ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಕಾಣಿಸಿಕೊಳ್ಳುವುದು ಅನುಮಾನ. ಅಕ್ಟೋಬರ್ 16 ರಿಂದ ಶುರುವಾಗಲಿರುವ ಈ ಸರಣಿಗೂ ಮುನ್ನ ಶಮಿ ಸಂಪೂರ್ಣ ಫಿಟ್ನೆಸ್ ಸಾಧಿಸುವ ಸಾಧ್ಯತೆಯಿಲ್ಲ. ಅತ್ತ ಪರಿಪೂರ್ಣ ಫಿಟ್ನೆಸ್ನೊಂದಿಗೆ ಮರಳಲು ಮೊಹಮ್ಮದ್ ಶಮಿ ಕೂಡ ನಿರ್ಧರಿಸಿದ್ದಾರೆ. ಹೀಗಾಗಿಯೇ ಕಿವೀಸ್ ವಿರುದ್ಧದ ಸರಣಿಯಲ್ಲಿ ಭಾರತದ ಅನುಭವ ವೇಗಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.
ಏಕದಿನ ವಿಶ್ವಕಪ್ 2023 ರ ವೇಳೆ ಮೊಹಮ್ಮದ್ ಶಮಿ ಅವರ ಪಾದದಲ್ಲಿ ನೋವು ಕಾಣಿಸಿಕೊಂಡಿತ್ತು. ಈ ನೋವಿನ ನಡುವೆಯೂ ಅವರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಇದರಿಂದ ಅವರ ಪಾದದ ಸಮಸ್ಯೆಯು ಬಿಗಡಾಯಿಸಿದೆ.
ಹೀಗಾಗಿ ಅವರು ಏಕದಿನ ವಿಶ್ವಕಪ್ ಬಳಿಕ ಯಾವುದೇ ಪಂದ್ಯವಾಡಿರಲಿಲ್ಲ. ಅಲ್ಲದೆ ವೈದ್ಯಕೀಯ ಪರಿಶೀಲನೆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಕಂಡು ಬಂದಿತ್ತು. ಅದರಂತೆ ಕಳೆದ ಫೆಬ್ರವರಿ ತಿಂಗಳಲ್ಲಿ ಮೊಹಮ್ಮದ್ ಶಮಿ ಸರ್ಜರಿಗೆ ಒಳಗಾಗಿದ್ದರು. ಇದೇ ಕಾರಣದಿಂದಾಗಿ ಐಪಿಎಲ್ನಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊಹಮ್ಮದ್ ಶಮಿ ಫಿಟ್ ಆಗಿದ್ದು, ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಶಮಿ ಸಂಪೂರ್ಣ ಫಿಟ್ನೆಸ್ ಸಾಧಿಸದೇ ಟೀಮ್ ಇಂಡಿಯಾಗೆ ಮರಳುವ ಇರಾದೆಯಲ್ಲಿಲ್ಲ.
ಈ ಬಗ್ಗೆ ಮಾತನಾಡಿರುವ ಮೊಹಮ್ಮದ್ ಶಮಿ, ನಾನು ಸ್ವಲ್ಪ ಸಮಯದಿಂದ ಭಾರತ ತಂಡದಿಂದ ಹೊರಗುಳಿದಿದ್ದೇನೆ. ಹೀಗಾಗಿ ಶೀಘ್ರದಲ್ಲೇ ಹಿಂತಿರುಗಲು ನಾನು ಶ್ರಮಿಸುತ್ತಿದ್ದೇನೆ. ಆದಾಗ್ಯೂ, ನಾನು ಕಂಬ್ಯಾಕ್ ಮಾಡುವ ವೇಳೆ ಯಾವುದೇ ಸಮಸ್ಯೆ ಇರಬಾರದೆಂದು ಬಯಸುತ್ತೇನೆ. ಸದ್ಯ ನನ್ನ ಫಿಟ್‌ನೆಸ್‌ಗಾಗಿ ಇನ್ನಷ್ಟು ಕಾರ್ಯ ನಿರ್ವಹಿಸಬೇಕಿದೆ ಎಂದು ತಿಳಿಸಿದ್ದಾರೆ.
ನಾನು ಎಷ್ಟು ಬಲಶಾಲಿಯಾಗಿ ಹಿಂತಿರುಗುತ್ತೇನೆ, ಅದು ನನಗೆ ಉತ್ತಮ. ಬಾಂಗ್ಲಾದೇಶ್, ನ್ಯೂಝಿಲೆಂಡ್ ಅಥವಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಾಗಿರಲಿ, ಮತ್ತೆ ಗಾಯಗೊಳ್ಳುವ ಅಪಾಯವನ್ನು ಎದುರಿಸಲು ನಾನು ಬಯಸುವುದಿಲ್ಲ. ನಾನು ಈಗಾಗಲೇ ಬೌಲಿಂಗ್ ಪ್ರಾರಂಭಿಸಿದ್ದೇನೆ. ಆದರೆ ನಾನು 100% ಫಿಟ್ ಆಗುವವರೆಗೆ ನಾನು ಕಂಬ್ಯಾಕ್ ಮಾಡುವುದಿಲ್ಲ ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮೊಹಮ್ಮದ್ ಶಮಿ ಹೇಳಿದರು.
ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!
ಈ ಹೇಳಿಕೆಯ ಬೆನ್ನಲ್ಲೇ ಮೊಹಮ್ಮದ್ ಶಮಿ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇನ್ನು ಅವರು ಭಾರತ ತಂಡಕ್ಕೆ ಕಂಬ್ಯಾಕ್ ಮಾಡಬೇಕಿದ್ದರೆ ರಣಜಿ ಟೂರ್ನಿಯನ್ನು ಆಡಲೇಬೇಕು. ಹೀಗಾಗಿ ಈ ವರ್ಷಾಂತ್ಯದ ವೇಳೆಗೆ ಅವರು ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಬಹುದು.
ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ನ್ಯೂಝಿಲೆಂಡ್ ಸರಣಿಗೂ ಅಲಭ್ಯರಾಗುವ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಅವರ ಕಂಬ್ಯಾಕ್ ಅನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿಸಬಹುದು. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಈ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಈ ವೇಳೆಗೆ ಮೊಹಮ್ಮದ್ ಶಮಿ ಸಂಪೂರ್ಣ ಫಿಟ್ನೆಸ್ ಸಾಧಿಸಲಿದ್ದಾರೆ. ಹೀಗಾಗಿ ಆಸೀಸ್ ವಿರುದ್ಧದ ಸರಣಿಯೊಂದಿಗೆ ಶಮಿ ಕಂಬ್ಯಾಕ್ ಮಾಡುವುದು ಖಚಿತ ಎನ್ನಬಹುದು.