Mayank Agarwal: ಪೊಲೀಸ್ ದೂರು ದಾಖಲಿಸಿದ ಮಯಾಂಕ್ ಅಗರ್ವಾಲ್

| Updated By: ಝಾಹಿರ್ ಯೂಸುಫ್

Updated on: Jan 31, 2024 | 9:53 AM

Mayank Agarwal: ಕರ್ನಾಟಕ ರಣಜಿ ತಂಡ ಫೆಬ್ರವರಿ 2 ರಂದು ರೈಲ್ವೇಸ್ ವಿರುದ್ಧ ಕಣಕ್ಕಿಳಿಯಲಿದೆ. ಇದೀಗ ಆಸ್ಪತ್ರೆಯಲ್ಲಿರುವ ಮಯಾಂಕ್ ಅಗರ್ವಾಲ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ತ್ರಿಪುರಾದಿಂದ ಅವರ ನೇರವಾಗಿ ಬೆಂಗಳೂರಿಗೆ ಬರಲಿದ್ದಾರೆ ಎಂದು ವರದಿಯಾಗಿದೆ

Mayank Agarwal: ಪೊಲೀಸ್ ದೂರು ದಾಖಲಿಸಿದ ಮಯಾಂಕ್ ಅಗರ್ವಾಲ್
Mayank Agarwal
Follow us on

ವಿಮಾನ ಪ್ರಯಾಣದ ವೇಳೆ ಅಸ್ವಸ್ಥಗೊಂಡಿದ್ದ ಕರ್ನಾಟಕ ತಂಡದ ಆಟಗಾರ ಮಯಾಂಕ್ ಅಗರ್ವಾಲ್ (Mayank Agarwal) ಇದೀಗ NCCPS ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಣಜಿ ಪಂದ್ಯವಾಡಲು ತ್ರಿಪುರದಿಂದ ಗುಜರಾತ್​ಗೆ ತೆರಳಬೇಕಿದ್ದ ವಿಮಾನದಲ್ಲಿ ಮಯಾಂಕ್ ದ್ರವ ಪದಾರ್ಥವನ್ನು (ನೀರಿನ ಮಾದರಿ) ಸೇವಿಸಿದ್ದರು. ಇದರ ಬೆನ್ನಲ್ಲೇ ಅವರು  ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಪ್ರಾಣಪಾಯದಿಂದ ಪಾರಾಗಿರುವ ಮಯಾಂಕ್ ಅಗರ್ವಾಲ್ ತನ್ನ ಮ್ಯಾನೇಜರ್ ಮೂಲಕ ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಏನಿದು ಘಟನೆ?

ತ್ರಿಪುರ ವಿರುದ್ಧದ ರಣಜಿ ಪಂದ್ಯದ ಬಳಿಕ ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವಾಡಲು ಗುಜರಾತ್​ಗೆ ತೆರಳಬೇಕಿತ್ತು. ಅಲ್ಲದೆ ಸೂರತ್​ಗೆ ತೆರಳಲು ಇಂಡಿಗೋ ವಿಮಾನ ಹತ್ತಿದ್ದರು. ಈ ವೇಳೆ ವಿಮಾನದಲ್ಲಿ ಇಡಲಾಗಿದ್ದ ದ್ರವ ಪದಾರ್ಥವನ್ನು ಮಯಾಂಕ್ ಅಗರ್ವಾಲ್ ಕುಡಿದಿದ್ದಾರೆ.

ಇದರ ಬೆನ್ನಲ್ಲೇ ಅವರ ಗಂಟಲಿನಲ್ಲಿ ಉರಿಯ ಅನುಭವವಾಗಿದೆ. ಅಲ್ಲದೆ ಬಾಯಿ ಮತ್ತು ನಾಲಿಗೆ ಸುಟ್ಟಂತಹ ಅನುಭವ ಉಂಟಾಗಿದೆ. ಇದರಿಂದ ಅಸ್ವಸ್ಥಗೊಂಡ ಮಯಾಂಕ್ ಅವರನ್ನು ಕೂಡಲೇ ಎಎಲ್​ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಈ ಬಗ್ಗೆ ತನಿಖೆ ನಡೆಸಲು ಮಯಾಂಕ್ ದೂರು ನೀಡಿದ್ದಾರೆ.

ಚೇತರಿಸಿಕೊಂಡಿರುವ ಮಯಾಂಕ್:

ಎಎಲ್​ಎಸ್ ಆಸ್ಪತ್ರೆ ಮಯಾಂಕ್ ಅಗರ್ವಾಲ್ ಅವರ ಆರೋಗ್ಯದ ಮಾಹಿತಿಯನ್ನು ಹಂಚಿಕೊಂಡಿದ್ದು, ಈ ಮಾಹಿತಿಯಂತೆ ಇದೀಗ ಕರ್ನಾಟಕದ ಆಟಗಾರ ಚೇತರಿಸಿಕೊಂಡಿದ್ದಾರೆ. ವಿಮಾನದಲ್ಲಿ ಇರಿಸಲಾಗಿದ್ದ ದ್ರವ ಪದಾರ್ಥವನ್ನು ಕುಡಿದಿದ್ದರಿಂದ ಅವರ ಬಾಯಲ್ಲಿ ಊತ ಮತ್ತು ಗುಳ್ಳೆಗಳಾಗಿದ್ದವು. ಇದೀಗ ಅವರು ಚೇತರಿಸಿಕೊಂಡಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಇದೀಗ ಚೇತರಿಸಿಕೊಂಡಿರುವ ಮಯಾಂಕ್ ಅಗರ್ವಾಲ್ ತಮ್ಮ ಮ್ಯಾನೇಜರ್ ನೆರವಿನಿಂದ NCCPS ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ನಾವು ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದೇವೆ ಎಂದು ಪಶ್ಚಿಮ ತ್ರಿಪುರ ಎಸ್​ಪಿ ಕಿರಣ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: IPL 2024: RCB ಗೆ ವಿಂಡೀಸ್ ವೇಗಿ?

ಮುಂದಿನ ಪಂದ್ಯಕ್ಕೆ ಅಲಭ್ಯ:

ಕರ್ನಾಟಕ ರಣಜಿ ತಂಡ ಫೆಬ್ರವರಿ 2 ರಂದು ರೈಲ್ವೇಸ್ ವಿರುದ್ಧ ಕಣಕ್ಕಿಳಿಯಲಿದೆ. ಇದೀಗ ಆಸ್ಪತ್ರೆಯಲ್ಲಿರುವ ಮಯಾಂಕ್ ಅಗರ್ವಾಲ್ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ತ್ರಿಪುರಾದಿಂದ ಅವರ ನೇರವಾಗಿ ಬೆಂಗಳೂರಿಗೆ ಬರಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಕರ್ನಾಟಕ ತಂಡದ ಮುಂದಿನ ಪಂದ್ಯಗಳಿಂದ ಮಯಾಂಕ್ ಅಗರ್ವಾಲ್ ಹೊರಗುಳಿಯುವ ಸಾಧ್ಯತೆಯಿದೆ.

 

 

Published On - 9:49 am, Wed, 31 January 24