Finn Allen: ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಫಿನ್ ಅಲೆನ್
MLC 2024: ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ನ್ಯೂಝಿಲೆಂಡ್ ಕ್ರಿಕೆಟಿಗ ಫಿನ್ ಅಲೆನ್ ಟಿ20 ಕ್ರಿಕೆಟ್ನಲ್ಲಿ 3500 ರನ್ ಪೂರೈಸಿದ್ದಾರೆ. ಹಾಗೆಯೇ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸೆಂಚುರಿ ಬಾರಿಸಿದ ಕೆಲವೇ ಕೆಲವು ಆಟಗಾರರಲ್ಲಿ ಗುರುತಿಸಿಕೊಂಡಿದ್ದಾರೆ. ಅಂದಹಾಗೆ ಇದೇ ಫಿನ್ ಅಲೆನ್ ಈ ಆರ್ಸಿಬಿ ತಂಡದಲ್ಲಿದ್ದರು ಎಂಬುದು ವಿಶೇಷ.
Updated on: Jul 27, 2024 | 9:31 AM

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಝಿಲೆಂಡ್ನ ಫಿನ್ ಅಲೆನ್ (Finn Allen) ಸ್ಪೋಟಕ ಸೆಂಚುರಿ ಸಿಡಿಸಿದ್ದಾರೆ. ಡಲ್ಲಾಸ್ನಲ್ಲಿ ನಡೆದ ಚಾಲೆಂಜರ್ (ಎಲಿಮಿನೇಟರ್) ಪಂದ್ಯದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತು ಟೆಕ್ಸಾಸ್ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟಿಎಸ್ಕೆ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡಕ್ಕೆ ಆರಂಭಿಕ ಆಟಗಾರ ಫಿನ್ ಅಲೆನ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಅಲೆನ್ ಜೇಕ್ ಫ್ರೇಸರ್ ಮೆಕ್ಗುರ್ಕ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 7 ಓವರ್ ಆಗುವಷ್ಟರಲ್ಲಿ ತಂಡದ ಮೊತ್ತ 79 ಕ್ಕೇರಿತು. ಈ ಹಂತದಲ್ಲಿ ಫ್ರೇಸರ್ (18) ಔಟಾದರು.

ಇದಾಗ್ಯೂ ಆರ್ಭಟ ಮುಂದುವರೆಸಿದ ಫಿನ್ ಅಲೆನ್ ಟೆಕ್ಸಾಸ್ ಸೂಪರ್ ಕಿಂಗ್ಸ್ ಬೌಲರ್ಗಳ ಬೆಂಡೆತ್ತಿದರು. ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದ ಅಲೆನ್ 52 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಸ್ಪೋಟಕ ಶತಕ ಪೂರೈಸಿ ಬ್ಯಾಟ್ ಮೇಲೆತ್ತಿದರು. ಆದರೆ ಶತಕದ ಬೆನ್ನಲ್ಲೇ ಅಲೆನ್ (101) ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

ಫಿನ್ ಅಲೆನ್ ಅವರ ಈ ಸ್ಪೋಟಕ ಸೆಂಚುರಿ ನೆರವಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಕಲೆಹಾಕಿತು. ಈ ಮೂಲಕ ನಿರ್ಣಾಯಕ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಕಠಿಣ ಗುರಿ ನೀಡಿದೆ.

ಅಂದಹಾಗೆ ಫಿನ್ ಅಲೆನ್ ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿದ್ದರು. ಐಪಿಎಲ್ 2021 ರಿಂದ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಅಲೆನ್ ಅವರನ್ನು ಒಮ್ಮೆಯೂ ಕಣಕ್ಕಿಳಿಸಿರಲಿಲ್ಲ ಎಂಬುದು ವಿಶೇಷ. ಅಂದರೆ ಮೂರು ವರ್ಷಗಳ ಕಾಲ ಫಿನ್ ಅಲೆನ್ ಆರ್ಸಿಬಿ ಪರ ಬೆಂಚ್ ಕಾದಿದ್ದರು. ಇದೀಗ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಗಮನ ಸೆಳೆದಿರುವ ಫಿನ್ ಅಲೆನ್ ಮತ್ತೆ ಐಪಿಎಲ್ಗೆ ಎಂಟ್ರಿ ಕೊಡುವ ನಿರೀಕ್ಷೆಯಲ್ಲಿದ್ದಾರೆ.
