MLC 2023: 50 ರನ್‌ಗಳಿಗೆ ಶಾರುಖ್ ತಂಡ ಆಲೌಟ್! ಅಬ್ಬರಿಸಿದ ಡೇವಿಡ್, ಅಂಬಾನಿ ತಂಡಕ್ಕೆ ಸುಲಭ ಜಯ
MLC 2023: ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ, ಶಾ ಶಾರುಖ್ ಖಾನ್ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡುವುದರೊಂದಿಗೆ 105 ರನ್‌ಗಳ ಅಂತರದ ಭಾರಿ ಜಯ ಸಾಧಿಸಿದೆ.
ಅಮೇರಿಕಾದಲ್ಲಿ ಮೊದಲ ಬಾರಿಗೆ ಆಯೋಜನೆಯಾಗಿರುವ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (Major League Cricket) ತನ್ನ ಎರಡನೇ ಪಂದ್ಯವನ್ನಾಡಿದ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಒಡೆತನದ ಲಾಸ್ ಏಂಜಲೀಸ್ ನೈಟ್ ರೈಡರ್ಸ್ (MI New York vs LA Knight Riders) ತಂಡವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡುವುದರೊಂದಿಗೆ 105 ರನ್‌ಗಳ ಅಂತರದ ಭಾರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡ ಟೂರ್ನಿಯಲ್ಲಿ ಸತತ ಎರಡನೇ ಗೆಲುವನ್ನು ತನ್ನದಾಗಿಸಿಕೊಂಡಿದೆ. ತಂಡದ ಪರ 21 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 48 ರನ್ ಚಚ್ಚಿದ ಆಸೀಸ್ ಆಲ್ರೌಂಡರ್ ಟಿಮ್ ಡೇವಿಡ್ (Tim David) ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕೇವಲ 2 ರನ್ಗೆ 3 ವಿಕೆಟ್ ಪತನ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಖಿತು. 156 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ನೈಟ್ ರೈಡರ್ಸ್ ತಂಡದ ಆರಂಭ ಉತ್ತಮವಾಗಿರಲ್ಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಮಾರ್ಟಿನ್ ಗಪ್ಟಿಲ್ ಮತ್ತು ಉನ್ಮುಕ್ತ್ ಚಂದ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಮೊದಲ ಓವರ್ನ ಮೂರನೇ ಎಸೆತದಲ್ಲಿಯೇ ಮಾರ್ಟಿನ್ ಗಪ್ಟಿಲ್ ವಿಕೆಟ್ ಪತನವಾಯಿತು. ಇದಾದ ನಂತರ, ರಿಲೆ ರುಸ್ಸೋ ಮತ್ತು ನಿತೀಶ್ ಕುಮಾರ್ ಕೂಡ ಮೂರನೇ ಓವರ್‌ನಲ್ಲಿ ಪೆವಿಲಿಯನ್ ಸೇರಿಕೊಂಡರು. ಈ ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಮಾರ್ಟಿನ್ ಮತ್ತು ನಿತೀಶ್ ಖಾತೆ ಕೂಡ ತೆರೆಯಲಿಲ್ಲ. ರಿಲೆ ರುಸ್ಸೋ 2 ರನ್ ಬಾರಿಸಲಷ್ಟೇ ಶಕ್ತರಾದರು.
ನೈಟ್ ರೈಡರ್ಸ್ ತಂಡದ ಪೆವಿಲಿಯನ್ ಪರೇಡ್
ಕೇವಲ 2 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ನಾಲ್ಕನೇ ವಿಕೆಟ್ ನಡುವೆ 23 ರನ್‌ಗಳ ಜೊತೆಯಾಟವಿತ್ತು. ಆದರೆ, ಅದರ ನಂತರ, ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಮುಂದಿನ 25 ರನ್‌ಗಳಲ್ಲಿ ವಿಕೆಟ್ ಕೈಚೆಲ್ಲಿದರು. ಇಡೀ ತಂಡ ಒಟ್ಟು 50 ರನ್‌ಗಳನ್ನು ಸೇರಿಸಲು ಶಕ್ತವಾಗಿ, 105 ರನ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಕಳೆದುಕೊಂಡಿತು.
21 ಎಸೆತಗಳಲ್ಲಿ ಡೇವಿಡ್ ಬಿರುಗಾಳಿ!
ನೈಟ್ ರೈಡರ್ಸ್ ತಂಡಕ್ಕೂ ಮುನ್ನ ಮುಂಬೈ ಪರ ಅಬ್ಬರಿಸಿದ ಟಿಮ್ ಡೇವಿಡ್ ಕೇವಲ 21 ಎಸೆತಗಳನ್ನು ಎದುರಿಸಿ, 228 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿ, 4 ಸಿಕ್ಸರ್ ಸಹಿತ ಅಜೇಯ 48 ರನ್ ಬಾರಿಸಿದರು. ಈ ಪಂದ್ಯಕ್ಕೂ ಮುನ್ನ ನಡೆದ ಸ್ಯಾನ್ ಫ್ರಾನ್ಸಿಸ್ಕೊ ಯುನಿಕಾರ್ನ್ ಎದುರಿನ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್‌ನ ಮೊದಲ ಪಂದ್ಯದಲ್ಲೂ ಮಿಂಚಿದ್ದ ಡೇವಿಡ್ 28 ಎಸೆತಗಳಲ್ಲಿ ಅಜೇಯ 53 ರನ್ ಬಾರಿಸಿದರು. ಆದರೆ ಇದರ ಹೊರತಾಗಿಯೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ