Mithali Raj: ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಮಿಥಾಲಿ ರಾಜ್: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಭಾರತ

| Updated By: Vinay Bhat

Updated on: Mar 06, 2022 | 11:50 AM

India vs Pakistan, Women's World Cup 2022: ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಮೈದಾನಕ್ಕೆ ಇಳಿದ ಮಿಥಾಲಿ ರಾಜ್ ಆರು ಮಹಿಳಾ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಮೊಟ್ಟಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Mithali Raj: ಕ್ರಿಕೆಟ್ ದೇವರ ದಾಖಲೆ ಸರಿಗಟ್ಟಿದ ಮಿಥಾಲಿ ರಾಜ್: ಮೊದಲ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಭಾರತ
Mithali Raj, Pooja and Sneh Rana
Follow us on

ಮೌಂಟ್‌ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ICC Women’s World Cup 2022) ಭಾರತ ತಂಡ 244 ರನ್ ಕಲೆಹಾಕಿದೆ. ಮಧ್ಯಮ ಕ್ರಮಾಂಕದ ವೈಫಲ್ಯದ ನಡುವೆಯೂ ಸ್ಮೃತಿ ಮಂದಾನ, ಸ್ನೇಹ್ ರಾಣ (Sneh Rana) ಮತ್ತು ಪೂಜಾ ವಸ್ತ್ರಕರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡ ಪಾಕ್​ಗೆ ಸವಾಲಿನ ಟಾರ್ಗೆಟ್ ನೀಡಿದೆ. ಇದರ ಜೊತೆಗೆ ಭಾರತೀಯ ಆಟಗಾರ್ತಿಯರು ವಿಶೇಷ ದಾಖಲೆಯನ್ನೂ ಬರೆದಿದ್ದಾರೆ. ಟೀಮ್ ಇಂಡಿಯಾ ನಾಯಕಿ ಮಿಥಾಲಿ ರಾಜ್ (Mithali Raj) ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಪಾಕ್ ವಿರುದ್ಧದ ಈ ಪಂದ್ಯದಲ್ಲಿ ಮೈದಾನಕ್ಕೆ ಇಳಿದ ಮಿಥಾಲಿ ಆರು ಮಹಿಳಾ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ ಮೊಟ್ಟಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2000ನೇ ಇಸವಿಯ ವಿಶ್ವಕಪ್ ಮೂಲಕ ಪದಾರ್ಪಣೆ ಮಾಡಿದ ಮಿಥಾಲಿ ರಾಜ್, 2005, 2009, 2013, 2017 ಮತ್ತು 2022ನೇ ವಿಶ್ವಕಪ್‍ನಲ್ಲಿ ಭಾರತ ತಂಡದ ಪರ ಆಡಿದ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್‍ನ ದೆಬ್ಬೀ ಹಾಕ್ಲೆ ಮತ್ತು ಇಂಗ್ಲೆಂಡ್‍ನ ಚಾರ್ಲೊಟ್ ಎಡ್ವಡ್ರ್ಸ್ ಅವರ ದಾಖಲೆಯನ್ನೂ ಮಿಥಾಲಿ ರವಿವಾರ ಮುರಿದರು. ಇತ್ತ ತಂಡದ ಸಹ ಆಟಗಾರ್ತಿ ಜೂಲನ್ ಗೋಸ್ವಾಮಿ, ಐದು ವಿಶ್ವಕಪ್ ಟೂರ್ನಿಗಳಲ್ಲಿ ಆಡುವ ಮೂಲಕ ಎರಡನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್ 1992, 1996, 1999, 2003, 2007 ಮತ್ತು 2011ರ ವಿಶ್ವಕಪ್‍ನಲ್ಲಿ ಆಡಿದ ಸಾಧನೆ ಮಾಡಿದ್ದರು. ಮಿಥಾಲಿ ಹಾಗೂ ಸಚಿನ್ ಹೊರತುಪಡಿಸಿದರೆ ಪಾಕಿಸ್ತಾನದ ಬ್ಯಾಟಿಂಗ್ ದಿಗ್ಗಜ ಜಾವೇದ್ ಮಿಯಾಂದಾದ್ ಅವರು ಮಾತ್ರ ಆರುವಿಶ್ವಕಪ್‍ಗಳಲ್ಲಿ ಆಡಿರುವ ದಾಖಲೆ ಹೊಂದಿದ್ದಾರೆ.

ಪೂಜಾ-ಸ್ನೇಹ್ ದಾಖಲೆಯ ಜೊತೆಯಾಟ:

ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಬೇಕಿದ್ದ ಅನುಭವಿಗಳು ದಿಢೀರ್ ನಿರ್ಗಮಿಸಿದ್ದು ಭಾರತ ಪಾತಾಳಕ್ಕೆ ಕುಸಿಯಿತು. 96 ರನ್​ಗೆ 2ನೇ ವಿಕೆಟ್ ಕಳೆದುಕೊಂಡಿದ್ದ ಭಾರತ  114 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ಭಾರತಕ್ಕೆ ಈ ಸಂದರ್ಭ ಮಾನ ಉಳಿಸಿದ್ದು ಸ್ನೇಹ್ ರಾಣ ಹಾಗೂ ಪೂಜಾ ವಸ್ತ್ರಕರ್. ಇವರಿಬ್ಬರು ಹೆಚ್ಚು ಬಾಲ್​ಗಳನ್ನು ತಿನ್ನದೆ ಸಿಂಗ್, ಡಬಲ್ ಪಡೆದುಕೊಂಡು ಭಾರತದ ರನ್ ಗತಿಯನ್ನು ಹೆಚ್ಚಿಸಿದರು. ಅಂತಿಮ ಹಂತದವರೆಗೂ ಕ್ರೀಸ್​ನಲ್ಲೇ ಇದ್ದ ಇವರು ಬರೋಬ್ಬರಿ 122 ರನ್​ಗಳ ಜೊತೆಯಾಟ ಆಡಿದರು. ಕೊನೇ ಹಂತದಲ್ಲಿ ಪೂಜಾ 59 ಎಸೆತಗಳಲ್ಲಿ 8 ಬೌಂಡರಿಯೊಂದಿಗೆ 67 ರನ್​ಗೆ ಔಟಾದರು. ಸ್ನೇಹ್ 48 ಎಸೆತಗಳಲ್ಲಿ 4 ಬೌಂಡರಿ ಬಾರಿಸಿ ಅಜೇಯ 53 ರನ್ ಸಿಡಿಸಿದರು.

ಇವರಿಬ್ಬರ ನಡುವಣ 122 ರನ್​ಗಳ ಅಮೋಘ ಜೊತೆಯಾಟ 7ನೇ ವಿಕೆಟ್​ಗೆ ಬಂದ ದಾಖಲೆಯಾಗಿದೆ. ಕೇವಲ ಇದು ಮಹಿಳಾ ವಿಶ್ವಕಪ್​ನಲ್ಲಿ ಮಾತ್ರವಲ್ಲದೆ ಮಹಿಳಾ ಏಕದಿನ ಇತಿಹಾಸದಲ್ಲೇ ನೂತನ ದಾಖಲೆಯಾಗಿದೆ. ಇವರು ನ್ಯೂಜಿಲೆಂಡ್​ನ ಎನ್​ಜೆ ಬ್ರೋನ್ ಮತ್ತು ಎಸ್​​ಜೆ ಟುಕಿಗವಾ ಅವರ 104 ರನ್​ಗಳ ಜೊತೆಯಾಟವನ್ನು ಮುರಿದಿದ್ದಾರೆ. ಒಟ್ಟಾರೆಯಾಗಿ ಇವರು ಭಾರತ ಕ್ರಿಕೆಟ್ ಇತಿಹಾಸದ ದಾಖಲೆಯ ಜೊತೆಯಾಟವನ್ನು 3 ರನ್​ಗಳಿಂದ ಮಿಸ್ ಮಾಡಿಕೊಂಡರು. ಈ ಹಿಂದೆ 7ನೇ ವಿಕೆಟ್​ಗೆ ಟೀಮ್ ಇಂಡಿಯಾ ಪರ ಎಂಎಸ್ ಧೋನಿ ಹಾಗೂ ಆರ್. ಅಶ್ವಿನ್ 125 ರನ್​ಗಳ ಜೊತೆಯಾಟ ಆಡಿದ್ದರು. ಇದು 2012 ರಲ್ಲಿ ಪಾಕಿಸ್ತಾನ ವಿರುದ್ಧವೇ ಮೂಡಿಬಂದಿತ್ತು.

IND vs PAK ODI: ಭಾರತದ ಮಾನ ಉಳಿಸಿದ ಪೂಜಾ-ಸ್ನೇಹ್ ಜೊತೆಯಾಟ: ಪಾಕಿಸ್ತಾನಕ್ಕೆ 245 ರನ್​ಗಳ ಟಾರ್ಗೆಟ್

Ravindra Jadeja: ಜಡೇಜಾ ದ್ವಿಶತಕದ ಹೊಸ್ತಿಲಲ್ಲಿ ಭಾರತ ಡಿಕ್ಲೇರ್ ಘೋಷಿಸಿದ್ದು ಯಾಕೆ ಗೊತ್ತೇ?