
Major League Cricket 2023: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 8ನೇ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ ಹಾಗೂ ಫಿನ್ ಅಲೆನ್ ತಂಡಕ್ಕೆ ಬಿರುಸಿನ ಆರಂಭ ಒದಗಿಸಿದ್ದರು. ಒಂದೆಡೆ ಅಲೆನ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರೆ, ಮತ್ತೊಂದೆಡೆ ವೇಡ್ ಸ್ಪೋಟಕ ಇನಿಂಗ್ಸ್ ಆಡಿದರು. ಪರಿಣಾಮ ಪವರ್ಪ್ಲೇನಲ್ಲೇ 75 ರನ್ಗಳು ಮೂಡಿಬಂತು.
ಇನ್ನು ಮೊದಲ ವಿಕೆಟ್ಗೆ 88 ರನ್ಗಳಿಸಿದ ಬಳಿಕ ಫಿನ್ ಅಲೆನ್ (20) ಔಟಾದರೆ, ಆ ಬಳಿಕ ಬಂದ ಮಾರ್ಕಸ್ ಸ್ಟೋಯಿನಿಸ್ 18 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 37 ರನ್ ಚಚ್ಚಿದರು.
ಇನ್ನೊಂದೆಡೆ ಆರ್ಭಟ ಮುಂದುವರೆಸಿಸದ ಮ್ಯಾಥ್ಯೂ ವೇಡ್ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 41 ಎಸೆತಗಳಲ್ಲಿ 78 ರನ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಕೋರಿ ಅ್ಯಂಡರ್ಸನ್ 3 ಸಿಕ್ಸ್ ಹಾಗೂ 3 ಫೋರ್ಗಳನ್ನು ಒಳಗೊಂಡಂತೆ 20 ಎಸೆತಗಳಲ್ಲಿ 39 ರನ್ ಬಾರಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಲಾಸ್ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ 7 ವಿಕೆಟ್ ಕಳೆದುಕೊಂಡು 212 ರನ್ ಕಲೆಹಾಕಿತು.
213 ರನ್ಗಳ ಕಠಿಣ ಗುರಿ ಬೆನ್ನತ್ತಿದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡಕ್ಕೆ ಆರಂಭಿಕ ಆಟಗಾರ ಜೇಸನ್ ರಾಯ್ ಸ್ಪೋಟಕ ಆರಂಭ ಒದಗಿಸಿದ್ದರು. 21 ಎಸೆತಗಳನ್ನು ಎದುರಿಸಿದ್ದ ರಾಯ್ 4 ಸಿಕ್ಸ್, 4 ಫೋರ್ನೊಂದಿಗೆ 45 ರನ್ ಬಾರಿಸಿದ್ದರು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಇದಾಗ್ಯೂ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ 26 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಒಳಗೊಂಡಂತೆ ಅಜೇಯ 42 ರನ್ ಬಾರಿಸಿದರು. ಮತ್ತೊಂದೆಡೆ ಸುನಿಲ್ ನರೈನ್ 17 ಎಸೆತಗಳಲ್ಲಿ 28 ರನ್ ಬಾರಿಸಿದರು. ಇದಾಗ್ಯೂ ತಂಡವನ್ನು ಗೆಲುವು ತಂದುಕೊಡಲು ಸಾಧ್ಯವಾಗಿರಲಿಲ್ಲ. ಪರಿಣಾಮ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ಗಳಿಸಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವು 21 ರನ್ಗಳಿಂದ ಸೋಲೊಪ್ಪಿಕೊಂಡಿತು.
ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಪ್ಲೇಯಿಂಗ್ 11: ಜೇಸನ್ ರಾಯ್ , ಉನ್ಮುಕ್ತ್ ಚಂದ್ , ರಿಲೀ ರೊಸ್ಸೊ , ನಿತೀಶ್ ಕುಮಾರ್ , ಜಸ್ಕರನ್ ಮಲ್ಹೋತ್ರಾ (ವಿಕೆಟ್ ಕೀಪರ್) , ಆಂಡ್ರೆ ರಸೆಲ್ , ಸುನಿಲ್ ನರೈನ್ (ನಾಯಕ) , ಕಾರ್ನೆ ಡ್ರೈ , ಆ್ಯಡಂ ಝಂಪಾ , ಅಲಿ ಖಾನ್ , ಸ್ಪೆನ್ಸರ್ ಜಾನ್ಸನ್.
ಇದನ್ನೂ ಓದಿ: World Cup 2023 schedule: ವಿಶ್ವಕಪ್ಗೂ ಮುನ್ನ 2 ತಂಡಗಳ ವಿರುದ್ಧ ಕಣಕ್ಕಿಳಿಯಲಿದೆ ಟೀಮ್ ಇಂಡಿಯಾ
ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪ್ಲೇಯಿಂಗ್ 11: ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್) , ಫಿನ್ ಅಲೆನ್ , ಮಾರ್ಕಸ್ ಸ್ಟೊಯಿನಿಸ್ , ಆರೋನ್ ಫಿಂಚ್ (ನಾಯಕ) , ಕೋರಿ ಅ್ಯಂಡರ್ಸನ್ , ಶಾದಾಬ್ ಖಾನ್ , ತಜೀಂದರ್ ಧಿಲ್ಲೋನ್ , ಚೈತನ್ಯ ಬಿಷ್ಣೋಯ್ , ಲಿಯಾಮ್ ಪ್ಲಂಕೆಟ್ , ಹ್ಯಾರಿಸ್ ರೌಫ್ , ಕಾರ್ಮಿ ಲೆ ರೌಕ್ಸ್.