Harmanpreet Kaur: 18 ಬೌಂಡರಿ, 4 ಸಿಕ್ಸರ್, 143 ರನ್; ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್ ಕೌರ್ ರೌದ್ರಾವತಾರ..!

Harmanpreet Kaur: ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಹರ್ಮನ್ ಅವರ ಐದನೇ ಶತಕವಾಗಿದ್ದು, ಆರಂಭದಿಂದಲೂ ಅಬ್ಬರಿಸಿದ ನಾಯಕಿ 18 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ 143 ರನ್ ಚಚ್ಚಿದರು.

Harmanpreet Kaur: 18 ಬೌಂಡರಿ, 4 ಸಿಕ್ಸರ್, 143 ರನ್; ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್ ಕೌರ್ ರೌದ್ರಾವತಾರ..!
Harmanpreet Kaur
TV9kannada Web Team

| Edited By: pruthvi Shankar

Sep 22, 2022 | 3:19 PM

ದಿ ಸ್ಪಿಟ್‌ಫೈರ್ ಗ್ರೌಂಡ್ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ವನಿತ ತಂಡಗಳ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ (Harmanpreet Kaur) ಅಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಹರ್ಮನ್ ಅವರ ಐದನೇ ಶತಕವಾಗಿದ್ದು, ಆರಂಭದಿಂದಲೂ ಅಬ್ಬರಿಸಿದ ನಾಯಕಿ 18 ಬೌಂಡರಿ ಹಾಗೂ 4 ಸಿಕ್ಸರ್ ಸಮೇತ 143 ರನ್ ಚಚ್ಚಿದರು. ಭಾಟಿಯಾ ವಿಕೆಟ್ ಬಳಿಕ ಮೈದಾನಕ್ಕಿಳಿದ ನಾಯಕಿ ಹರ್ಮನ್​ಪ್ರೀತ್ ಕೌರ್, ಮೊದಲು ಮಂಧಾನ, ಬಳಿಕ ಹರ್ಲೀನ್ ಡಿಯೋಲ್ ಜೊತೆಗಿನ ಉತ್ತಮ ಜೊತೆಯಾಟದೊಂದಿಗೆ ತಂಡವನ್ನು ಬೃಹತ್ ಸ್ಕೋರ್​ನತ್ತ ಕೊಂಡೊಯ್ದರು. ಈ ಮೂವರ ಅದ್ಭುತ ಇನ್ನಿಂಗ್ಸ್​ನ ಆಧಾರದ ಮೇಲೆ ಟೀಂ ಇಂಡಿಯಾ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ವನಿತಾ ತಂಡಕ್ಕೆ ಬರೋಬ್ಬರಿ 334 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನೀಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಶೇಫಾಲಿ ವರ್ಮಾ ಕೇವಲ 8 ರನ್ ಗಳಿಸಿ ಕೇಟ್ ಕ್ರಾಸ್ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಟೀಂ ಇಂಡಿಯಾಗೆ ಆಂಗ್ಲ ವನಿತೆಯರು ಆರಂಭಿಕ ಆಘಾತ ನೀಡಿದಿರು. ಆ ಬಳಿಕ ಮತ್ತೊರ್ವ ಆರಂಭಿಕ ಆಟಗಾರ್ತಿ ಸ್ಮೃತಿ ಜೊತೆಗೂಡಿದ ಯಾಸ್ತಿಕ ಭಾಟಿಯಾ ತಂಡದ ಸ್ಕೋರ್ ಅನ್ನು ಅರ್ಧಶತಕ ದಾಟಿಸಿದರು. ಒಂದು ಹಂತದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಈ ಜೋಡಿಯ ಜೊತೆಯಾಟವನ್ನು ಆಂಗ್ಲ ಬೌಲರ್ ಚಾರ್ಲಿ ಡೀನ್ ಮುರಿಯುವಲ್ಲಿ ಯಶಸ್ವಿಯಾದರು. 26 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಯಾಸ್ತಿಕ ಬೌಲರ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

ಹರ್ಲೀನ್ ಡಿಯೋಲ್ ಭರ್ಜರಿ ಅರ್ಧಶತಕ

2ನೇ ವಿಕೆಟ್ ಬಳಿಕ ಮೈದಾನಕ್ಕಿಳಿದ ನಾಯಕಿ ಹರ್ಮನ್, ಮಂಧಾನ ಜೊತೆಗೂಡಿ ತಂಡದ ಮೊತ್ತವನ್ನು ಶತಕ ದಾಟಿಸಿದರು. ಈ ಹಂತದಲ್ಲಿ ಇಲ್ಲದ ಶಾಟ್ ಹೊಡೆಯಲು ಯತ್ನಿಸಿದ ಮಂಧಾನ ಎಲ್​ಬಿಡ್ಬ್ಯೂ ಬಲೆಗೆ ಬಿದ್ದರು. ಆ ಬಳಿಕ ಹರ್ಮನ್ ಜೊತೆಗೂಡಿದ ಹರ್ಲೀನ್ ಡಿಯೋಲ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವ ಹಾದಿ ಹಿಡಿದಿದ್ದ ಹರ್ಲೀನ್ ಡಿಯೋಲ್, 58 ರನ್​ ಗಳಿದ್ದಾಗ ಕ್ಯಾಚಿತ್ತು ನಿರ್ಗಮಿಸಿದರು. ಆದರೆ ಒಂದು ಬದಿಯಲ್ಲಿ ಭದ್ರವಾಗಿ ಬೇರೂರಿದ್ದ ನಾಯಕಿ ತನ್ನ ನೈಜ ಆಟವನ್ನು ಮುಂದುವರೆಸಿದರು.

ಹರ್ಮನ್ ಅಬ್ಬರದ ಶತಕ

ಆರಂಭದಿಂದಲೂ ಉತ್ತಮ ಜೊತೆಯಾಟದೊಂದಿಗೆ ತಂಡದ ಮೊತ್ತವನ್ನು ಹಂತ ಹಂತವಾಗಿ ಮೇಲಕ್ಕೇರಿಸಿದ ನಾಯಕಿ ಹರ್ಮನ್ ತನ್ನ ನೈಜ ಆಟವನ್ನು ಪ್ರದರ್ಶಿಸಿದರು. ಆರಂಭದಲ್ಲಿ ಸ್ಟ್ರೈಕ್ ರೋಟೆಟ್​ನತ್ತ ಗಮನ ಹರಿಸಿದ ಹರ್ಮನ್, ಸಿಂಗಲ್, ಡಬಲ್ ಮೂಲಕ ತಂಡವನ್ನು ದ್ವಿಶತಕದ ಗಡಿ ದಾಟಿಸಿದರು. ಆ ಬಳಿಕ ತಮ್ಮ ಆಕ್ರಮಕಾರಿ ಆಟಕ್ಕೆ ಮುಂದಾದ ಹರ್ಮನ್ ಆಂಗ್ಲ ಬೌಲರ್​ಗಳನ್ನು ಮನಸೋ ಇಚ್ಚೆ ದಂಡಿಸಿದರು. ಕೊನೆ ಕೊನೆಯ ಓವರ್​ಗಳಲ್ಲಂತ್ತೂ ಇನ್ನಷ್ಟು ಆಕ್ರಮಕಾರಿಯಾದ ಹರ್ಮನ್, ಪ್ರತಿಯೊಬ್ಬ ಆಂಗ್ಲ ಬೌಲರ್​ನ ಓವರ್​ನಲ್ಲಿ ಬೌಂಡರಿ ಸಿಕ್ಸರ್​ಗಳ ಮಳೆಗರೆದರು. ಈ ಕಡೆ ಹರ್ಮನ್ ಆರ್ಭಟ ನೋಡಿದ ಆಂಗ್ಲ ಬೌಲರ್​ಗಳಿಗೆ ಬಾಲ್ ಹಿಂದೆ ಓಡುವುದನ್ನು ಬಿಟ್ಟು ಬೇರೆ ಕೆಲಸ ಇಲ್ಲದಂತ್ತಾಯಿತು.

ಕೊನೆಯ ಹಂತದಲ್ಲಿ ನಾಯಕಿಗೆ ಉತ್ತಮ ಸಾಥ್ ನೀಡಿದ ಪೂಜಾ 18 ರನ್ ಸಿಡಿಸಿದರೆ, ದೀಪ್ತಿ ಶರ್ಮಾ ಕೂಡ 2 ಬೌಂಡರಿ ಸಹಿತ 15 ರನ್ ಚಚ್ಚಿದರು. ಈ ಮೂಲಕ ಭಾರತ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 334 ರನ್ ಟಾರ್ಗೆಟ್ ನೀಡಿತು. ಈಗಾಗಲೇ ಸರಣಿಯಲ್ಲಿ ಮೊದಲನೇ ಪಂದ್ಯ ಗೆದ್ದಿರುವ ಟೀಂ ಇಂಡಿಯಾ 2ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಆಂಗ್ಲರ ನಾಡಿನಲ್ಲಿ ಬರೋಬ್ಬರಿ 23 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ದಾಖಲೆ ಮಾಡುವ ಹೊಸ್ತಿಲಿನಲ್ಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada