ಏನು ಆಗ್ಬೇಕಿತ್ತೋ ಅದುವೇ ಆಗಿದೆ… ಟೀಮ್ ಇಂಡಿಯಾ ವಿರುದ್ಧ ಕೈಫ್ ವಾಗ್ದಾಳಿ
India vs Australia: ಅಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-1 ಅಂತರದಿಂದ ಸೋಲನುಭವಿಸಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಉಳಿದ ಮೂರು ಮ್ಯಾಚ್ಗಳಲ್ಲೂ ಪರಾಕ್ರಮ ಮೆರೆಯುವ ಮೂಲಕ ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆದ್ದುಕೊಂಡಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿರುವ ಟೀಮ್ ಇಂಡಿಯಾ ವಿರುದ್ದ ವಾಗ್ದಾಳಿ ಮುಂದುವರೆದಿದೆ. ಅದರಲ್ಲೂ ಭಾರತೀಯ ಬ್ಯಾಟರ್ಗಳು ಟೆಸ್ಟ್ ಪಂದ್ಯವನ್ನಾಡಿದ ರೀತಿಯ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆಗಳನ್ನೆತ್ತಿದ್ದಾರೆ. ಇವರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ಒಬ್ಬರು. 3-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತಿರುವ ಟೀಮ್ ಇಂಡಿಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೈಫ್, ಈಗ ಏನು ಆಗಿದೆಯೋ ಅದು ಸರಿಯಾಗಿಯೇ ಆಗಿದೆ. ಇದು ಭಾರತ ತಂಡದ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ್ ವಿರುದ್ಧ ಗೆದ್ದರೆ ಸಾಕು..!
ಸಿಡ್ನಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಹೀನಾಯ ಸೋಲಿನ ಬಳಿಕ ಮೊಹಮ್ಮದ್ ಕೈಫ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತ ತಂಡವು ಟೆಸ್ಟ್ ಪಂದ್ಯಗಳನ್ನಾಡುತ್ತಿರುವ ರೀತಿಯನ್ನು ಪ್ರಶ್ನಿಸಿದ್ದಾರೆ.
ಭಾರತ ತಂಡ ಈಗ ಸೋತಿದೆ. ಆದರೆ ಫೆಬ್ರವರಿ 23 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಗೆಲ್ಲುತ್ತೀರಿ. ಅಲ್ಲಿಗೆ ಎಲ್ಲರೂ ಎಲ್ಲವನ್ನು ಮರೆತು ಚಪ್ಪಾಳೆ ತಟ್ಟುತ್ತಾರೆ. ನಿಮ್ಮ ವೈಟ್ ಬಾಲ್ ಕ್ರಿಕೆಟ್ನ ಸಾಧನೆಯನ್ನು ಹಾಡಿ ಹೊಗಳುತ್ತಾರೆ. ಏಕೆಂದರೆ ನಾವು ಸೀಮಿತ ಓವರ್ಗಳಲ್ಲಿ ಚಾಂಪಿಯನ್ ತಂಡ.
ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ನಮ್ಮ ಪ್ರದರ್ಶನ ಹೇಗಿದೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಬೇಕಿದೆ. ರೆಡ್ ಬಾಲ್ ಕ್ರಿಕೆಟ್ನಲ್ಲೂ ತನ್ನ ಪ್ರದರ್ಶನವನ್ನು ಸುಧಾರಿಸಿಕೊಳ್ಳುವುದು ಅನಿವಾರ್ಯ. ಇದುವೇ ಸತ್ಯ… ಈ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಸುಮ್ಮನೆ ಚಾಂಪಿಯನ್ ಆಗಲ್ಲ:
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಬೇಕಾದರೆ, ನಾವು ಟೆಸ್ಟ್ ಪಂದ್ಯಕ್ಕಾಗಿ ಬಲಿಷ್ಠ ತಂಡವನ್ನು ರೂಪಿಸಬೇಕು. ಟರ್ನಿಂಗ್ ಟ್ರ್ಯಾಕ್‌ನಲ್ಲಿ ಆಡಲು ಕಲಿಯಬೇಕು. ಆಸ್ಟ್ರೇಲಿಯಾದಲ್ಲಿ ನಾವು ಸೀಮಿಂಗ್ ಟ್ರ್ಯಾಕ್ ಪಡೆಯುತ್ತೇವೆ. ಅದಕ್ಕಾಗಿ ಸಿದ್ಧಗೊಳ್ಳಬೇಕು. ಇದೇ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ನಮ್ಮವರಿಗೆ ತಿಳಿಯುತ್ತಿಲ್ಲ.
ನಾವು ಕೇವಲ ಏಕದಿನ ಮತ್ತು ಟಿ20 ಕ್ರಿಕೆಟ್ನ ಗುಂಗಿನಲ್ಲಿದ್ದೇವೆ. ಆದರೆ ಟೆಸ್ಟ್ ಕ್ರಿಕೆಟ್ನಲ್ಲಿ ತುಂಬಾ ಹಿಂದೆ ಉಳಿದಿದ್ದೇವೆ ಎಂಬುದೇ ನಗ್ನ ಸತ್ಯ. ಇದನ್ನು ಅರ್ಥ ಮಾಡಿಕೊಂಡು ತುಂಬಾ ಕೆಲಸ ಮಾಡಬೇಕಿದೆ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಮೊಹಮ್ಮದ್ ಕೈಫ್ ವಿಡಿಯೋ
Khari khari baat.. Kadwa sach#TestCricket #BGT #AUSvIND#CricketWithKaif11 pic.twitter.com/WXFJY9aLSq
— Mohammad Kaif (@MohammadKaif) January 5, 2025
ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಬೇಕಿದ್ದರೆ, ಭಾರತ ತಂಡದಲ್ಲಿರುವ ಆಟಗಾರರು ದೇಶಿಯ ಕ್ರಿಕೆಟ್ ಆಡಲೇಬೇಕು. ಟರ್ನಿಂಗ್ ಟ್ರ್ಯಾಕ್‌ನಲ್ಲಿ ಆಡಿ ಕಲಿಯಬೇಕು. ಸೀಮಿಂಗ್ ಟ್ರ್ಯಾಕ್‌ನಲ್ಲಿ ಅಭ್ಯಾಸ ಮಾಡಬೇಕು. ಇಲ್ಲದಿದ್ದರೆ ನಾವು ಗೆಲ್ಲಲು ಸಾಧ್ಯವಿಲ್ಲ ಎಂದು ಮೊಹಮ್ಮದ್ ಕೈಫ್ ಒತ್ತಿ ಹೇಳಿದ್ದಾರೆ.
ಏನು ಆಗಿದೆಯೋ ಸರಿಯಾಗಿಯೇ ಆಗಿದೆ:
ಈಗ ನಾವು 3-1 ಅಂತರದಿಂದ ಸರಣಿ ಸೋತಿದ್ದೇವೆ. ಈ ಸೋಲು ನಮ್ಮ ಪಾಲಿಗೆ ಎಚ್ಚರಿಕೆಯ ಕರೆಗಂಟೆ. ಏನು ಆಗಬೇಕಿತ್ತೋ ಅದುವೇ ಆಗಿದೆ. ಹೀಗಾಗಿ ಇನ್ಮುಂದೆಯಾದರೂ ನೀವು ಟೆಸ್ಟ್ ಪಂದ್ಯದತ್ತ ಗಮನ ಹರಿಸಬೇಕು. ನಾನು ಇಲ್ಲಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಬಗ್ಗೆ ಮಾತನಾಡುತ್ತಿಲ್ಲ. ಇದು ಒಂದು ತಂಡದ ತಪ್ಪು. ಎಲ್ಲಾ ಅಟಗಾರರ ತಪ್ಪು.
ಪ್ರತಿಯೊಬ್ಬರಿಗೂ ರಣಜಿ ಟೂರ್ನಿ ಆಡುವ ಅವಕಾಶ ಸಿಗುತ್ತದೆ. ಐದು ದಿನಗಳ ಕಾಲ ಪಂದ್ಯ ನಡೆಯುವುದರಿಂದ ನಾವು ದೀರ್ಘಾವಧಿಯ ಪಂದ್ಯಗಳಿಗೆ ಸಿದ್ಧಗೊಳ್ಳಬಹುದು. ಇದಕ್ಕಾಗಿ ಅಭ್ಯಾಸ ಮಾಡುವುದು ಮುಖ್ಯ. ನಿಜವಾದ ಕ್ರಿಕೆಟ್ ಟೆಸ್ಟ್ ಕ್ರಿಕೆಟ್ ಆಗಿದೆ. ನೀವು ನಿರಂತರವಾಗಿ ಟೆಸ್ಟ್ ಪಂದ್ಯಗಳಲ್ಲಿ ಅಭ್ಯಾಸ ಮಾಡದ ಹೊರತು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ಸಾಧ್ಯವಿಲ್ಲ. ಇದು ಸತ್ಯ ಸಂಗತಿ.
ಇದನ್ನೂ ಓದಿ: ಹೀನಾಯ ಸೋಲುಗಳ ಸರಮಾಲೆ: ಟೀಮ್ ಇಂಡಿಯಾಗೆ ‘ಗಂಭೀರ’ ಸಮಸ್ಯೆ
ಈಗ ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಸಮಯ ಬಂದಿದೆ. ಹೀಗಾಗಿ ಇನ್ಮುಂದೆಯಾದರೂ ಟೆಸ್ಟ್ ಕ್ರಿಕೆಟ್ನತ್ತ ಗಮನ ಹರಿಸುವಂತೆ ಟೀಮ್ ಇಂಡಿಯಾ ಆಟಗಾರರಿಗೆ ಮೊಹಮ್ಮದ್ ಕೈಫ್ ಸಲಹೆ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ