IPL 2021, MI vs PBKS: ಮುಂಬೈ-ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ: ಅಬುಧಾಬಿಯಲ್ಲಿ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ
ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 14 ಮತ್ತು ಪಂಜಾಬ್ ಕಿಂಗ್ಸ್ 13 ಪಂದ್ಯಗಳಲ್ಲಿ ಗೆದ್ದು ಬೀಗಿವೆ.
ಇಂಡಿಯನ್ ಪ್ರೀಮಿಯರ್ ಲೀಗ್ 2021ರ (IPL 2021) ಇಂದಿನ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಕೆ. ಎಲ್ ರಾಹುಲ್ (KL Rahul) ನೇತೃತ್ವದ ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಮುಖಾಮುಖಿ ಆಗುತ್ತಿವೆ. ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟು ಕಳಪೆ ಪ್ರದರ್ಶನ ತೋರುತ್ತಿರುವ ಹಾಲಿ ಚಾಂಪಿಯನ್ನರಿಗೆ ಇಂದಿನ ಪಂದ್ಯ ಬಹುಮುಖ್ಯವಾಗಿದೆ. 2ನೇ ಚರಣದ ಮೊದಲ ಪಂದ್ಯದಲ್ಲಿ ಸೋತರೂ, ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಕಳೆದ ಪಂದ್ಯದಲ್ಲಿ ಸಾಧಾರಣ ಮೊತ್ತ ರಕ್ಷಿಸಿಕೊಂಡು ಗೆದ್ದ ವಿಶ್ವಾಸದಲ್ಲಿರುವ ಪಂಜಾಬ್ ತಂಡಕ್ಕೂ ಪ್ಲೇಆಫ್ (Playoffs) ಅವಕಾಶ ಹೆಚ್ಚಿಸಿಕೊಳ್ಳಲು ಗೆಲುವಿನ ಲಯ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಅಬುಧಾಬಿಯ ಶೇಕ್ ಜಯೇದ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ.
ಪಂಜಾಬ್ ಕಿಂಗ್ಸ್ ಈವರೆಗೆ ಒಟ್ಟು 10 ಪಂದ್ಯಗಳನ್ನು ಆಡಿದ್ದು ಕೇವಲ 4 ಪಂದ್ಯಗಳನ್ನಷ್ಟೆ ಗೆದ್ದಿದೆ. ಆರು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 8 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.271 ನೆಟ್ರೇಟ್ನೊಂದಿಗೆ ಐದನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಹಾದಿ ತುಂಬಾನೇ ಕಠಿಣವಾಗಿದೆ. ಒಟ್ಟು 10 ಪಂದ್ಯಗಳನ್ನು ಆಡಿದ್ದು ಸೋಲನ್ನು ಹೆಚ್ಚು ಕಂಡಿದೆ. ಕೇವಲ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು, 6 ಪಂದ್ಯಗಳಲ್ಲಿ ಸೋತಿದೆ. ಒಟ್ಟು 8 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.551 ನೆಟ್ರೇಟ್ನೊಂದಿಗೆ ಏಳನೇ ಸ್ಥಾನದಲ್ಲಿದೆ.
ಮುಂಬೈ ತಂಡದಲ್ಲಿ ಸ್ಟಾರ್ ಅನುಭವಿ ಆಟಗಾರರ ದಂಡೇ ಇದ್ದರೂ ಯಾರೊಬ್ಬರೂ ಫಾರ್ಮ್ನಲ್ಲಿಲ್ಲ. ಇದು ಕೇವಲ ಮುಂಬೈ ತಂಡಕ್ಕೆ ತಲೆನೋವಾಗಿರುವುದು ಮಾತ್ರವಲ್ಲದೆ ಮುಂಬರುವ ಟಿ-20 ವಿಶ್ವಕಪ್ ದೃಷ್ಟಿಯಿಂದ ಟೀಮ್ ಇಂಡಿಯಾಕ್ಕೂ ಹಿನ್ನಡೆಯಾಗಿದೆ. ಕಳೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿಕಾಕ್ ಉತ್ತಮ ಆರಂಭ ಒದಗಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ಗಳ ಸ್ಕೋರ್ ಎರಡಂಕಿ ದಾಟಲಿಲ್ಲ.
ಪ್ರಮುಖವಾಗಿ ಮಧ್ಯಮ ಕ್ರಮಾಂಕದ ವೈಫಲ್ಯ ರೋಹಿತ್ ಶರ್ಮ ಬಳಗಕ್ಕೆ ದೊಡ್ಡ ತಲೆನೋವಾಗಿದೆ. ಸೂರ್ಯಕುಮಾರ್, ಇಶಾನ್ ಕಿಶನ್, ಕ್ರುನಾಲ್-ಹಾರ್ದಿಕ್ ಪಾಂಡ್ಯ, ಕೀರೊನ್ ಪೊಲಾರ್ಡ್ ಮುಂಬೈ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ರನ್ ಗಳಿಸಿಲ್ಲ. ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಬೌಲ್ಟ್, ಮಿಲ್ನೆ ಪರಿಣಾಮಕಾರಿ ಎನಿಸಿದ್ದರೂ, ಸ್ಪಿನ್ ಬೌಲಿಂಗ್‌ನಲ್ಲಿ ರಾಹುಲ್ ಚಹರ್-ಕ್ರುನಾಲ್ ಪಾಂಡ್ಯ ನಿರಾಸೆ ಮೂಡಿಸಿದ್ದಾರೆ.
ಸನ್‌ರೈಸರ್ಸ್ ವಿರುದ್ಧ 125 ರನ್‌ಗೆ ತೃಪ್ತಿಪಟ್ಟರೂ, ಬೌಲರ್‌ಗಳ ಸಾಹಸದಿಂದ ಗೆದ್ದಿರುವ ಕೆಎಲ್ ರಾಹುಲ್ ಪಡೆ, ಸ್ಟಾರ್ ಬ್ಯಾಟರ್‌ಗಳನ್ನು ಹೊಂದಿದ್ದರೂ ನಿರೀಕ್ಷಿತ ರೀತಿಯಲ್ಲಿ ರನ್‌ಪ್ರವಾಹ ಹರಿಸುತ್ತಿಲ್ಲ. ರಾಹುಲ್-ಮಯಾಂಕ್ ಜೋಡಿ ಮಿಂಚುತ್ತಿದ್ದರೂ ಪಂಜಾಬ್‌ಗೆ ಇತರ ಬ್ಯಾಟ್ಸ್‌ಮನ್‌ಗಳು ಕೈಕೊಡುತ್ತಿದ್ದಾರೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯ ಗೆಲ್ಲಲೇ ಬೇಕಾಗಿರುವುದರಿಂದ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷಿಸಲಾಗಿದೆ.
ಉಭಯ ತಂಡಗಳು ಐಪಿಎಲ್ ಇತಿಹಾಸದಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 14 ಮತ್ತು ಪಂಜಾಬ್ ಕಿಂಗ್ಸ್ 13 ಪಂದ್ಯಗಳಲ್ಲಿ ಗೆದ್ದು ಬೀಗಿವೆ.
IPL 2021: ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ದಾಖಲೆ ಬರೆದ ಭುವನೇಶ್ವರ್! ಈ ಸಾಧನೆ ಮಾಡಿದ ಮೂರನೇ ಬೌಲರ್
(MI vs PBKS The 42nd match of the ongoing IPL 2021 will be played between Mumbai Indians and Punjab Kings)