MLC 2023: ಕೋರಿ ಅ್ಯಂಡರ್ಸನ್ ಸಿಡಿಲಬ್ಬರಕ್ಕೆ ಮಂಡಿಯೂರಿದ ಪೊಲಾರ್ಡ್ ಪಡೆ

MLC 2023: ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಟಿಮ್ ಡೇವಿಡ್ 4 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 28 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು.

MLC 2023: ಕೋರಿ ಅ್ಯಂಡರ್ಸನ್ ಸಿಡಿಲಬ್ಬರಕ್ಕೆ ಮಂಡಿಯೂರಿದ ಪೊಲಾರ್ಡ್ ಪಡೆ
Corey Anderson
Edited By:

Updated on: Jul 15, 2023 | 4:02 PM

MLC 2023: ಯುಎಸ್​ಎನ ಡಲ್ಲಾಸ್​ನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ (MLC 2023) ಟೂರ್ನಿಯ 2ನೇ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಯುನಿಕಾರ್ನ್ಸ್ ತಂಡದ ನಾಯಕ ಆರೋನ್ ಫಿಂಚ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಯಾನ್ ಫ್ರಾನಿಸ್ಕೋ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರರಾದ ಫಿನ್ ಅಲೆನ್ (10) ಹಾಗೂ ಮ್ಯಾಥ್ಯೂ ವೇಡ್ (5) ಬೇಗನೆ ವಿಕೆಟ್ ಒಪ್ಪಿಸಿದ್ದರು.

ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ಕಸ್ ಸ್ಟೋಯಿನಿಸ್ 6 ರನ್​ಗಳಿಸಿ ಬೌಲ್ಟ್ ಎಸೆತದಲ್ಲಿ ಬೌಲ್ಡ್ ಆದರು. ಹಾಗೆಯೇ ಆರೋನ್ ಫಿಂಚ್ 9 ರನ್​ಗಳಿಸಲಷ್ಟೇ ಶಕ್ತರಾದರು. ಕೇವಲ 50 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ ಈ ಹಂತದಲ್ಲಿ ಶಾದಾಬ್ ಖಾನ್ ಹಾಗೂ ಕೋರಿ ಅ್ಯಂಡರ್ಸ್ ಆಸರೆಯಾದರು.

5ನೇ ವಿಕೆಟ್​ಗೆ ಜೊತೆಯಾದ ಈ ಜೋಡಿಯು ಬಿರುಸಿನ ಬ್ಯಾಟಿಂಗ್ ನಡೆಸಿದರು. ಪರಿಣಾಮ ಐದನೇ ವಿಕೆಟ್​ಗೆ 119 ರನ್​ಗಳ ಜೊತೆಯಾಟ ಮೂಡಿಬಂತು. ಈ ವೇಳೆ 30 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 61 ರನ್ ಬಾರಿಸಿದ್ದ ಶಾದಾಬ್ ಖಾನ್ ಔಟಾದರು.

ಇದಾಗ್ಯೂ ಮತ್ತೊಂದೆಡೆ ಸಿಡಿಲಬ್ಬರದ ಮುಂದುವರೆಸಿದ ಕೋರಿ ಅ್ಯಂಡರ್ಸ್ ಎಂಐ ನ್ಯೂಯಾರ್ಕ್ ಬೌಲರ್​ಗಳ ಬೆಂಡೆತ್ತಿದರು. 52 ಎಸೆತಗಳನ್ನು ಎದುರಿಸಿದ ಅ್ಯಂಡರ್ಸನ್ 7 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 91 ರನ್ ಬಾರಿಸಿದರು. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಕಲೆಹಾಕಿತು.

216 ರನ್​ಗಳ ಕಠಿಣ ಗುರಿ ಪಡೆದ ಎಂಐ ನ್ಯೂಯಾರ್ಕ್​ ತಂಡಕ್ಕೆ ಡೆವಾಲ್ಡ್ ಬ್ರೆವಿಸ್ (32) ಉತ್ತಮ ಆರಂಭ ಒದಗಿಸಿದ್ದರು. ಸ್ಟೀವನ್ ಟೇಲರ್ (0) ಹಾಗೂ ಮೊನಾಂಕ್ ಪಟೇಲ್ (8) ವಿಕೆಟ್ ಪಡೆಯುವ ಮೂಲಕ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಬೌಲರ್​ಗಳು ಪವರ್​ಪ್ಲೇನಲ್ಲೇ ಯಶಸ್ಸು ಸಾಧಿಸಿದರು.

ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್ ಪೂರನ್ 28 ಎಸೆತಗಳಲ್ಲಿ 3 ಸಿಕ್ಸ್​ ಹಾಗೂ 2 ಫೋರ್​ಗಳೊಂದಿಗೆ 40 ರನ್​ ಬಾರಿಸಿದರೆ, ನಾಯಕ ಕೀರನ್ ಪೊಲಾರ್ಡ್ 27 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 48 ರನ್ ಬಾರಿಸಿ ಔಟಾದರು.

ಇನ್ನು ಅಂತಿಮ ಓವರ್​ಗಳ ವೇಳೆ ಅಬ್ಬರಿಸಿದ ಟಿಮ್ ಡೇವಿಡ್ 4 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 28 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು. ಇದಾಗ್ಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಪರಿಣಾಮ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್​ಗಳಿಸಿ ಎಂಐ ನ್ಯೂಯಾರ್ಕ್ ತಂಡವು 22 ರನ್​ಗಳಿಂದ ಸೋಲೋಪ್ಪಿಕೊಂಡಿತು.

ಎಂಐ ನ್ಯೂಯಾರ್ಕ್ ಪ್ಲೇಯಿಂಗ್ 11: ಡೆವಾಲ್ಡ್ ಬ್ರೆವಿಸ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ಹಮ್ಮದ್ ಅಜಮ್ , ಸ್ಟೀವನ್ ಟೇಲರ್ , ಟಿಮ್ ಡೇವಿಡ್ , ಕೀರಾನ್ ಪೊಲಾರ್ಡ್ (ನಾಯಕ) , ಮೊನಾಂಕ್ ಪಟೇಲ್ , ಸರಬ್ಜಿತ್ ಲಡ್ಡಾ , ಎಹ್ಸಾನ್ ಆದಿಲ್ , ಕಗಿಸೊ ರಬಾಡ , ಟ್ರೆಂಟ್ ಬೌಲ್ಟ್.

ಇದನ್ನೂ ಓದಿ: MLC 2023: ಅಮೆರಿಕನ್ ಟಿ20 ಲೀಗ್​ನಲ್ಲಿ ಕನ್ನಡಿಗ..!

ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ವೇಡ್, ಫಿನ್ ಅಲೆನ್ , ಆರನ್ ಫಿಂಚ್ (ನಾಯಕ) , ಕೋರಿ ಅ್ಯಂಡರ್ಸನ್ , ಮಾರ್ಕಸ್ ಸ್ಟೊಯಿನಿಸ್ , ತಾಜಿಂದರ್ ಧಿಲ್ಲೋನ್ , ಚೈತನ್ಯ ಬಿಷ್ಣೋಯ್ , ಶಾದಾಬ್ ಖಾನ್ , ಕಾರ್ಮಿ ಲೆ ರೌಕ್ಸ್ , ಹ್ಯಾರಿಸ್ ರೌಫ್ , ಲಿಯಾಮ್ ಪ್ಲಂಕೆಟ್.