ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಚಾಲೆಂಜರ್ ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡ ರೋಚಕ ಜಯ ಸಾಧಿಸಿದೆ. ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ ಜೇಕ್ ಫ್ರೇಸರ್ ಮೆಕ್ಗುರ್ಕ್ ಹಾಗೂ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 79 ರನ್ಗಳ ಜೊತೆಯಾಟವಾಡಿದ ಬಳಿಕ ಜೇಕ್ ಫ್ರೇಸರ್ (18) ವಿಕೆಟ್ ಒಪ್ಪಿಸಿದ್ದರು. ಅಷ್ಟರಲ್ಲಾಗಲೇ ಅಲೆನ್ ಅರ್ಧಶತಕ ಪೂರೈಸಿ ಅಬ್ಬರಿಸಲಾರಂಭಿಸಿದರು. ಪರಿಣಾಮ ಮೈದಾನದ ಮೂಲೆ ಮೂಲೆಯಲ್ಲೂ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು.
ಈ ಮೂಲಕ ಕೇವಲ 52 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಫಿನ್ ಅಲೆನ್ ಸ್ಪೋಟಕ ಸೆಂಚುರಿಯನ್ನು ಸಹ ಪೂರೈಸಿದರು. ಈ ಶತಕದ ನೆರವಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತು.
201 ರನ್ಗಳ ಕಠಿಣ ಗುರಿ ಬೆನ್ನತ್ತಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಫಾಫ್ ಡುಪ್ಲೆಸಿಸ್ ಮತ್ತು ಡೆವೊನ್ ಕಾನ್ವೆ ಉತ್ತಮ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. 4.1 ಓವರ್ಗಳಲ್ಲಿ 55 ರನ್ ಚಚ್ಚಿದ ಬಳಿಕ ಡುಪ್ಲೆಸಿಸ್ (45) ಔಟಾದರು. ಆ ಬಳಿಕ ಬಂದ ಆರೋನ್ ಹಾರ್ಡಿ 15 ರನ್ ಬಾರಿ ವಿಕೆಟ್ ಒಪ್ಪಿಸಿದರು.
ಇನ್ನು ಮಿಲಿಂದ್ ಕುಮಾರ್ (2) ಹಾಗೂ ಮಾರ್ಕಸ್ ಸ್ಟೋಯಿನಿಸ್ (1) ವಿಕೆಟ್ ಕೈಚೆಲ್ಲಿದ್ದು ಟೆಕ್ಸಾಸ್ ಸೂಪರ್ ಕಿಂಗ್ಸ್ ಪಾಲಿಗೆ ದುಬಾರಿಯಾಯಿತು. ಇದಾಗ್ಯೂ ಜೋಶ್ವ ಟ್ರೊಂಪ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಕಾನ್ವೆ ಟಿಎಸ್ಕೆ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು.
ಒಂದೆಡೆ ಡೆವೊನ್ ಕಾನ್ವೆ ಅರ್ಧಶತಕ ಪೂರೈಸಿದರೆ, ಮತ್ತೊಂದೆಡೆ ಟ್ರೊಂಪ್ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದರು. ಪರಿಣಾಮ ಕೊನೆಯ ಓವರ್ನಲ್ಲಿ ಟಿಎಸ್ಕೆ ತಂಡಕ್ಕೆ 17 ರನ್ಗಳ ಅವಶ್ಯಕತೆಯಿತ್ತು. ನಿರ್ಣಾಯಕ ಓವರ್ ಎಸೆದ ಪ್ಯಾಟ್ ಕಮಿನ್ಸ್ ಕೇವಲ 7 ರನ್ ಮಾತ್ರ ನೀಡಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ 10 ರನ್ಗಳ ರೋಚಕ ಜಯ ತಂದುಕೊಟ್ಟರು.
ಈ ಗೆಲುವಿನೊಂದಿಗೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ಗೆ ಪ್ರವೇಶಿಸಿದೆ. ಅಲ್ಲದೆ ಜುಲೈ 28 ರಂದು (ಭಾರತದಲ್ಲಿ ಜುಲೈ 29) ನಡೆಯಲಿರುವ ಫೈನಲ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಮ್ ತಂಡವನ್ನು ಎದುರಿಸಲಿದೆ.
ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪ್ಲೇಯಿಂಗ್ 11: ಫಿನ್ ಅಲೆನ್ , ಜೇಕ್ ಫ್ರೇಸರ್-ಮೆಕ್ಗುರ್ಕ್ , ಸಂಜಯ್ ಕೃಷ್ಣಮೂರ್ತಿ , ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್) , ಶೆರ್ಫೇನ್ ರುದರ್‌ಫೋರ್ಡ್ , ಹಸನ್ ಖಾನ್ , ಕೋರಿ ಅ್ಯಂಡರ್ಸನ್ (ನಾಯಕ) , ಪ್ಯಾಟ್ ಕಮಿನ್ಸ್ , ಹ್ಯಾರಿಸ್ ರೌಫ್ , ಕಾರ್ಮಿ ಲೆ ರೌಕ್ಸ್ , ಜುನಾಯ್ ಡ್ರೈಸ್‌ಡೇಲ್.
ಇದನ್ನೂ ಓದಿ: Maharaja Trophy T20: ಕರ್ನಾಟಕ ಟಿ20 ಲೀಗ್ನ 6 ತಂಡಗಳು ಪ್ರಕಟ
ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಡೆವೊನ್ ಕಾನ್ವೇ (ವಿಕೆಟ್ ಕೀಪರ್) , ಫಾಫ್ ಡು ಪ್ಲೆಸಿಸ್ (ನಾಯಕ) , ಆರೋನ್ ಹಾರ್ಡಿ , ಜೋಶ್ವ ಟ್ರೊಂಪ್, ಮಾರ್ಕಸ್ ಸ್ಟೊಯಿನಿಸ್ , ಮಿಲಿಂದ್ ಕುಮಾರ್ , ಕ್ಯಾಲ್ವಿನ್ ಸಾವೇಜ್ , ಒಟ್ನೀಲ್ ಬಾರ್ಟ್‌ಮನ್ , ಮೊಹಮ್ಮದ್ ಮೊಹ್ಸಿನ್ , ನೂರ್ ಅಹ್ಮದ್ , ಜಿಯಾ-ಉಲ್-ಹಕ್.