ಹಾರ್ದಿಕ್ ಪಾಂಡ್ಯ (Hardik Pandya) ಅಪರೂಪದ ಆಲ್ರೌಂಡರ್…ಅವರು ಮೈದಾನದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ…ಹೀಗೆ ಹಾರ್ದಿಕ್ ಪಾಂಡ್ಯ ಬಗ್ಗೆ ಇತ್ತೀಚೆಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ವ್ಯಂಗ್ಯವಾಡಿದ್ದರು. ಇದಕ್ಕೆ ಮುಖ್ಯ ಕಾರಣ ಭಾರತ ತಂಡದ ಪ್ರಮುಖ ಟೂರ್ನಿಗಳಿಗೆ ಪಾಂಡ್ಯ ಕೈಕೊಡುತ್ತಾ ಬಂದಿರುವುದು. ಆದರೆ ಇತ್ತ ಅವರ ಸ್ಥಾನ ತುಂಬಬಲ್ಲ ಮತ್ತೋರ್ವ ಆಲ್ರೌಂಡರ್ ಇಲ್ಲದಿರುವುದು ಪಾಂಡ್ಯ ಪಾಲಿಗೆ ವರವಾಗುತ್ತಾ ಬಂದಿದೆ.
ಆದರೀಗ ಹಾರ್ದಿಕ್ ಪಾಂಡ್ಯಗೆ ಸವಾಲೆಸೆಯಬಲ್ಲ ವೇಗದ ಬೌಲರ್ರೊಬ್ಬನ ಎಂಟ್ರಿಯಾಗಿದೆ. ಅದು ಕೂಡ ಅಂಡರ್-19 ಏಷ್ಯಾಕಪ್ ಮೂಲಕ ಎಂಬುದು ವಿಶೇಷ.
ಹೆಸರು ಅರ್ಶಿನ್ ಕುಲ್ಕರ್ಣಿ. ಮಧ್ಯಮ ವೇಗದ ಬೌಲಿಂಗ್ ಆಲ್ರೌಂಡರ್. ಅಂಡರ್-14 ಮಹಾರಾಷ್ಟ್ರ ತಂಡದ ಪರ ಕಣಕ್ಕಿಳಿಯುವ ಮೂಲಕ ಕ್ರಿಕೆಟ್ ಕೆರಿಯರ್ ಆರಂಭಿಸಿರುವ ಅರ್ಶಿನ್ ಕುಲ್ಕರ್ಣಿ ಇದೀಗ ಟೀಮ್ ಇಂಡಿಯಾದಲ್ಲಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್ನ ಮೊದಲ ಪಂದ್ಯದಲ್ಲೇ ಅರ್ಶಿನ್ ಎಲ್ಲರ ಗಮನ ಸೆಳೆದಿದ್ದಾರೆ. ಅದು ಕೂಡ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನದ ಮೂಲಕ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 50 ಓವರ್ಗಳಲ್ಲಿ 173 ರನ್ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಬೆನ್ನತ್ತಲು ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸಿದ್ದು ಅರ್ಶಿನ್ ಕುಲ್ಕರ್ಣಿ ಹಾಗೂ ಆದರ್ಶ್ ಸಿಂಗ್.
ಕೇವಲ 14 ರನ್ಗಳಿಸಿ ಆದರ್ಶ್ ಔಟಾದರೆ, ಆ ಬಳಿಕ ಬಂದ ರುದ್ರ ಪಟೇಲ್ (5) ಹಾಗೂ ಉದಯ್ ಸಹರಾನ್ (20) ಕೂಡ ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಅರ್ಶಿನ್ ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಅಷ್ಟೇ ಅಲ್ಲದೆ ಅಜೇಯ 70 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು. ಈ ಜವಾಬ್ದಾರಿಯುತ ಬ್ಯಾಟಿಂಗ್ನಿಂದಾಗಿ ಇದೀಗ ಅರ್ಶಿನ್ ಎಲ್ಲರ ಗಮನ ಸೆಳೆದಿದ್ದಾರೆ.
ಅದರಲ್ಲೂ ವೇಗದ ಬೌಲಿಂಗ್ ಆಲ್ರೌಂಡರ್ ಆಗಿರುವ ಅರ್ಶಿನ್ ಆರಂಭಿಕನಾಗಿಯೂ ಮಿಂಚಿರುವುದು ಹೊಸ ಭರವಸೆ ಮೂಡಿಸಿದೆ. ಏಕೆಂದರೆ ಈ ಪಂದ್ಯದಲ್ಲಿ 8 ಓವರ್ಗಳನ್ನು ಬೌಲಿಂಗ್ ಮಾಡಿದ್ದ ಅರ್ಶಿನ್ ಕೇವಲ 29 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅಷ್ಟೇ ಅಲ್ಲದೆ ಆರಂಭಿಕನಾಗಿ ಅರ್ಧಶತಕವನ್ನೂ ಬಾರಿಸಿ ಭಾರತ ತಂಡಕ್ಕೆ ಜಯ ತಂದುಕೊಟ್ಟರು.
ಇತ್ತ ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರನ ಹುಡುಕಾಟದಲ್ಲಿರುವ ಆಯ್ಕೆ ಸಮಿತಿ ಮುಂದೆ ಹೊಸ ಆಯ್ಕೆಯೊಂದು ತೆರೆದುಕೊಂಡಿದೆ. ಇತ್ತ ಅಂಡರ್-19 ಏಷ್ಯಾಕಪ್ನಲ್ಲಿ ಮಿಂಚಿದರೆ ಅರ್ಶಿನ್ ಕುಲ್ಕರ್ಣಿಗೆ ಐಪಿಎಲ್ ಬಾಗಿಲು ತೆರೆದುಕೊಳ್ಳುವುದು ಖಚಿತ.
ಇದನ್ನೂ ಓದಿ: Virat Kohli: ಏಕದಿನದಲ್ಲಿ ರಿಕಿ ಪಾಂಟಿಂಗ್ ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ..!
ಹೀಗಾಗಿಯೇ ಈ ಬಾರಿಯ ಐಪಿಎಲ್ನಲ್ಲಿ ಅರ್ಶಿನ್ ಕುಲ್ಕರ್ಣಿಗೆ ಅವಕಾಶ ಸಿಕ್ಕರೆ, ಟೀಮ್ ಇಂಡಿಯಾದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಹೊಸ ಪ್ರತಿಸ್ಪರ್ಧಿ ಹುಟ್ಟಿಕೊಳ್ಳುವುದಂತು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾ ಪಾಲಿಗೆ ಚಿಂತೆಯಾಗಿದ್ದ ವೇಗದ ಬೌಲಿಂಗ್ ಆಲ್ರೌಂಡರ್ ಕೊರತೆಯನ್ನು ಅರ್ಶಿನ್ ಕುಲ್ಕರ್ಣಿ ನೀಗಿಸಲಿದ್ದಾರಾ ಕಾದು ನೋಡಬೇಕಿದೆ.