IND vs PAK: ರಾಜವರ್ಧನ್ ಬಿಗಿ ದಾಳಿಗೆ ತತ್ತರಿಸಿದ ಪಾಕಿಸ್ತಾನ್
Emerging Teams Asia Cup 2023: ಒಂದು ಹಂತದಲ್ಲಿ ಕೇವಲ 78 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ್ ತಂಡಕ್ಕೆ ಖಾಸಿಂ ಅಕ್ರಮ್ ಹಾಗೂ ಮುಬಾಸಿರ್ ಖಾನ್ ಆಸರೆಯಾದರು.
India A vs Pakistan A: ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವ ಎಮರ್ಜಿಂಗ್ ಏಷ್ಯಾಕಪ್ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ಎ ವಿರುದ್ಧ ಟೀಮ್ ಇಂಡಿಯಾ ಯುವ ವೇಗಿ ರಾಜವರ್ಧನ್ ಹಂಗರ್ಗೇಕರ್ ಬಿಗಿ ದಾಳಿ ಸಂಘಟಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ನಾಲ್ಕನೇ ಓವರ್ನಲ್ಲೇ ಸೈಮ್ ಅಯ್ಯುಬ್ (0) ವಿಕೆಟ್ ಕಬಳಿಸಿ ರಾಜವರ್ಧನ್ ಹಂಗರ್ಗೇಕರ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಒಮೈರ್ ಯೂಸುಫ್ (0) ಗೂ ಪೆವಿಲಿಯನ್ ಹಾದಿ ತೋರಿಸುವಲ್ಲಿ ರಾಜವರ್ಧನ್ ಯಶಸ್ವಿಯಾದರು.
ಇತ್ತ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಳೆದುಕೊಂಡ ಪಾಕಿಸ್ತಾನ್ ತಂಡಕ್ಕೆ ಫರ್ಹಾನ್ ಆಸರೆಯಾಗಿ ನಿಂತರು. ಆದರೆ ರಿಯಾನ್ ಪರಾಗ್ ಅವರ ಸ್ಪಿನ್ ಮೋಡಿಗೆ ಫರ್ಹಾನ್ (35) ಕೂಡ ವಿಕೆಟ್ ಒಪ್ಪಿಸಿದರು. ಇನ್ನು 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕಮ್ರಾನ್ ಗುಲಾಮ್ (15) ಹಾಗೂ ಹಸೀಬುಲ್ಲಾ (27) ರನ್ನು ಮಾನವ್ ಸುತಾರ್ ಪೆವಿಲಿಯನ್ಗೆ ಕಳುಹಿಸಿದರು.
ಒಂದು ಹಂತದಲ್ಲಿ ಕೇವಲ 78 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ್ ತಂಡಕ್ಕೆ ಖಾಸಿಂ ಅಕ್ರಮ್ ಹಾಗೂ ಮುಬಾಸಿರ್ ಖಾನ್ ಆಸರೆಯಾದರು. 7ನೇ ವಿಕೆಟ್ಗೆ ಈ ಜೋಡಿಯು ಅರ್ಧಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ರಾಜವರ್ಧನ್ ಹಂಗರ್ಗೇಕರ್ ಖಾಸಿಂ ಅಕ್ರಮ್ (48) ರನ್ನು ಔಟ್ ಮಾಡಿದರು. ಇದರ ಬೆನ್ನಲ್ಲೇ ನಿಶಾಂತ್ ಸಿಂಧು ಎಸೆತದಲ್ಲಿ ಮುಬಾಸಿರ್ ಖಾನ್ (28) ಕೂಡ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು.
ಇನ್ನು ವಾಸಿಂ ಜೂನಿಯರ್ (8) ಹಾಗೂ ಶಹನವಾಝ್ ದಹನಿ (4) ವಿಕೆಟ್ ಉರುಳಿಸಿದ ರಾಜವರ್ಧನ್ ಹಂಗರ್ಗೇಕರ್ ಪಾಕಿಸ್ತಾನ್ ತಂಡವನ್ನು 48 ಓವರ್ಗಳಲ್ಲಿ 205 ರನ್ಗಳಿಗೆ ಆಲೌಟ್ ಮಾಡಿದರು.
ಟೀಮ್ ಇಂಡಿಯಾ ಪರ 8 ಓವರ್ಗಳಲ್ಲಿ ಕೇವಲ 42 ರನ್ ನೀಡಿ ರಾಜವರ್ಧನ್ ಹಂಗರ್ಗೇಕರ್ 5 ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಮಾನವ್ ಸುತಾರ್ 3 ವಿಕೆಟ್ ಕಬಳಿಸಿದರೆ, ನಿಶಾಂತ್ ಸಿಂಧು ಹಾಗೂ ರಿಯಾನ್ ಪರಾಗ್ ತಲಾ ಒಂದೊಂದು ವಿಕೆಟ್ ಪಡೆದರು. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು 50 ಓವರ್ಗಳಲ್ಲಿ 206 ರನ್ಗಳಿಸಬೇಕಿದೆ.
ಪಾಕಿಸ್ತಾನ್ ಎ ಪ್ಲೇಯಿಂಗ್ 11: ಸೈಮ್ ಅಯೂಬ್ , ಹಸೀಬುಲ್ಲಾ ಖಾನ್ , ಮೊಹಮ್ಮದ್ ಹ್ಯಾರಿಸ್ (ನಾಯಕ) , ಕಮ್ರಾನ್ ಗುಲಾಮ್ , ಸಾಹಿಬ್ಜಾದಾ ಫರ್ಹಾನ್ , ಒಮೈರ್ ಯೂಸುಫ್ , ಖಾಸಿಮ್ ಅಕ್ರಮ್ , ಮುಬಾಸಿರ್ ಖಾನ್ , ಮೆಹ್ರಾನ್ ಮುಮ್ತಾಜ್ , ಮೊಹಮ್ಮದ್ ವಾಸಿಮ್ ಜೂನಿಯರ್ , ಶಾನವಾಜ್ ದಹಾನಿ.
ಇದನ್ನೂ ಓದಿ: Yuvraj Singh: ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆಲ್ಲೋದು ಡೌಟ್: ಯುವರಾಜ್ ಸಿಂಗ್
ಭಾರತ ಎ ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಅಭಿಷೇಕ್ ಶರ್ಮಾ , ನಿಕಿನ್ ಜೋಸ್ , ಯಶ್ ಧುಲ್ (ನಾಯಕ) , ರಿಯಾನ್ ಪರಾಗ್ , ನಿಶಾಂತ್ ಸಿಂಧು , ಧ್ರುವ್ ಜುರೆಲ್ ( ವಿಕೆಟ್ ಕೀಪರ್ ) , ಮಾನವ್ ಸುತಾರ್ , ಹರ್ಷಿತ್ ರಾಣಾ , ನಿತೀಶ್ ರೆಡ್ಡಿ , ರಾಜವರ್ಧನ್ ಹಂಗರ್ಗೇಕರ್.