ಸೆಮೀಸ್ಗೂ ಮುನ್ನ ಐಸಿಯುನಲ್ಲಿದ್ದ ಅರ್ಧಶತಕ ಚಚ್ಚಿದ್ದ ರಿಜ್ವಾನ್: ಶಾಕಿಂಗ್ ಘಟನೆ ಬಹಿರಂಗ
ಪಾಕಿಸ್ತಾನ ಕ್ರಿಕೆಟ್ ತಂಡ (Pakistan Cricket Team) ಐಸಿಸಿ ಟಿ20 ವಿಶ್ವಕಪ್ 2021ರ (T20 World Cup Semi Final) ಸೆಮಿ ಫೈನಲ್ ಕದನದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಾಗಿದೆ. ಆಸ್ಟ್ರೇಲಿಯಾ (Pakistan vs Ausstralia) ವಿರುದ್ಧ ಗುರುವಾರ ನಡೆದ ಕದನದಲ್ಲಿ ಬಾಬರ್ ಅಜಾಮ್ (Babar Azam) ಪಡೆ ಕೆಲವೊಂದು ತಪ್ಪುಗಳನ್ನು ಎಸೆದು ಸೋಲು ಕಾಣುವ ಮೂಲಕ ಪ್ರಶಸ್ತಿ ಗೆಲ್ಲುವ ಆಸೆಯನ್ನು ಕೈಚೆಲ್ಲಿತು. ಇತ್ತ ಪಾಕಿಸ್ತಾನ ವಿಶ್ವಕಪ್ನಿಂದ ಹೊರಬಿದ್ದ ಬೆನ್ನಲ್ಲೇ ಕೆಲ ಅಚ್ಚರಿ ಮಾಹಿತಿಗಳು ಬಹಿರಂಗವಾಗುತ್ತಿದೆ. ಮುಖ್ಯವಾಗಿ ಗುರುವಾರ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದ ಮೊಹಮ್ಮದ್ ರಿಜ್ವಾನ್ (Mohammad Rizwan) ಪಂದ್ಯ ಆರಂಭಕ್ಕೂ ಮುನ್ನ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಹೌದು, ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ತಂಡದ ವೈದ್ಯ ನಜೀಬ್ ಸೊಮ್ರೋ, ‘ನವೆಂಬರ್ 9 ರಂದು ಮೊಹಮ್ಮದ್ ರಿಜ್ವಾನ್ ಅವರಿಗೆ ಶ್ವಾಸನಾಳದೊಳಗೆ ಉರಿಯೂತ ಕಾಣಿಸಿಕೊಂಡಿತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೆವು. ಅವರು ಗುಣಮುಖರಾಗಲು ಎರಡು ದಿನ ಐಸಿಯುನಲ್ಲಿ ಇದ್ದರು. ಮೊಹಮ್ಮದ್ ರಿಜ್ವಾನ್ ಯೋಧನಿದ್ದಂತೆ. ಪಂದ್ಯದ ದಿನ ಉತ್ಸಾಹದಿಂದ ತಂಡ ಕೂಡಿಕೊಂಡರು. ಅವರು ದೇಶಕ್ಕಾಗಿ ಬ್ಯಾಟಿಂಗ್ ಮಾಡಿದರು’ ಎಂದು ಹೇಳಿದ್ದಾರೆ.
Can you imagine this guy played for his country today & gave his best.
He was in the hospital last two days.
Massive respect @iMRizwanPak .
Hero. pic.twitter.com/kdpYukcm5I— Shoaib Akhtar (@shoaib100mph) November 11, 2021
ಇನ್ನು ಈ ಬಗ್ಗೆ ಪಾಕ್ ತಂಡದ ನಾಯಕ ಬಾಬರ್ ಅಜಾಮ್ ಕೂಡ ಮಾತನಾಡಿದ್ದು, ‘ರಿಜ್ವಾನ್ ತಂಡಕ್ಕಾಗಿ ಏನು ಬೇಕಾದರು ಮಾಡಬಲ್ಲರು. ಅದಕ್ಕೆ ಇಂದಿನ ಪಂದ್ಯದಲ್ಲಿ ಅವರು ಆಡಿದ ರೀತಿಯೇ ಸಾಕ್ಷಿ. ನಾನು ಅವರನ್ನು ನೋಡಿದಾಗ ಸ್ವಲ್ಪ ಆಯಾಸದಿಂದ ಇದ್ದರು. ಅವರ ಬಳಿ ಆರೋಗ್ಯದ ಬಗ್ಗೆ ವಿಚಾರಿಸಿದಾಗ, ಇಲ್ಲ ನಾನು ಗುಣವಾಗಿದ್ದೇನೆ ಇವತ್ತಿನ ಪಂದ್ಯ ಆಡುತ್ತೇನೆ ಎಂದು ಹೇಳಿದರು. ನನಗೆ ರಿಜ್ವಾನ್ ಆಟದ ಮೇಲೆ ನಂಬಿಕೆಯಿತ್ತು’ ಎಂದು ಬಾಬರ್ ಹೇಳಿದ್ದಾರೆ.
ರಿಜ್ವಾನ್ ಹಾಗೂ ಶೋಯೆಬ್ ಮಲಿಕ್ ಇಬ್ಬರು ಕೂಡ ಜ್ವರದಿಂದ ಬಳಲುತ್ತಿದ್ದ ಕಾರಣ ಆಸ್ಟ್ರೇಲಿಯಾ ವಿರುದ್ಧದ ಸೆಮಿ ಫೈನಲ್ ಪಂದ್ಯಕ್ಕೂ ಮುನ್ನಾದಿನ ಅಭ್ಯಾಸದಲ್ಲಿ ಭಾಗಿಯಾಗಿರಲಿಲ್ಲ. ಈ ಇಬ್ಬರು ಆಟಗಾರರು ಕೂಡ ಕೊರೊನಾ ವೈರಸ್ ಪರೀಕ್ಷೆಗೆ ಒಳಪಟ್ಟಿದ್ದರು. ಆದರೆ ಇಬ್ಬರ ವರದಿ ಕೂಡ ನೆಗೆಟಿವ್ ಬಂದಿತ್ತು.
ಇನ್ನು ರಿಜ್ವಾನ್ ಅಂತರರಾಷ್ಟ್ರೀಯ ಟಿ20ಯ ಕ್ಯಾಲೆಂಡರ್ ವರ್ಷದಲ್ಲಿ 1000 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಗುರುವಾರ ಆಸ್ಪ್ರೇಲಿಯಾ ವಿರುದ್ಧ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ರಿಜ್ವಾನ್ ಈ ದಾಖಲೆ ಬರೆದರು. 2021ರಲ್ಲಿ ಉತ್ಕೃಷ್ಟ ಲಯದಲ್ಲಿರುವ ರಿಜ್ವಾನ್ 23 ಪಂದ್ಯಗಳನ್ನು ಆಡಿದ್ದು 20 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 1033 ರನ್ ಕಲೆಹಾಕಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 86.08 ಇದ್ದು, 136.45ರ ಸ್ಟ್ರೈಕ್‌ರೇಟ್‌ನಲ್ಲಿ ರಿಜ್ವಾನ್ ರನ್ ಗಳಿಸಿದ್ದಾರೆ.
ಮೊಹಮ್ಮದ್ ರಿಜ್ವಾನ್(67) ಹಾಗೂ ಫಖರ್ ಜಮಾನ್(55) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವು ಕೇವಲ 4 ವಿಕೆಟ್ ಕಳೆದುಕೊಂಡು 176 ರನ್ಗಳ ಸವಾಲಿನ ಮೊತ್ತ ಕಲೆಹಾಕಿತ್ತು. ಆದರೆ, ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿತು.
(Mohammad Rizwan in ICU bed inside a hospital before T20 World Cup 2021 second semi-final Pakistan vs Australia)
Published On - 1:35 pm, Fri, 12 November 21