10 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿ ದಾಖಲೆ ಬರೆದ ಮಾರ್ನಸ್ ಲಾಬುಶೇನ್

|

Updated on: Jul 21, 2024 | 8:51 AM

Marnus Labuschagne: ಆಸ್ಟ್ರೇಲಿಯಾದ ಟೆಸ್ಟ್ ಸ್ಪಷಲಿಸ್ಟ್ ಮಾರ್ನಸ್ ಲಾಬುಶೇನ್ ಟಿ20 ಟೂರ್ನಿಯಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅದು ಕೂಡ ಕೇವಲ 10 ಎಸೆತಗಳ ಮೂಲಕ ಎಂಬುದು ವಿಶೇಷ. ಅಂದರೆ 2.3 ಓವರ್​ಗಳನ್ನು ಎಸೆದಿದ್ದ ಲಾಬುಶೇನ್ ಬ್ಯಾಕ್ ಟು ಬ್ಯಾಕ್ ವಿಕೆಟ್​ಗಳನ್ನು ಕಬಳಿಸುವ ಮೂಲಕ ಸೋಮರ್​ಸೆಟ್ ತಂಡವನ್ನು 13.3 ಓವರ್​ಗಳಲ್ಲಿ 123 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್​ ಟೂರ್ನಿಯಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾ ಆಟಗಾರ ಮಾರ್ನಸ್ ಲಾಬುಶೇನ್ ಹೊಸ ದಾಖಲೆ ಬರೆದಿದ್ದಾರೆ. ಕಾರ್ಡಿಫ್​ನ ಸೋಷಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಗ್ಲಾಮೊರ್ಗಾನ್ ಮತ್ತು ಸೋಮರ್‌ಸೆಟ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಗ್ಲಾಮೊರ್ಗಾನ್ ತಂಡವು ನಾಯಕ ಕೀರನ್ ಕಾರ್ಲ್ಸನ್ (135) ಅವರ ಸ್ಪೋಟಕ ಶತಕದ ನೆರವಿನಿಂದ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 243 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೋಮರ್​ಸೆಟ್ ತಂಡವು 9 ಓವರ್​ಗಳಲ್ಲಿ 92 ರನ್ ಬಾರಿಸಿದ್ದರು. ಆದರೆ 10ನೇ ಓವರ್​ನಲ್ಲಿ ದಾಳಿಗಿಳಿದ ಮಾರ್ನಸ್ ಲಾಬುಶೇನ್ ಇಡೀ ಪಂದ್ಯದ ಚಿತ್ರಣ ಬದಲಿಸಿಬಿಟ್ಟರು.

ಪಾರ್ಟ್ ಟೈಮ್ ಸ್ಪಿನ್ನರ್ ಆಗಿ ಕಾಣಿಸಿಕೊಂಡ ಮಾರ್ನಸ್ 10ನೇ ಓವರ್​ನ ಮೊದಲ 5 ಎಸೆತಗಳಲ್ಲಿ ಯಾವುದೇ ವಿಕೆಟ್ ಪಡೆದಿರಲಿಲ್ಲ. ಆದರೆ ಕೊನೆಯ ಎಸೆತದಲ್ಲಿ ಜಾರ್ಜಿ (7) ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ 11ನೇ ಓವರ್​ನಲ್ಲಿ ಹಿಂತಿರುಗಿದ ಮಾರ್ನಸ್ ಮೊದಲ ಎಸೆತದಲ್ಲಿ ಬೆನ್ ಗ್ರೀನ್ ಅವರ ವಿಕೆಟ್ ಪಡೆದರು. ಹಾಗೆಯೇ 4ನೇ ಎಸೆತದಲ್ಲಿ ರಿಲೇ ಮೆರಿಡಿತ್ ವಿಕೆಟ್ ಕಬಳಿಸಿದರು. 6ನೇ ಎಸೆತದಲ್ಲಿ ಜ್ಯಾಕ್ ಲೀಚ್ ಬೌಲ್ಡ್ ಆದರು. 13ನೇ ಓವರ್​ನ ಮೂರನೇ ಎಸೆತದ ಮೂಲಕ ಜಾಕ್ ಬಾಲ್​ (8) ರನ್ನು ಬೌಲ್ಡ್ ಮಾಡಿದರು. ಈ ಮೂಲಕ ಕೇವಲ 2.3 ಓವರ್​ಗಳಲ್ಲಿ ಕೇವಲ 11 ರನ್ ನೀಡಿ ಮಾರ್ನಸ್ ಲಾಬುಶೇನ್ 5 ವಿಕೆಟ್​ಗಳ ಸಾಧನೆ ಮಾಡಿದರು. ಇದರೊಂದಿಗೆ ಗ್ಲಾಮೊರ್ಗಾನ್ ಪರ ಅತೀ ಕಡಿಮೆ ರನ್ ನೀಡಿ 5 ವಿಕೆಟ್​ ಪಡೆದ ಬೌಲರ್ ಎಂಬ ದಾಖಲೆ ಕೂಡ ಮಾರ್ನಸ್ ಪಾಲಾಯಿತು.

 

 

Published on: Jul 21, 2024 08:50 AM