IPL 2022 ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 30 ಲಕ್ಷ ರೂ. ನೀಡಿ ಅರ್ಜುನ್ ತೆಂಡೂಲ್ಕರ್ ಅವರನ್ನು ಖರೀದಿಸಿತು. ಇದಕ್ಕೂ ಮುನ್ನ ಐಪಿಎಲ್ 2021 ರಲ್ಲೂ ಅರ್ಜುನ್ ಮುಂಬೈ ತಂಡದ ಭಾಗವಾಗಿದ್ದರು. ಆದರೆ ಕಳೆದ ಎರಡು ಸೀಸನ್‌ಗಳಿಂದ ತಂಡದಲ್ಲಿದ್ದರೂ ಅರ್ಜುನ್ ತೆಂಡೂಲ್ಕರ್ಗೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿಲ್ಲ. ಈ ಬಾರಿ ಹೃತಿಕ್ ಶೋಕಿನ್, ತಿಲಕ್ ವರ್ಮಾ, ಕಾರ್ತಿಕೇಯ ಸೇರಿದಂತೆ ಅನೇಕ ಯುವ ಆಟಗಾರರಿಗೆ ಚಾನ್ಸ್ ನೀಡಿದ್ರೂ ಅರ್ಜುನ್ ತೆಂಡೂಲ್ಕರ್ ಇಡೀ ಸೀಸನ್ನಲ್ಲಿ ಬೆಂಚ್ ಕಾದಿದ್ದರು. ಇದೀಗ ಅರ್ಜುನ್ ತೆಂಡೂಲ್ಕರ್ ಯಾಕೆ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿಲ್ಲ ಎಂಬುದನ್ನು ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಮತ್ತು ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್, ಅರ್ಜುನ್ ತೆಂಡೂಲ್ಕರ್ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲು ಇನ್ನಷ್ಟು ಸುಧಾರಿಸಬೇಕಿದೆ ಎಂದಿದ್ದಾರೆ. ಅರ್ಜುನ್ ತಂಡದಲ್ಲಿ ಸ್ಥಾನ ಪಡೆಯಲು ಹೆಚ್ಚಿನ ಶ್ರಮವಹಿಸಬೇಕಾಗುತ್ತದೆ. ತಮ್ಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅನ್ನು ಮತ್ತಷ್ಟು ಸುಧಾರಿಸಕೊಳ್ಳಬೇಕಿದೆ. ಮುಂಬೈಯಂತಹ ತಂಡಕ್ಕಾಗಿ ಆಯ್ಕೆಯಾಗುವುದು ದೊಡ್ಡ ವಿಷಯ. ಆದರೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಪಡೆಯುವುದು ಅದಕ್ಕಿಂತ ದೊಡ್ಡ ವಿಷಯ ಎಂದು ಶೇನ್ ಬಾಂಡ್ ಹೇಳಿದ್ದಾರೆ.
ನನ್ನ ಪ್ರಕಾರ ಅರ್ಜುನ್ ತೆಂಡೂಲ್ಕರ್ ತುಂಬಾ ಶ್ರಮವಹಿಸಬೇಕು. ನೀವು ಸಾಧಾರಣ ಮಟ್ಟದಲ್ಲಿ ಆಡಿದಾಗ, ಬೇರೆಯವರೂ ಕೂಡ ಪೈಪೋಟಿಯಲ್ಲಿರುತ್ತಾರೆ. ಅವರಿಗಿಂತ ನೀವು ಉತ್ತಮವಾಗಿ ಆಡುವ ಮೂಲಕ ನಿಮ್ಮ ಸ್ಥಾನವನ್ನು ಗಳಿಸಬೇಕು. ಮುಂಬೈ ಇಂಡಿಯನ್ಸ್ ತಂಡದ ಪ್ಲೇಯಿಂಗ್ 11 ನಲ್ಲಿ ಸ್ಥಾನ ಪಡೆಯಲು ಅರ್ಜುನ್ ತಮ್ಮ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮತ್ತಷ್ಟು ಉತ್ತಮಗೊಳ್ಳಬೇಕಿದೆ. ಮುಂದೊಂದು ದಿನ ಈ ಸವಾಲನ್ನು ದಾಟಿ ಅರ್ಜುನ್ ತೆಂಡೂಲ್ಕರ್ ಪ್ಲೇಯಿಂಗ್ ಇಲೆವೆನ್ನ ಭಾಗವಾಗಲಿದ್ದಾರೆ ಎಂಬ ನಿರೀಕ್ಷೆಯಿದೆ ಎಂದು ಶೇನ್ ಬಾಂಡ್ ಹೇಳಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಯಾಂಕ್ ಮಾರ್ಕಂಡೆ,ಸಂಜಯ್ ಯಾದವ್, ತಿಲಕ್ ವರ್ಮಾ ಸೇರಿದಂತೆ ಅನೇಕ ಆಟಗಾರರು ಪದಾರ್ಪಣೆ ಮಾಡಿದ್ದರು. ಅಲ್ಲದೆ 14 ಪಂದ್ಯಗಳಲ್ಲಿ 22 ಆಟಗಾರರು ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದರು. ಇದಾಗ್ಯೂ ಅರ್ಜುನ್ ತೆಂಡೂಲ್ಕರ್ಗೆ ಮಾತ್ರ ಸ್ಥಾನ ನೀಡಲಾಗಿರಲಿಲ್ಲ. ಅದರಲ್ಲೂ ಪ್ಲೇಆಫ್ನಿಂದ ಹೊರಬಿದ್ದಿದ್ದ ಮುಂಬೈ ಪರ ಕೊನೆಯ ಪಂದ್ಯದಲ್ಲಿ ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಅಂತಿಮ ಪಂದ್ಯದಲ್ಲೂ ಅವಕಾಶ ಪಡೆಯುವಲ್ಲಿ ಅರ್ಜುನ್ ತೆಂಡೂಲ್ಕರ್ ವಿಫಲರಾಗಿದ್ದರು. ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಅನ್ನು ಮತ್ತಷ್ಟು ಸುಧಾರಿಸಕೊಳ್ಳಬೇಕಿದ್ದು, ಹೀಗಾಗಿ ಪ್ಲೇಯಿಂಗ್ 11 ನಲ್ಲಿ ಅವಕಾಶ ನೀಡಿರಲಿಲ್ಲ ಎಂದು ಇದೀಗ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್ ಹೇಳಿದ್ದಾರೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.