U19 World Cup: ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್-ಬೌಲಿಂಗ್​ನಲ್ಲಿ ಧೂಳೆಬ್ಬಿಸಿದ ಯಶ್ ಪಡೆ: ಫೈನಲ್​ಗೇರಿದ ಭಾರತ ತಂಡ

India U19 vs Australia U19: ಐಸಿಸಿ ಅಂಡರ್ – 19 ವಿಶ್ವಕಪ್ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ನಾಯಕ ಯಶ್ ಧುಲ್ ಅವರ ಉಪಯುಕ್ತವಾದ ಶತಕ ಹಾಗೂ ಬೌಲರ್​​ಗಳ ಸಂಘಟಿತ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ ಅಂಡರ್ – 19 ತಂಡ 96 ರನ್​ಗಳ ಗೆಲುವು ದಾಖಲಿಸಿ ಫೈನಲ್​ಗೆ ಲಗ್ಗೆಯಿಟ್ಟಿದೆ.

U19 World Cup: ಆಸ್ಟ್ರೇಲಿಯಾ ಎದುರು ಬ್ಯಾಟಿಂಗ್-ಬೌಲಿಂಗ್​ನಲ್ಲಿ ಧೂಳೆಬ್ಬಿಸಿದ ಯಶ್ ಪಡೆ: ಫೈನಲ್​ಗೇರಿದ ಭಾರತ ತಂಡ
India U19 vs Australia U19
Follow us
TV9 Web
| Updated By: Vinay Bhat

Updated on: Feb 03, 2022 | 7:33 AM

ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ – 19 ವಿಶ್ವಕಪ್ (ICC Under 19 World Cup 2022) ಟೂರ್ನಿ ಫೈನಲ್​ಗೆ ಭಾರತ ಅಂಡರ್ – 19 ತಂಡ ಲಗ್ಗೆಯಿಟ್ಟಿದೆ. ಬುಧವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಸೆಮಿ ಫೈನಲ್ ಕದನದಲ್ಲಿ ಯಶ್ ಧುಲ್ ಪಡೆ ಅಮೋಘ ಬ್ಯಾಟಿಂಗ್ – ಬೌಲಿಂಗ್ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಿದೆ. ನಾಯಕನ ಉಪಯುಕ್ತವಾದ ಶತಕ ಹಾಗೂ ಬೌಲರ್​​ಗಳ ಸಂಘಟಿತ ಪ್ರದರ್ಶನದಿಂದ ಆಸ್ಟ್ರೇಲಿಯಾ ವಿರುದ್ಧ ಭಾರತ ಅಂಡರ್ – 19 ತಂಡ (India U19 vs Australia U19) 96 ರನ್​ಗಳ ಗೆಲುವು ದಾಖಲಿಸಿತು. ಇತ್ತ ಇಂಗ್ಲೆಂಡ್ ಅಂಡರ್-19 ತಂಡ ಡಕ್ವರ್ತ್ ನಿಯಮದ ಪ್ರಕಾರ ಅಫ್ಘಾನಿಸ್ತಾನ ವಿರುದ್ಧ 15 ರನ್​ಗಳ ಜಯಕಂಡು ಫೈನಲ್ ಪ್ರವೇಶಿಸಿತು. ಫೆಬ್ರವರಿ 5 ರಂದು ಶನಿವಾರ ಭಾರತ ಹಾಗೂ ಇಂಗ್ಲೆಂಡ್ (India U19 vs England U19 ) ನಡುವೆ ಪ್ರಶಸ್ತಿಗಾಗಿ ಅಂತಿಮ ಕಾದಾಟ ನಡೆಯಲಿದೆ. ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಮೊದಲು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

ಹೀಗೆ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಅಂಡರ್-19 ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲೇ ಆರಂಭಿಕರಿಬ್ಬರು ಕೂಡ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿಕೊಂಡಿದ್ದರು. ಅಂಕ್ರಿಶ್ ರಘುವಂಶಿ 30 ಎಸೆತಗಳಲ್ಲಿ 6 ರನ್‌ಗಳಿಸಿ ಔಟಾದರೆ ಹರ್ನೂರ್ ಸಿಂಗ್ 16 ರನ್‌ಗಳ ಕೊಡುಗೆಯನ್ನು ಮಾತ್ರವೇ ನೀಡಿದರು. ಈ ಮೂಲಕ ಆಸ್ಟ್ರೇಲಿಯಾದ ಬೌಲಿಂಗ್ ಪಡೆ ಭಾರತದ ವಿರುದ್ಧ ಉತ್ತಮ ಮೇಲುಗೈ ಸಾಧಿಸುವ ವಿಶ್ವಾಸ ಮೂಡಿಸಿತ್ತು. ಆದರೆ, ನಂತರ ಆಸೀಸ್ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ನಾಯಕ ಯಶ್ ಧುಲ್ ಹಾಗೂ ಶೇಕ್ ರಶೀದ್.

ಹೌದು, ಯಶ್ ಹಾಗೂ ರಶೀದ್ ಆಡಿದ ಅಮೋಘ ಆಟ ಆಸೀಸ್ ಬೌಲರ್‌ಗಳನ್ನು ಕಂಗೆಡುವಂತೆ ಮಾಡಿತು. ಇಬ್ಬರು ಕೂಡ ನಿಧಾನವಾಗಿ ಇನ್ನಿಂಗ್ಸ್ ಕಟ್ಟುತ್ತಾ ಸಾಗಿದರು. ತಂಡಕ್ಕೆ ಎಲ್ಲೂ ಆಘಾತವಾಗದಂತೆ ನೋಡಿಕೊಳ್ಳುವಲ್ಲಿ ಈ ಆಟಗಾರರು ಯಶಸ್ವಿಯಾದರು. ಈ ಜೋಡಿಯಿಂದ ಭರ್ಜರಿ ದ್ವಿಶತಕದ ಜೊತೆಯಾಟ (204 ರನ್) ದಾಖಲಾಯಿತು. ನಾಯಕ ಯಶ್ ಧುಲ್ ಭರ್ಜರಿ ಶತಕ ದಾಖಲಿಸಿದರೆ, ರಶೀದ್ 94 ರನ್‌ಗಳಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಶತಕ ವಂಚಿತವಾದರು.

ತಂಡದ ಮೊತ್ತ 241 ರನ್‌ಗಳಾಗುವಷ್ಟರಲ್ಲಿ ಈ ಜೋಡಿ ಬೇರ್ಪಟ್ಟಿತು. ಇದಾದ ಬಳಿಕ ಅಂತಿಮ ಓವರ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಬಾನಾ ನಾಲ್ಕು ಎಸೆತಗಳನ್ನು ಎದುರಿಸಿ 20 ರನ್ ದೋಚುವ ಮೂಲಕ ತಂಡದ ಮೊತ್ತ 290 ತಲುಪಲು ಕಾರಣವಾದರು. ಯಶ್ 110 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಿಡಿಸಿ 110 ರನ್ ಬಾರಿಸಿದರು.

ಇತ್ತ 291 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ 100 ರನ್ ಆಗುವ ಹೊತ್ತಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ತಂಡದ ಪರ ಲಚ್ಲನ್ ಶಾ 51 ರನ್ ಗಳಿಸಿದರೆ, ಕೋರೆ ಮಿಲ್ಲರ್ 38 ಮತ್ತು ಕ್ಯಾಂಪ್​ಬೆಲ್ 30 ರನ್ ಗಳಿಸಿದ್ದೇ ಹೆಚ್ಚು. ಭಾರತೀಯರ ಬೌಲಿಂಗ್ ದಾಳಿಗೆ 41.5 ಓವರ್​ನಲ್ಲಿ 194 ರನ್​ಗೆ ಸರ್ವಪತನ ಕಂಡಿತು. ಭಾರತ ಪರ ವಿಕ್ಕಿ ಒತ್ಸವ್ 3 ವಕೆಟ್ ಕಿತ್ತರೆ, ನಿಶಾಂತ್ ಸಿಂಧು ಮತ್ತು ರವಿ ಕಮಾರ್ ತಲಾ 2 ವಿಕೆಟ್ ಪಡೆದರು.

ಅಂಡರ್ 19 ವಿಶ್ವಕಪ್‌ನಲ್ಲಿ ನಾಲ್ಕು ಬಾರಿಯ ಚಾಂಪಿಯನ್ ತಂಡವಾಗಿರುವ ಭಾರತ ಇದೀಗ ಐದನೇ ಬಾರಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಅವಕಾಶ ಬಂದೊದಗಿದೆ. ಇದೇ ಶನಿವಾರದಂದು ಬಲಿಷ್ಠ ಇಂಗ್ಲೆಂಡ್ ವಿರುದ್ಧ ಫೈನಲ್ ಫೈಟ್​ನಲ್ಲಿ ಮುಖಾಮುಖಿ ಆಗಲಿದೆ.

IPL 2022 Auction: ಐಪಿಎಲ್ ಅಂಗಳದಲ್ಲಿ ಜೂನಿಯರ್ ಮಾಲಿಂಗ