Hardik Pandya: ಹಾರ್ದಿಕ್ ಪಾಂಡ್ಯಗಾಗಿ 126 ದಿನಗಳ ಮಾಸ್ಟರ್ ಪ್ಲ್ಯಾನ್..!
ಟಿ20 ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ಈ ಎರಡು ಟಿ20 ಸರಣಿಗಳನ್ನಷ್ಟೇ ಆಡಬೇಕಿದೆ. ಆನಂತರ ಐಪಿಎಲ್ ಶುರುವಾಗಲಿದೆ. ಅಂದರೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ಐಪಿಎಲ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ನೆಸ್ ಸಾಧಿಸಬೇಕಿದೆ.
ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಮ್ ಇಂಡಿಯಾ (Team India) ಸೋಲಿನ ಬೆನ್ನಲ್ಲೇ ಇದೀಗ ಬಿಸಿಸಿಐ ಟಿ20 ವರ್ಲ್ಡ್ಕಪ್ಗಾಗಿ ಪ್ಲ್ಯಾನ್ ರೂಪಿಸುತ್ತಿದೆ. 2024 ರ ಜೂನ್ನಲ್ಲಿ ಭಾರತ ತಂಡವು T20 ವಿಶ್ವಕಪ್ ಟ್ರೋಫಿಗಾಗಿ ಉಳಿದ 19 ತಂಡಗಳೊಂದಿಗೆ ಸ್ಪರ್ಧಿಸಲಿದೆ. ಇದಕ್ಕಾಗಿ, ಈಗಾಗಲೇ ಟೀಮ್ ಇಂಡಿಯಾ ಆಟಗಾರರ ಮೇಲೆ ನಿಗಾಯಿಡಲು ಬಿಸಿಸಿಐ ನಿರ್ಧರಿಸಿದೆ. ಅದರಲ್ಲೂ ಗಾಯದಿಂದ ಬಳಲುತ್ತಿರುವ ಆಟಗಾರರ ಮೇಲೆ ಕಾಳಜಿವಹಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಬಿಸಿಸಿಐ ಇದೀಗ ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗಾಗಿ ವಿಶೇಷ ಯೋಜನೆ ರೂಪಿಸಿದೆ. ಈ ಯೋಜನೆಯ ಮೂಲಕ ಸಂಪೂರ್ಣ ಫಿಟ್ನೆಸ್ನೊಂದಿಗೆ ಪಾಂಡ್ಯರನ್ನು ಮತ್ತೆ ಮೈದಾನಕ್ಕೆ ಕರೆತರುವ ಇರಾದೆಯಲ್ಲಿದೆ.
ಪಾಂಡ್ಯಗೆ ಫಿಟ್ನೆಸ್ ಸಮಸ್ಯೆ:
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕಳೆದ ಒಂದು ವರ್ಷದಿಂದ ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾ ನಾಯಕತ್ವ ವಹಿಸಿರುವ ಹಾರ್ದಿಕ್ ಪಾಂಡ್ಯ ಸದ್ಯ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಹಾರ್ದಿಕ್ ಪಾದದ ಗಾಯಕ್ಕೆ ಒಳಗಾಗಿದ್ದರು. ಇದಾದ ಬಳಿಕ ಅವರು ಯಾವುದೇ ಪಂದ್ಯವಾಡಿಲ್ಲ. ಅಲ್ಲದೆ ಮುಂಬರುವ ಸೌತ್ ಆಫ್ರಿಕಾ, ಅಫ್ಘಾನಿಸ್ತಾನ್ ವಿರುದ್ಧದ ಸರಣಿಗಳಿಂದಲೂ ಹೊರಗುಳಿದಿದ್ದಾರೆ.
ಇನ್ನು ಪಾಂಡ್ಯ ಮೈದಾನಕ್ಕೆ ಮರಳುವುದು ಐಪಿಎಲ್ ವೇಳೆ ಎನ್ನಬಹುದು. ಅದಕ್ಕೂ ಮುನ್ನ ಅವರ ಫಿಟ್ನೆಸ್ ಮೇಲೆ ನಿಗಾವಹಿಸಲು ಬಿಸಿಸಿಐ ಎನ್ಸಿಎಗೆ ಸೂಚಿಸಿದೆ.
18 ವಾರಗಳ ಮಾಸ್ಟರ್ ಪ್ಲ್ಯಾನ್:
ಟಿ20 ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ಈ ಎರಡು ಟಿ20 ಸರಣಿಗಳನ್ನಷ್ಟೇ ಆಡಬೇಕಿದೆ. ಆನಂತರ ಐಪಿಎಲ್ ಶುರುವಾಗಲಿದೆ. ಅಂದರೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಆರಂಭವಾಗಲಿದೆ. ಹೀಗಾಗಿ ಐಪಿಎಲ್ಗೂ ಮುನ್ನ ಹಾರ್ದಿಕ್ ಪಾಂಡ್ಯ ಸಂಪೂರ್ಣ ಫಿಟ್ನೆಸ್ ಸಾಧಿಸಬೇಕಿದೆ. ಇದಕ್ಕಾಗಿ ಬಿಸಿಸಿಐ 18 ವಾರಗಳ ವಿಶೇಷ ಯೋಜನೆಯನ್ನು ರೂಪಿಸಿದ್ದು, ಈ ಮೂಲಕ ಹಾರ್ದಿಕ್ ಪಾಂಡ್ಯರ ಫಿಟ್ನೆಸ್ ಬಗ್ಗೆ ಕಾಳಜಿವಹಿಸಲು ಮುಂದಾಗಿದೆ.
ನ್ಯೂಸ್ 18 ವರದಿ ಪ್ರಕಾರ, ಹಾರ್ದಿಕ್‌ಗಾಗಿ 18 ವಾರಗಳ ಅಂದರೆ 126 ದಿನಗಳ ವಿಶೇಷ ಉನ್ನತ-ಕಾರ್ಯಕ್ಷಮತೆಯ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಈ ಯೋಜನೆಯಂತೆ ಸ್ಟಾರ್ ಆಲ್‌ರೌಂಡರ್ ಈಗಾಗಲೇ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವೈದ್ಯಕೀಯ ತಂಡ ಮತ್ತು ತರಬೇತುದಾರರು ಒಟ್ಟಾಗಿ ಈ ವಿಶೇಷ ಯೋಜನೆಯನ್ನು ರೂಪಿಸಿದ್ದು, ಇದು ಮಾರ್ಚ್ 2024 ರವರೆಗೆ ನಡೆಯಲಿದೆ.
ಪ್ರತಿದಿನ ಏನಾಗಬೇಕು ಮತ್ತು ಅದರಿಂದ ಏನನ್ನು ಸಾಧಿಸಬಹುದು, ಇದೆಲ್ಲವೂ ಆ ಯೋಜನೆಯ ಭಾಗವಾಗಿದೆ. ಈ ಮೂಲಕ ಹಾರ್ದಿಕ್ ಅವರ ಫಿಟ್ನೆಸ್, ಸಾಮರ್ಥ್ಯ ಮತ್ತು ದೇಹದ ಇತರ ಪ್ರಮುಖ ಅಗತ್ಯಗಳನ್ನು ಸುಧಾರಿಸಲು NCA ಗಮನಹರಿಸಲಿದೆ.
ಯಶಸ್ವಿಯಾಗಿದ್ದ ಫಿಟ್ನೆಸ್ ಯೋಜನೆ:
ಏಕದಿನ ವಿಶ್ವಕಪ್ ಆರಂಭಕ್ಕೂ ಮುನ್ನ ಹಲವು ಆಟಗಾರರು ಗಾಯಗೊಂಡಿದ್ದರು. ಆದರೆ ಬಿಸಿಸಿಐ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಮೇಲೆ ವಿಶೇಷ ನಿಗಾಯಿಡುವ ಮೂಲಕ ಫಿಟ್ನೆಸ್ ಯೋಜನೆಗಳನ್ನು ರೂಪಿಸಿದ್ದರು. ಇದರ ಫಲವಾಗಿ ಈ ಮೂವರು ಆಟಗಾರರು ಏಕದಿನ ವಿಶ್ವಕಪ್ ವೇಳೆಗೆ ಸಂಪೂರ್ಣ ಫಿಟ್ನೆಸ್ ಸಾಧಿಸಲು ಸಾಧ್ಯವಾಗಿತ್ತು.
ಇದನ್ನೂ ಓದಿ: ಪಾಕ್ ಪಡೆಯನ್ನು ಸದೆಬಡಿದು ವಿಶ್ವ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ
ಇದೀಗ ಹಾರ್ದಿಕ್ ಪಾಂಡ್ಯ ವಿಷಯದಲ್ಲೂ ಬಿಸಿಸಿಐ ಅಂತಹದ್ದೇ ಯೋಜನೆಯನ್ನು ರೂಪಿಸಿದೆ. ಈ ಮೂಲಕ ಹಾರ್ದಿಕ್ ಅವರನ್ನು ಮುಂಬರುವ ಪ್ರತಿಯೊಂದು ಪ್ರಮುಖ ಟೂರ್ನಿಯಲ್ಲಿ ತಂಡಕ್ಕೆ ಲಭ್ಯವಾಗುವಂತೆ ಮಾಡಲು ಪ್ಲ್ಯಾನ್ ರೂಪಿಸಲಾಗುತ್ತಿದೆ.