‘ಸರ್ಫರಾಜ್​ಗೆ ಆಡುವ ಅವಕಾಶ ಕೊಡಲ್ಲ ಎಂದಿದ್ದ ರಿಜ್ವಾನ್’; ಪಾಕ್ ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ

| Updated By: ಪೃಥ್ವಿಶಂಕರ

Updated on: Sep 22, 2022 | 3:44 PM

ಸರ್ಫರಾಜ್ ಮತ್ತೆ ತಂಡಕ್ಕೆ ಮರಳಲು ನಾನು ಎಂದಿಗೂ ಬಿಡುವುದಿಲ್ಲ ಎಂದು ರಿಜ್ವಾನ್ ಹೇಳಿದ್ದರು ಎಂಬ ವಿಚಾರವನ್ನು ಕ್ರಿಕೆಟಿಗರೊಬ್ಬರು ನನ್ನ ಬಳಿ ಹೇಳಿದ್ದಾರೆ.

‘ಸರ್ಫರಾಜ್​ಗೆ ಆಡುವ ಅವಕಾಶ ಕೊಡಲ್ಲ ಎಂದಿದ್ದ ರಿಜ್ವಾನ್’; ಪಾಕ್ ಮಾಜಿ ಕ್ರಿಕೆಟಿಗನ ಸ್ಫೋಟಕ ಹೇಳಿಕೆ
ಸರ್ಫರಾಜ್, ರಿಜ್ವಾನ್
Follow us on

ಒಡಲಲ್ಲಿ ಅಗ್ನಿ ಪರ್ವತವನ್ನೇ ಹೊತ್ತುಕೊಂಡು ಮೇಲೆ ಶಾಂತ ರೂಪದಲ್ಲಿ ವರ್ತಿಸುವ ಸಮುದ್ರದಂತೆ ಕೆಲವು ದಿನಗಳ ತನಕ ಮೌನವಾಗಿದ್ದ ಪಾಕ್ ಕ್ರಿಕೆಟ್​ ಮಂಡಳಿಯಲ್ಲಿನ ಆರೋಪ, ಪ್ರತ್ಯಾರೋಪಗಳ ಸರಮಾಲೆ ಮತ್ತೆ ಶುರುವಾಗಿದೆ. ಪಾಕ್ ತಂಡ (Pakistan Cricket Team) ಏಷ್ಯಾಕಪ್‌ನಲ್ಲಿ ಸೋತಿದ್ದೆ ಬಂತು, ಈ ಅವಕಾಶಕ್ಕಾಗಿ ಕಾಯುತ್ತಿದ್ದ ಪಾಕ್ ತಂಡದ ಮಾಜಿ ಆಟಗಾರರು ತಮ್ಮ ಆಕ್ರೋಶವನ್ನು ಹೊರಹಾಕಲು ಪ್ರಾರಂಭಿಸಿದ್ದಾರೆ. ಹೀಗಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ತಂಡದ ಬಗ್ಗೆ ಆಗಾಗ್ಗೆ ಮಾಧ್ಯಮಗಳಲ್ಲಿ ಕೆಲವು ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಾರೆ, ಅದರ ನಂತರ ಎಲ್ಲೆಡೆ ಈ ಸುದ್ದಿ ಸಂಚಲನ ಮೂಡಿಸುತ್ತದೆ. ಇದಕ್ಕೆ ಪೂರಕವೆಂಬಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಸಿಕಂದರ್ ಬಖ್ತ್ (Sikander Bakht) ನೀಡಿರುವ ಹೇಳಿಕೆಯೊಂದು ಪಾಕ್ ಕ್ರಿಕೆಟಿಗರಲ್ಲಿರುವ ಅಸೂಯೆತನವನ್ನು ಬಹಿರಂಗಗೊಳಿಸಿದೆ. ಅಷ್ಟಕ್ಕೂ ಸಿಕಂದರ್, ತಂಡದ ಹಾಲಿ ಆಟಗಾರನ ಬಗ್ಗೆ ಹೇಳಿಕೆ ನೀಡಿದ್ದು, ತಂಡದ ಸ್ಟಾರ್ ಬ್ಯಾಟರ್ ರಿಜ್ವಾನ್ (Mohammad Rizwan), ಮಾಜಿ ನಾಯಕ ಸರ್ಫರಾಜ್ ಅಹ್ಮದ್‌ಗೆ (Sarfaraz Ahmed) ತಂಡಕ್ಕೆ ಮರಳಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಸಿಕಂದರ್ ಭಕ್ತ್ ಸೆನ್ಸೇಷನಲ್ ಸ್ಟೇಟ್​ಮೆಂಟ್

ಜಿಯೋ ಸೂಪರ್ ಜೊತೆಗಿನ ಸಂವಾದದಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಸಿಕಂದರ್ ಬಖ್ತ್, ಸರ್ಫರಾಜ್ ಈಗ ತಂಡದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ನಮ್ಮ ಕ್ರಿಕೆಟ್ ಸಮುದಾಯವು ತುಂಬಾ ಚಿಕ್ಕದಾಗಿದೆ, ಆದ್ದರಿಂದ ನಾವು ಬಹಳಷ್ಟು ವಿಷಯಗಳನ್ನು ತಿಳಿದುಕೊಳ್ಳುತ್ತೇವೆ. ಆದ್ದರಿಂದ ಸರ್ಫರಾಜ್ ಮತ್ತೆ ತಂಡಕ್ಕೆ ಮರಳಲು ನಾನು ಎಂದಿಗೂ ಬಿಡುವುದಿಲ್ಲ ಎಂದು ರಿಜ್ವಾನ್ ಹೇಳಿದ್ದರು ಎಂಬ ವಿಚಾರವನ್ನು ಕ್ರಿಕೆಟಿಗರೊಬ್ಬರು ನನ್ನ ಬಳಿ ಹೇಳಿದ್ದಾರೆ. ಇದಕ್ಕೆ ಕಾರಣವೂ ಇದ್ದು, ಸರ್ಫರಾಜ್ ತಂಡದಲ್ಲಿ ಇದ್ದಾಗ ರಿಜ್ವಾನ್​ಗೆ ಆಡಲು ಅವಕಾಶ ನೀಡಲಿಲ್ಲ. ಈಗ ಪರಿಸ್ಥಿತಿ ತದ್ವಿರುದ್ಧವಾಗಿದೆ ಎಂದು ಸಿಕಂದರ್ ಬಖ್ತ್ ಹೇಳಿದ್ದಾರೆ. ಅಲ್ಲದೆ, ಈ ಮಾಹಿತಿ ನನಗೆ ಒಬ್ಬ ಸಹ ಕ್ರಿಕೆಟಿಗನಿಂದ ತಿಳಿದುಬಂದಿದ್ದು, ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

10 ತಿಂಗಳಿಂದ ಸರ್ಫರಾಜ್​ಗಿಲ್ಲ ಅವಕಾಶ

ಸರ್ಫರಾಜ್ ಅಹ್ಮದ್ ಕಳೆದ 10 ತಿಂಗಳುಗಳಿಂದ ಪಾಕಿಸ್ತಾನ ತಂಡದಿಂದ ಹೊರಗುಳಿದಿದ್ದಾರೆ. ಈ ಆಟಗಾರ ನವೆಂಬರ್ 22, 2021 ರಂದು ಮಿರ್‌ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಆ ಬಳಿಕ ತಂಡಕ್ಕೆ ಆಯ್ಕೆಯಾದ ರಿಜ್ವಾನ್ ಪಾಕಿಸ್ತಾನದ ಖಾಯಂ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ. T20 ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನ ಉತ್ತಮವಾಗಿದ್ದು, ಅವರು ODI ಮತ್ತು ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. T20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವ ಮೊದಲು, ರಾಷ್ಟ್ರೀಯ T20 ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸರ್ಫರಾಜ್ ಟಿ20 ವಿಶ್ವಕಪ್​ಗೆ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಅವರ ಸ್ಥಾನದಲ್ಲಿ ಯುವ ವಿಕೆಟ್‌ಕೀಪರ್ ಹ್ಯಾರಿಸ್‌ಗೆ ತಂಡದಲ್ಲಿ ಸ್ಥಾನ ನೀಡಲಾಯಿತು.

ಅದ್ಭುತ ಫಾರ್ಮ್​ನಲ್ಲಿರುವ ಮೊಹಮ್ಮದ್ ರಿಜ್ವಾನ್

ಮೊಹಮ್ಮದ್ ರಿಜ್ವಾನ್ ಅವರ ಅಂಕಿಅಂಶಗಳನ್ನು ಗಮನಿಸಿದರೆ, ಸರ್ಫರಾಜ್ ತಂಡಕ್ಕೆ ಎಂಟ್ರಿಕೊಡುವುದು ಗಗನ ಕುಸುಮದಂತೆ ಬಾಸವಾಗುವುದಂತೂ ಖಚಿತ. ಪಾಕಿಸ್ತಾನದ ಪರ 24 ಟೆಸ್ಟ್‌ಗಳನ್ನಾಡಿರುವ ಮೊಹಮ್ಮದ್ ರಿಜ್ವಾನ್, 41ಕ್ಕೂ ಹೆಚ್ಚು ಸರಾಸರಿಯಲ್ಲಿ 1232 ರನ್ ಗಳಿಸಿದ್ದಾರೆ. ಜೊತೆಗೆ ಟಿ20 ಗಳಲ್ಲಿ 51 ಕ್ಕಿಂತ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ಈ ವಿಕೆಟ್‌ಕೀಪರ್, ಶತಕ ಮತ್ತು 17 ಅರ್ಧ ಶತಕಗಳನ್ನು ಒಳಗೊಂಡಂತೆ 2000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

Published On - 3:44 pm, Thu, 22 September 22