ಕ್ರಿಕೆಟ್ ಲೋಕಕ್ಕೆ ಕೊರೊನಾ (Corona Virus) ಕಾಟ ಬೆಂಬಿಡದೆ ಕಾಡುತ್ತಿದೆ. ಇದೀಗ ಟೀಮ್ ಇಂಡಿಯಾಕ್ಕೆ ಇದರ ಕರಿನೆರಳು ಬೀರಿದ್ದು, ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಏಕದಿನ ಸರಣಿ ಆರಂಭಕ್ಕೂ ಮುನ್ನ ಭಾರತದ ಮೂವರು ಆಟಗಾರರಿಗೆ ಮತ್ತು ಸಹಾಯಕ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೊರೊನಾ ವೈರಸ್ ದೃಢಪಟ್ಟ ಆಟಗಾರರ ಪೈಕಿ ಅನುಭವಿ ಶಿಖರ್ ಧವನ್, ಯುವ ಕ್ರಿಕೆಟಿಗ ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ ಹಾಗೂ ಸ್ಯಾಂಡ್ಬೈ ಬೌಲರ್ ನವ್ದೀಪ್ ಸೈನಿ ಆಗಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಇದರ ಜೊತೆಗೆ ಮತ್ತೊಬ್ಬ ಹೊಸ ಆಟಗಾರ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ಬಿಸಿಸಿಐ (BCCI) ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, “ಆರ್ಟಿ-ಪಿಸಿಆರ್ ಟೆಸ್ಟ್ನಲ್ಲಿ ಭಾರತದ 7 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದ ನಂತರ ಭಾರತ ಏಕದಿನ ತಂಡಕ್ಕೆ ಹಿರಿಯ ಆಯ್ಕೆ ಸಮಿತಿ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಿದೆ,” ಎಂದು ಬಿಸಿಸಿಐ ತಿಳಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಅಹ್ಮದಾಬಾದ್‌ಗೆ ತೆರಳುವ ಮುನ್ನ ಮನೆಯಲ್ಲಿ ಭಾರತದ ಎಲ್ಲ ಆಟಗಾರರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿತ್ತು. ಅದರಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿತ್ತು. ನಂತರ ಜ. 31 ಸೋಮವಾರ ನಡೆಸಿದ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಮೊದಲು ಧವನ್ ಮತ್ತು ನವ್ದೀಪ್ ಸೈನಿಗೆ ಪಾಸಿಟಿವ್ ಬಂದಿದೆ. ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಮತ್ತು ಮತ್ತೊಬ್ಬರಿಗೆ ಕೊರೊನಾ ದೃಢಪಟ್ಟಿದೆ. ಫೆ. 1 ರಂದು ರುತುರಾಜ್ ಗಾಯಕ್ವಾಡ್ಗೆ ಫೆ. 2 ರಂದು ಶ್ರೇಯಸ್ ಅಯ್ಯರ್ ಮತ್ತು ಸ್ಫೋಟರ್ಸ್ ಮಸಾಜ್ ಥೆರಪಿಯವರಾದ ರಾಜೀವ್ ಕುಮಾರ್ಗೆ ಪಾಸಿಟಿವ್ ಕಂಡುಬಂದಿದೆ ಎಂದು ಬಿಸಿಸಿಐ ಹೇಳಿದೆ.
ಮೂರು ಪಂದ್ಯಗಳ ಏಕದಿನ ಸರಣಿಯು ಅಹ್ಮದಾಬಾದ್‌ನಲ್ಲಿ ಫೆ.6 ರಿಂದ ಆರಂಭವಾಗಲಿದೆ. ಇದು ಭಾರತದ 1000ನೇ ಏಕದಿನ ಪಂದ್ಯವಾಗಿದೆ. ಹೀಗಿರುವಾಗ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿ ವರ್ಗದವರಿಗೆ ಕೊರೊನಾ ಇರುವುದು ಬುಧವಾರ ಗೊತ್ತಾಗಿದೆ. ಉಭಯ ತಂಡಗಳು ಒಂದೇ ಹೊಟೇಲ್‌ನಲ್ಲಿ ತಂಗಿದ್ದು ಪ್ರತ್ಯೇಕ ಮಹಡಿಯಲ್ಲಿವೆ. ಬಿಸಿಸಿಐ ಗುರುವಾರ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪಾಸಿಟಿವ್ ಆದವರು ಕೊಠಡಿಗಳಲ್ಲಿ ಪ್ರತ್ಯೇಕವಾಗುಳಿದು, ಸರಕಾರದ ಮಾರ್ಗಸೂಚಿಯನ್ನು ಪಾಲಿಸಲಿದ್ದಾರೆ ಎನ್ನಲಾಗಿದೆ.
ಅಹ್ಮದಾಬಾದ್‌ಗೆ ಬಂದಿಳಿದ ವೆಸ್ಟ್ ಇಂಡೀಸ್ ತಂಡ:
ಭಾರತ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗಾಗಿ ವೆಸ್ಟ್ ಇಂಡೀಸ್ ತಂಡ ಅಹ್ಮದಾಬಾದ್‌ಗೆ ಆಗಮಿಸಿದೆ.“ಎರಡು ದಿನಗಳ ಸುದೀರ್ಘ ಪ್ರಯಾಣದ ಬಳಿಕ ಮೆನ್ ಇನ್ ಮರೂನ್ ಪಡೆ ಬಾರ್ಬಡಾಸ್‌ನಿಂದ ಭಾರತಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ’ ಎಂಬುದಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಟ್ವೀಟ್ ಮಾಡಿದೆ. ಕ್ರಿಕೆಟಿಗರು ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಣ ಈ ಸರಣಿಯ ಮೂರು ಏಕದಿನ ಪಂದ್ಯಗಳನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂ ಆಗಿ ಹೊಸ ವಿನ್ಯಾಸ ಪಡೆದ ಬಳಿಕ ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್ ಸರಣಿಗೆ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಇದಾದ ಬಳಿಕ ಟಿ20 ಸರಣಿಯ 3 ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆಯೋಜನೆಯಾಗಲಿದೆ.
U19 World Cup: ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್-ಬೌಲಿಂಗ್ನಲ್ಲಿ ಧೂಳೆಬ್ಬಿಸಿದ ಯಶ್ ಪಡೆ: ಫೈನಲ್ಗೇರಿದ ಭಾರತ ತಂಡ