ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ನಲ್ಲಿ (ICC Women’s World Cup 2022) ಭಾರತ ತಂಡವನ್ನು ಮೂರು ಪಂದ್ಯಗಳಲ್ಲಿ ಮುನ್ನಡೆಸುವ ಮೂಲಕ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ (Mithali Raj) ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹ್ಯಾಮಿಲ್ಟನ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸಮಾರಂಭದಲ್ಲಿ ಟಾಸ್ ಹಾಕುವುದರೊಂದಿಗೆ ಮಿಥಾಲಿ ಮಹಿಳಾ ವಿಶ್ವಕಪ್ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ದಾಖಲೆ ಬರೆದರು. ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ಅವರ ಹೆಸರಿನಲ್ಲಿತ್ತು. 101 ಏಕದಿನ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ಬೆಲಿಂಡಾ ಕ್ಲಾರ್ಕ್, ಮೂರು ವಿಶ್ವಕಪ್ ಆವೃತ್ತಿಗಳಲ್ಲಿ (1997, 2000, ಮತ್ತು 2005) 23 ಪಂದ್ಯಗಳಲ್ಲಿ ಆಸೀಸ್ ತಂಡವನ್ನು ಮುನ್ನಡೆಸಿದರು. ಇದೀಗ ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ ವಿಶ್ವಕಪ್ನಲ್ಲಿ 24 ಪಂದ್ಯಗಳಲ್ಲಿ ಮುನ್ನಡೆಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇಷ್ಟೇ ಅಲ್ಲದೆ ಏಕದಿನ ವಿಶ್ವಕಪ್ನಲ್ಲಿ ಭಾರತ ತಂಡವನ್ನು ಅತೀ ಹೆಚ್ಚು ಪಂದ್ಯಗಳಲ್ಲಿ ಮುನ್ನಡೆಸಿದ ಕ್ಯಾಪ್ಟನ್ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ. ಈ ಹಿಂದೆ ಈ ದಾಖಲೆ ಟೀಮ್ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಹೆಸರಿನಲ್ಲಿತ್ತು. ಅಜರ್ ಭಾರತ ತಂಡವನ್ನು ಏಕದಿನ ವಿಶ್ವಕಪ್ನಲ್ಲಿ 23 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಹಾಗೆಯೇ ಮಹೇಂದ್ರ ಸಿಂಗ್ ಧೋನಿ 17 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದರು. ಇದೀಗ ಮಿಥಾಲಿ ರಾಜ್ 24 ಪಂದ್ಯಗಳಲ್ಲಿ ಭಾರತ ತಂಡವನ್ನು ಏಕದಿನ ವಿಶ್ವಕಪ್ನಲ್ಲಿ ಮುನ್ನಡೆಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಇನ್ನು ಮಿಥಾಲಿ ರಾಜ್ ಇದುವರೆಗೆ ಮಹಿಳಾ ವಿಶ್ವಕಪ್‌ಗಳಲ್ಲಿ 24 ಪಂದ್ಯಗಳಲ್ಲಿ ಭಾರತವನ್ನು 15 ಪಂದ್ಯಗಳಲ್ಲಿ ಗೆಲುವಿನತ್ತ ಮುನ್ನಡೆಸಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾದ ಮಾಜಿ ನಾಯಕಿ ಕ್ಲಾರ್ಕ್ ಸಾರಥ್ಯದಲ್ಲಿ ಆಸೀಸ್ ಪಡೆ 23 ಪಂದ್ಯಗಳಲ್ಲಿ 21 ರಲ್ಲಿ ಗೆಲುವು ದಾಖಲಿಸಿತ್ತು. ಇನ್ನು ಮಿಥಾಲಿ ರಾಜ್ ಅವರ ವಿಶ್ವ ದಾಖಲೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಟೀಮ್ ಇಂಡಿಯಾ 155 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ.
ಮಹಿಳಾ ವಿಶ್ವಕಪ್ನಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ನಾಯಕಿಯರು:
ಮಿಥಾಲಿ ರಾಜ್ (IND): 24*
ಬೆಲಿಂಡಾ ಕ್ಲಾರ್ಕ್ (AUS) – 23
ಸುಸಾನ್ ಗೋಟ್‌ಮ್ಯಾನ್ (ENG) – 19
ಟ್ರಿಶ್ ಮೆಕೆಲ್ವಿ (NZ) – 15
ಮೇರಿ-ಪ್ಯಾಟ್ ಮೂರ್ (IRE) – 15
ಟೀಮ್ ಇಂಡಿಯಾಗೆ ಭರ್ಜರಿ ಜಯ:
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2022) ಟೂರ್ನಿಯ 10ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಟೀಮ್ ಇಂಡಿಯಾ ದೊಡ್ಡ ಅಂತರದ ಗೆಲುವು ಸಾಧಿಸಿದೆ. ಸ್ಮೃತಿ ಮಂದಾನ (123) (Smriti Mandhana) ಹಾಗೂ ಹರ್ಮನ್ಪ್ರೀತ್ (109) (Harmanpreet Kaur) ಅವರ ಶತಕದ ಫಲದಿಂದ ಭಾರತ ಎದುರಾಳಿಗೆ 318 ರನ್ಗಳ ಟಾರ್ಗೆಟ್ ನೀಡಿತು. ಈ ಕಠಿಣ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾದ ವೆಸ್ಟ್ ಇಂಡೀಸ್ ಭಾರತೀಯ ವನಿತೆಯರ ಸಂಘಟಿತ ಬೌಲಿಂಗ್ ಪ್ರದರ್ಶನಕ್ಕೆ 162 ರನ್ಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್ ಇಂಡಿಯಾ 155 ರನ್ಗಳ ಬೃಹತ್ ಗೆಲುವಿನೊಂದಿಗೆ 4 ಅಂಕ ಸಂಪಾದಿಸಿದೆ.
ಭಾರತ ಮಹಿಳಾ ತಂಡ: ಯಾಸ್ತಿಕಾ ಭಾಟಿಯಾ , ಸ್ಮೃತಿ ಮಂಧಾನ , ದೀಪ್ತಿ ಶರ್ಮಾ , ಮಿಥಾಲಿ ರಾಜ್ (ನಾಯಕಿ) , ಹರ್ಮನ್ಪ್ರೀತ್ ಕೌರ್ , ರಿಚಾ ಘೋಷ್ ( ವಿಕೆಟ್ ಕೀಪರ್ ) , ಸ್ನೇಹ್ ರಾಣಾ , ಪೂಜಾ ವಸ್ತ್ರಾಕರ್ , ಜೂಲನ್ ಗೋಸ್ವಾಮಿ , ಮೇಘನಾ ಸಿಂಗ್ , ರಾಜೇಶ್ವರಿ ಗಾಯಕ್ವಾಡ್- ಪೂನಂ ಯಾದವ್ , ತಾನಿಯಾ ಭಾಟಿಯಾ , ರೇಣುಕಾ ಸಿಂಗ್ , ಶಫಾಲಿ ವರ್ಮಾ
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?