಿಲೆಂಡ್ ಆಲ್​ರೌಂಡರ್

| Updated By: ಝಾಹಿರ್ ಯೂಸುಫ್

Updated on: Aug 10, 2021 | 8:31 PM

T20 World Cup: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟ್ಲೆ, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್​ಮನ್, ಡೆವೊನ್ ಕಾನ್ವೇ, ಲುಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್

Mark Chapman: ಅಂದು ಹಾಂಕಾಂಗ್ ಬ್ಯಾಟ್ಸ್​ಮನ್, ಇಂದು ನ್ಯೂಜಿಲೆಂಡ್ ಆಲ್​ರೌಂಡರ್
Mark Chapman
Follow us on

ಟಿ20 ವಿಶ್ವಕಪ್​ಗಾಗಿ ಸಿದ್ಧತೆಗಳು ಆರಂಭವಾಗಿವೆ. ಇದರ ಮೊದಲ ಹೆಜ್ಜೆ ಎಂಬಂತೆ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ತಂಡವನ್ನು ಪ್ರಕಟಿಸಿದೆ. ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಯುಎಇ ಮತ್ತು ಒಮಾನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಇದಕ್ಕಾಗಿ, ನ್ಯೂಜಿಲೆಂಡ್ ತನ್ನ 15 ಸದಸ್ಯರ ತಂಡವನ್ನು ಘೋಷಿಸಿದೆ. ಇದರಲ್ಲಿ 2014 ಟಿ20 ವಿಶ್ವಕಪ್ ನಲ್ಲಿ ಹಾಂಕಾಂಗ್ ಪರ ಆಡಿದ ಬ್ಯಾಟ್ಸ್ ಮನ್ ಕೂಡ ಇರುವುದು ವಿಶೇಷ. ಹೌದು, ನ್ಯೂಜಿಲೆಂಡ್​ ತಂಡದಲ್ಲಿ ಸ್ಥಾನ ಪಡೆದಿರುವ ಮಾರ್ಕ್ ಚಾಪ್​ಮನ್ ಈ ಹಿಂದೆ ಹಾಂಕಾಂಗ್ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ನ್ಯೂಜಿಲೆಂಡ್ ತಂಡದ ಮೂಲಕ ವಿಶ್ವಕಪ್​ನಲ್ಲಿ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಹೊರಟಿದ್ದಾರೆ.

ಚಾಪ್​ಮನ್​ ಹುಟ್ಟಿದ್ದು ಹಾಂಕಾಂಗ್ ನಲ್ಲಿ. ಆದರೆ ಅವರ ತಂದೆ ನ್ಯೂಜಿಲೆಂಡ್‌ ಮೂಲದವರು. ಹೀಗಾಗಿ ಕಿವೀಸ್ ತಂಡದಲ್ಲಿ ಆಡುವ ಅವಕಾಶವನ್ನು ಪಡೆದರು. ಹಾಂಕಾಂಗ್​ ತಂಡದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಚಾಪ್​ಮನ್ 2015 ರಲ್ಲಿ ಯುಎಇ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಅಜೇಯ 124 ರನ್ ಬಾರಿಸಿ ಅಬ್ಬರಿಸಿದ್ದರು. ಆ ಬಳಿಕ ನ್ಯೂಜಿಲೆಂಡ್​ನತ್ತ ಮುಖ ಮಾಡಿದ್ದ ಯುವ ಬ್ಯಾಟ್ಸ್​ಮನ್ ದೇಶೀಯ ಕ್ರಿಕೆಟ್ ನಲ್ಲಿ ಆಕ್ಲೆಂಡ್ ಪರ ಹೊಸ ಇನಿಂಗ್ಸ್ ಆರಂಭಿಸಿದರು.

2017-18ರ ದೇಶೀಯ ಸೀಸನ್​ನಲ್ಲಿ ಕಣಕ್ಕಿಳಿದು ಆಲ್​ರೌಂಡರ್ ಆಟದ ಮೂಲಕ ಗಮನ ಸೆಳೆದರು. ಅದರಲ್ಲೂ ಸೂಪರ್ ಸ್ಮ್ಯಾಶ್ ಟೂರ್ನಿಯಲ್ಲಿ 300 ರನ್ ಮತ್ತು ಫೋರ್ಡ್ ಟ್ರೋಫಿಯಲ್ಲಿ 400 ಕ್ಕೂ ಹೆಚ್ಚು ರನ್ ಬಾರಿಸಿದ್ದರು. ಈ ಪ್ರದರ್ಶನದಿಂದಾಗಿ, ಅವರು 2018 ರಲ್ಲಿ ಮೊದಲ ಬಾರಿಗೆ ಟಿ 20 ಸರಣಿಗೆ ನ್ಯೂಜಿಲೆಂಡ್ ತಂಡದಲ್ಲಿ ಆಲ್​ರೌಂಡರ್ ಆಗಿ ಸ್ಥಾನ ಪಡೆದರು. ಆದರೆ ತಂಡದ ಖಾಯಂ ಸದಸ್ಯರಾಗಲು ಸಾಧ್ಯವಾಗಿರಲಿಲ್ಲ. ಇದೀಗ ಭರ್ಜರಿ ಪ್ರದರ್ಶನದೊಂದಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದುವರೆಗೆ 30 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಚಾಪ್​ಮನ್ ಕಾಣಿಸಿಕೊಂಡಿದ್ದಾರೆ . ಈ ಪೈಕಿ 19 ಪಂದ್ಯಗಳನ್ನು ಹಾಂಕಾಂಗ್ ಪರ ಆಡಿದರೆ, 11 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಕಿವೀಸ್ ಪರ 143 ರನ್​ಗಳಿಸಿದರೆ, ಹಾಂಕಾಂಗ್‌ಗಾಗಿ 392 ರನ್ ಬಾರಿಸಿದ್ದಾರೆ. ಇದೀಗ ಹೊಸ ಆರಂಭದ ಉತ್ಸಾಹದಲ್ಲಿರುವ ಯುವ ಆಲ್​ರೌಂಡರ್ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ.

ನ್ಯೂಜಿಲೆಂಡ್ ಟಿ20 ವಿಶ್ವಕಪ್ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಟ್ಲೆ, ಟ್ರೆಂಟ್ ಬೋಲ್ಟ್, ಮಾರ್ಕ್ ಚಾಪ್​ಮನ್, ಡೆವೊನ್ ಕಾನ್ವೇ, ಲುಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಕೈಲ್ ಜೆಮಿಸನ್, ಡ್ಯಾರೆಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್​ (ವಿಕೆಟ್ ಕೀಪರ್), ಇಶ್ ಸೋಧಿ, ಟಿಮ್ ಸೌಥಿ.

ಇದನ್ನೂ ಓದಿ: IPL 2021: ಐಪಿಎಲ್​ಗಾಗಿ 2 ತಂಡ ಕಟ್ಟಿದ್ದ ನ್ಯೂಜಿಲೆಂಡ್..!

ಇದನ್ನೂ ಓದಿ: IPL 2021: ಐಪಿಎಲ್​ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?

(Mark Chapman represented Hong Kong in the 2014 T20 World Cup now he will represent New Zealand)