Milan Rathnayake: ಚೊಚ್ಚಲ ಪಂದ್ಯದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಮಿಲನ್ ರತ್ನಾಯಕೆ

|

Updated on: Aug 22, 2024 | 1:53 PM

Milan Rathnayake: ಮ್ಯಾಚೆಂಸ್ಟರ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಶ್ರೀಲಂಕಾ ವೇಗಿ ಮಿಲನ್ ರತ್ನಾಯಕೆ ಟೆಸ್ಟ್ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಪಾದಾರ್ಪಣಾ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಸಹ ಟೀಮ್ ಇಂಡಿಯಾದ ಮಾಜಿ ಆಟಗಾರನ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

Milan Rathnayake: ಚೊಚ್ಚಲ ಪಂದ್ಯದಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಮಿಲನ್ ರತ್ನಾಯಕೆ
Milan Rathnayake
Follow us on

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿರುವ ಮಿಲನ್ ರತ್ನಾಯಕೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 9ನೇ ಕ್ರಮಾಂಕದಲ್ಲಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸುವ ಮೂಲಕ ಎಂಬುದು ವಿಶೇಷ. ಮ್ಯಾಚೆಂಸ್ಟರ್​ನ ಓಲ್ಡ್ ಟ್ರಾಫೋರ್ಡ್​ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.

ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡವು 113 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ಧನಂಜಯ ಡಿಸಿಲ್ವಾ ಹಾಗೂ ಹಾಗೂ ಮಿಲನ್ ರತ್ನಾಯಕೆ 63 ರನ್​ಗಳ ಜೊತೆಯಾಟವಾಡಿದರು. ಇದಾದ ಬಳಿಕ ಧನಂಜಯ ಡಿಸಿಲ್ವಾ (74) ವಿಕೆಟ್ ಒಪ್ಪಿಸಿದರು.

ಮತ್ತೊಂದೆಡೆ ಏಕಾಂಗಿ ಹೋರಾಟ ಮುಂದುವರೆಸಿದ ಮಿಲನ್ ರತ್ನಾಯಕೆ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಅಲ್ಲದೆ 135 ಎಸೆತಗಳಲ್ಲಿ 6 ಫೋರ್ ಹಾಗೂ 2 ಸಿಕ್ಸ್​ನೊಂದಿಗೆ 72 ರನ್ ಬಾರಿಸಿ ಔಟಾದರು. ಈ 72 ರನ್​ಗಳೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ ಮಿಲನ್ ರತ್ನಾಯಕೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಅಂದರೆ ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ಪಾದಾರ್ಪಣೆ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಭಾರತದ ಬಲ್ವಿಂಧರ್ ಸಂಧು ಹೆಸರಿನಲ್ಲಿತ್ತು. 1983 ರಲ್ಲಿ ಪಾಕಿಸ್ತಾನ್ ವಿರುದ್ಧ 71 ರನ್ ಬಾರಿಸಿ ಬಲ್ವಿಂದರ್ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!

ಇದೀಗ 41 ವರ್ಷಗಳ ಬಳಿಕ ಈ ದಾಖಲೆ ಮುರಿಯುವಲ್ಲಿ ಮಿಲನ್ ರತ್ನಾಯಕೆ ಯಶಸ್ವಿಯಾಗಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಿಲನ್ 72 ರನ್​ಗಳ ಕೊಡುಗೆ ನೀಡುವ ಮೂಲಕ ಬಲ್ವಿಂದರ್ ಸಂಧು ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.  ಈ ಮೂಲಕ ಟೆಸ್ಟ್ ಕ್ರಿಕೆಟ್​ನ ಚೊಚ್ಚಲ ಪಂದ್ಯದಲ್ಲೇ ಮಿಲನ್ ರತ್ನಾಯಕೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕುಸಿದು ಪುಟಿದೆದ್ದ ಶ್ರೀಲಂಕಾ:

ಈ ಪಂದ್ಯದಲ್ಲಿ ಆರಂಭಿಕ ಕುಸಿತಕ್ಕೊಳಗಾಗಿದ್ದ ಶ್ರೀಲಂಕಾ ತಂಡವು ಧನಂಜಯ ಡಿಸಿಲ್ವಾ (74) ಹಾಗೂ ಮಿಲನ್ ರತ್ನಾಯಕೆ (72) ಅವರ ಅರ್ಧಶತಕಗಳ ನೆರವಿನಿಂದ 236 ರನ್ ಪೇರಿಸಿ ಆಲೌಟ್ ಆಗಿದೆ. ಇದೀಗ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ ಆರಂಭಿಸಿದ್ದು, ಮೊದಲ ದಿನದಾಟದ ಮುಕ್ತಾಯದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 22 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಸದ್ಯ ಬೆನ್ ಡಕೆಟ್ (13) ಹಾಗೂ ಡೇನಿಯಲ್ ಲಾರೆನ್ಸ್ (9) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.