IND vs ENG: ಆಂಗ್ಲರ ನೆಲದಲ್ಲಿ ಐತಿಹಾಸಿಕ ಸರಣಿ ಗೆದ್ದು ಟೀಂ ಇಂಡಿಯಾ ಸೃಷ್ಟಿಸಿದ ಪ್ರಮುಖ 10 ದಾಖಲೆಗಳಿವು..!
IND vs ENG: ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ವನಿತಾ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಭಾರತದ ಮಹಿಳಾ ಕ್ರಿಕೆಟ್ನ (indian women cricket team) ಸುವರ್ಣ ಯುಗ ಆರಂಭವಾಗಿದೆ. ಒಂದು ಕಾಲದಲ್ಲಿ ಟೀಂ ಇಂಡಿಯಾದ ಪುರುಷರ ತಂಡ ತೊಟ್ಟು ಬೀಸಾಡುತ್ತಿದ್ದ ಜೆರ್ಸಿಗಳನ್ನು ತಮ್ಮ ಅಳತೆಗೆ ಹೊಲಿಸಿಕೊಂಡು ಕ್ರಿಕೆಟ್ ಮೈದಾನಕ್ಕಿಳಿಯುತ್ತಿದ್ದ ಸಿಂಹಿಣಿಯರು ಈಗ ವಿದೇಶದಲ್ಲೂ ಸರಣಿ ಗೆಲ್ಲುವ ಮಟಕ್ಕೆ ಬೆಳೆದು ನಿಂತಿದ್ದಾರೆ. ಬರೋಬ್ಬರಿ 23 ವರ್ಷಗಳ ನಂತರ ಆಂಗ್ಲರ ನೆಲದಲ್ಲಿ ಐತಿಹಾಸಿಕ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ, ನಾವು ಕೂಡ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಬ್ಬರು ಎಂಬುದನ್ನು ಸಾಭೀತುಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ವನಿತಾ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಟೀಂ ಇಂಡಿಯಾದ ಗೆಲುವಿನಲ್ಲಿ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅವರ 143 ರನ್‌ಗಳ ಬೆರಗುಗೊಳಿಸುವ ಇನ್ನಿಂಗ್ಸ್ ಪ್ರಮುಖ ಕಾರಣವಾಯಿತು. ಈ ಇನ್ನಿಂಗ್ಸ್ ಆಧಾರದ ಮೇಲೆ ಟೀಂ ಇಂಡಿಯಾ (Team India) 5 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿತು. ಇದು ವಿದೇಶಿ ನೆಲದಲ್ಲಿ ಭಾರತ ತಂಡ ಗಳಿಸಿದ ಗರಿಷ್ಠ ಸ್ಕೋರ್ ಕೂಡ ಆಗಿತ್ತು. ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆಂಗ್ಲ ತಂಡ ಟೀಂ ಇಂಡಿಯಾ ವನಿತೆಯರ ಬಿಗಿ ಬೌಲಿಂಗ್ಗೆ ಸುಸ್ತಾಗಿ 88 ರನ್ಗಳಿಂದ ಸೋಲೊಪ್ಪಿಕೊಂಡಿತು. ಈ ಸರಣಿ ಗೆಲುವಿನೊಂದಿಗೆ ಟೀಂ ಇಂಡಿಯಾ ವನಿತಾ ಬಳಗ ಏಕದಿನ ಕ್ರಿಕೆಟ್‌ನಲ್ಲಿ ಹತ್ತು ಹಲವು ದಾಖಲೆಗಳನ್ನು ನಿರ್ಮಿಸಿತು.
- ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 50 ಓವರ್‌ಗಳಲ್ಲಿ 333 ರನ್‌ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತು. ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ 300ರ ಗಡಿ ದಾಟಿದ್ದು ಇದು ನಾಲ್ಕನೇ ಬಾರಿ. ಈ ಪೈಕಿ ಈ ವರ್ಷ ಎರಡು ಬಾರಿ ಈ ಪವಾಡ ನಡೆದಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ವನಿತಾ ತಂಡ 317 ರನ್ ಟಾರ್ಗೆಟ್ ನೀಡಿದ್ದರು.
- ಇದು ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ಗರಿಷ್ಠ ಸ್ಕೋರ್ ಕೂಡ ಆಗಿದೆ. ಅಷ್ಟೇ ಅಲ್ಲ, ಇಂಗ್ಲೆಂಡ್‌ನಲ್ಲಿ ಭಾರತದ ಅತಿ ದೊಡ್ಡ ಏಕದಿನ ಸ್ಕೋರ್ ಕೂಡ ಇದಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧ ಭಾರತದ ಗರಿಷ್ಠ ಸ್ಕೋರ್ 281 ರನ್ ಆಗಿತ್ತು. ಇದು 2017 ರಲ್ಲಿ ಇಂಗ್ಲೆಂಡ್‌ನಲ್ಲಿಯೇ ಬಂದಿತ್ತು.
- ಹರ್ಮನ್ಪ್ರೀತ್ ಕೌರ್ ದಾಖಲೆಯ ಬಗ್ಗೆ ಮಾತನಾಡುವುದಾದರೆ, ಟೀಂ ಇಂಡಿಯಾ ನಾಯಕಿ ಈ ಶತಕದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 5ನೇ ಶತಕವನ್ನು ಪೂರ್ಣಗೊಳಿಸಿದರು. ನಾಯಕಿಯಾಗಿ ಇದು ಅವರ 2ನೇ ಶತಕವಾದರೂ, ಪೂರ್ಣ ಸಮಯದ ನಾಯಕನಾಗಿ ಇದು ಅವರ ಮೊದಲ ಏಕದಿನ ಶತಕವಾಗಿದೆ.
- ಇದರೊಂದಿಗೆ ಹರ್ಮನ್‌ಪ್ರೀತ್ ಕೌರ್ ಏಕದಿನದಲ್ಲಿ ಭಾರತ ಪರ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಸ್ಮೃತಿ ಮಂಧಾನಾ ಅವರ ದಾಖಲೆಯನ್ನು ಸರಿಗಟ್ಟಿದರು.
- ಹರ್ಮನ್‌ಪ್ರೀತ್ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್‌ನಲ್ಲಿ ಔಟಾಗದೆ 143 ರನ್ ಗಳಿಸುವ ಮೂಲಕ 26 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. 1996ರಲ್ಲಿ ಇವರಿಗಿಂತ ಮೊದಲು ಆಸ್ಟ್ರೇಲಿಯಾದ ಡಾಬಿ ಹಾಕ್ಲಿ ಔಟಾಗದೆ 117 ರನ್ ಗಳಿಸಿದ್ದರು.
- ಹರ್ಮನ್‌ಪ್ರೀತ್ ಕೌರ್ ಅವರ 143 ಸ್ಕೋರ್ ಇಂಗ್ಲೆಂಡ್ ವಿರುದ್ಧ ಯಾವುದೇ ತಂಡದ ಬ್ಯಾಟರ್ ಗಳಿಸಿದ ಮೂರನೇ ಗರಿಷ್ಠ ಸ್ಕೋರ್ ಆಗಿದೆ. ಈ ವರ್ಷ ವಿಶ್ವಕಪ್ ಫೈನಲ್‌ನಲ್ಲಿ 170 ರನ್ ಗಳಿಸಿದ ಆಸ್ಟ್ರೇಲಿಯಾದ ದಂತಕಥೆ ಅಲಿಸ್ಸಾ ಹೀಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬೆಲಿಂಡಾ ಕ್ಲಾರ್ಕ್ ಅಜೇಯ 146 ರನ್ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.
- ದೀಪ್ತಿ ಶರ್ಮಾ ಅವರೊಂದಿಗೆ ಹರ್ಮನ್‌ಪ್ರೀತ್ ಕೌರ್ ಕೇವಲ 24 ಎಸೆತಗಳಲ್ಲಿ ಅಜೇಯ 71 ರನ್‌ಗಳ ಜೊತೆಯಾಟ ಆಡಿದರು. ಅಂದರೆ, ಇಬ್ಬರೂ ಪ್ರತಿ ಓವರ್‌ಗೆ 17.75 ರನ್ ರೇಟ್ನಲ್ಲಿ ರನ್ ಗಳಿಸಿದರು. ಇದು ಮಹಿಳಾ ODI ನಲ್ಲಿ 50 ಕ್ಕಿಂತ ಹೆಚ್ಚು ರನ್‌ಗಳ ಜೊತೆಯಾಟಕ್ಕೆ ವೇಗವಾದ ಸ್ಕೋರಿಂಗ್ ರನ್ ರೇಟ್ ಆಗಿದೆ.
- ಹರ್ಮನ್‌ಪ್ರೀತ್ ಕೌರ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಅವರು ಇದಕ್ಕೂ ಮೊದಲು 2013 ರಲ್ಲಿ ಮುಂಬೈನಲ್ಲಿ ಆಂಗ್ಲರ ವಿರುದ್ಧ 107 ರನ್ ಗಳಿಸಿದ್ದರು. ವಿಶೇಷವೆ.ಬಂತೆ ಇದು ಅವರ ಮೊದಲ ODI ಶತಕವಾಗಿತ್ತು.
- ಹರ್ಮನ್‌ಪ್ರೀತ್ ಕೌರ್ ಹೊರತಾಗಿ, ಏಕದಿನದಲ್ಲಿ ಮೊದಲ ಅರ್ಧಶತಕ ಗಳಿಸಿದ ಯುವ ಬ್ಯಾಟರ್ ಹರ್ಲೀನ್ ಡಿಯೋಲ್‌ಗೂ ಈ ಪಂದ್ಯ ವಿಶೇಷವಾಗಿತ್ತು. ಹರ್ಲೀನ್ 72 ಎಸೆತಗಳಲ್ಲಿ 58 ರನ್ ಗಳಿಸಿದರು ಮತ್ತು ಕ್ಯಾಪ್ಟನ್ ಕೌರ್ ಅವರೊಂದಿಗೆ 213 ರನ್ ಜೊತೆಯಾಟವನ್ನು ಹಂಚಿಕೊಂಡರು. ಇದಕ್ಕೂ ಮುನ್ನ ಹರ್ಲೀನ್ 5 ಪಂದ್ಯಗಳಲ್ಲಿ ಒಟ್ಟು 43 ರನ್ ಗಳಿಸಿದ್ದರು.
- ಅಷ್ಟೇ ಅಲ್ಲ, ಈ ಪಂದ್ಯದಲ್ಲಿ ಇಬ್ಬರು ಇಂಗ್ಲೆಂಡ್ ಬೌಲರ್‌ಗಳು ಅತ್ಯಂತ ಕಳಪೆ ಬೌಲಿಂಗ್ ಮೂಲಕ ದಾಖಲೆ ಬರೆದಿದ್ದಾರೆ. ಈ ಸರಣಿಯಲ್ಲಿ ಮೊದಲ ಪಂದ್ಯವನ್ನಾಡಿದ 17 ವರ್ಷದ ವೇಗಿ ಫ್ರೇಯಾ ಕ್ಯಾಂಪ್ 10 ಓವರ್‌ಗಳಲ್ಲಿ, ಬರೋಬ್ಬರಿ 82 ರನ್‌ಗಳನ್ನು ನೀಡಿದರು. ಇದು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ನ ಏಕದಿನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಬೌಲಿಂಗ್‌ನ ದಾಖಲೆಯಾಗಿದೆ. ಜೊತೆಗೆ ಇದೇ ವರ್ಷ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಲಾರೆನ್ ಬೆಲ್ 10 ಓವರ್‌ಗಳಲ್ಲಿ 79 ರನ್ ನೀಡಿ ಎರಡನೇ ದುಬಾರಿ ಬೌಲರ್ ಎನಿಸಿಕೊಂಡರು.
Published On - 3:00 pm, Thu, 22 September 22