16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಟೂರ್ನಿ ಮುಕ್ತಾಯದ ಹಂತದಲ್ಲಿದೆ. ಅಂತಿಮ ಘಟ್ಟದತ್ತ ಟೂರ್ನಿ ಸಾಗುತ್ತಿದ್ದು ಪ್ಲೇ ಆಫ್ ಗೇರಿದ್ದ ನಾಲ್ಕು ತಂಡಗಳ ಪೈಕಿ ಎಲಿಮಿನೀಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ (LSG vs MI) ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಮೇ 26 ರಂದು ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ನಡುವೆ ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಇಲ್ಲಿ ಗೆದ್ದ ತಂಡ ಫೈನಲ್ಗೇರಲಿದೆ. ಸದ್ಯ ಐಪಿಎಲ್ 2023 ಆರೆಂಜ್ (Orange Cap), ಪರ್ಪಲ್ ಕ್ಯಾಪ್ ಯಾರ ಬಳಿಯಿದೆ ಎಂಬುದನ್ನು ನೋಡೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಆರೆಂಜ್ ಕ್ಯಾಪ್ ತೊಟ್ಟಿದ್ದಾರೆ. ಆದರೆ, ಇದು ಭದ್ರವಾಗಿಲ್ಲ. ಇವರು ಆಡಿದ 14 ಪಂದ್ಯಗಳಲ್ಲಿ ಎಂಟು ಅರ್ಧಶತಕ ಸಿಡಿಸಿ ಒಟ್ಟು 730 ರನ್ ಗಳಿಸಿದ್ದಾರೆ. ಫಾಫ್ ಬೆನ್ನ ಹಿಂದೆಯೆ ಗುಜರಾತ್ ತಂಡದ ಶುಭ್ಮನ್ ಗಿಲ್ ಇದ್ದು ಇವರು 2 ಶತಕ, 4 ಅರ್ಧಶತಕ ಬಾರಿಸಿ 15 ಪಂದ್ಯಗಳಿಂದ 722 ರನ್ ಗಳಿಸಿದ್ದಾರೆ. ಆರ್ಸಿಬಿ ತಂಡದ ವಿರಾಟ್ ಕೊಹ್ಲಿ ಆಡಿದ 14 ಪಂದ್ಯಗಳಲ್ಲಿ ಆರು ಅರ್ಧಶತಕ, 2 ಶತಕ ಸಿಡಿಸಿ ಒಟ್ಟು 639 ರನ್ ಕಲೆಹಾಕಿ ತೃತೀಯ ಸ್ಥಾನದಲ್ಲಿದ್ದಾರೆ.
IPL 2023: RCB ತಂಡದಿಂದ ಈ ಮೂವರು ಹೊರಬೀಳುವುದು ಬಹುತೇಕ ಖಚಿತ..!
ಗುಜರಾತ್ ಟೈಟಾನ್ಸ್ ತಂಡದ ಮೊಹಮ್ಮದ್ ಶಮಿ ಪರ್ಪಲ್ ಕ್ಯಾಪ್ ತೊಟ್ಟಿದ್ದಾರೆ. ಇವರು ಆಡಿದ 15 ಪಂದ್ಯಗಳಲ್ಲಿ 26 ವಿಕೆಟ್ ಪಡೆದುಕೊಂಡಿದ್ದಾರೆ. ಇದೇ ತಂಡದ ರಶೀದ್ ಖಾನ್ 15 ಪಂದ್ಯಗಳಲ್ಲಿ 25 ವಿಕೆಟ್ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸ್ಪಿನ್ನರ್ ಪಿಯೂಷ್ ಚಾವ್ಲಾ 15 ಪಂದ್ಯಗಳಿಂದ 21 ವಿಕೆಟ್ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದರೆ, ಲಖನೌ ಟೂರ್ನಿಯಿಂದ ಹೊರಬಿದ್ದಿದೆ. ಮೇ 26 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್ನಲ್ಲಿ ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಮೇ 28 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಅದರಂತೆ ಮುಂಬೈ ಇಂಡಿಯನ್ಸ್ ಅಥವಾ ಗುಜರಾತ್ ಟೈಟಾನ್ಸ್…ಇಬ್ಬರಲ್ಲಿ ಯಾರು ಫೈನಲ್ ಪ್ರವೇಶಿಸಲಿದೆ ಎಂದು ತಿಳಿಯಲು ಶುಕ್ರವಾರದವರೆಗೆ ಕಾಯಬೇಕು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ