ಆಗಸ್ಟ್ 27 ರಿಂದ ಯುಎಇನಲ್ಲಿ ಶುರುವಾಗಲಿರುವ ಏಷ್ಯಾಕಪ್ಗಾಗಿ (Asia Cup 2022) ಭಾರತ ತಂಡವನ್ನು ಪ್ರಕಟಿಸಲಾಗಿದೆ. ವಿಶೇಷ ಎಂದರೆ ಈ ತಂಡದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಸ್ಥಾನ ಪಡೆದಿಲ್ಲ. ಗಾಯದ ಕಾರಣ ಹರ್ಷಲ್ ಪಟೇಲ್ ಹೊರಗುಳಿದರೆ, ಬೆನ್ನು ನೋವಿನ ಹಿನ್ನೆಲೆಯಲ್ಲಿ ಬುಮ್ರಾ ಏಷ್ಯಾಕಪ್ನಿಂದ ಹಿಂದೆ ಸರಿದಿದ್ದಾರೆ. ಇನ್ನು ಈ ಇಬ್ಬರು ಪ್ರಮುಖ ಬೌಲರ್ಗಳ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದು ಅರ್ಷದೀಪ್ ಸಿಂಗ್ ಹಾಗೂ ಅವೇಶ್ ಖಾನ್. ಇದರ ಬೆನ್ನಲ್ಲೇ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಯಾಕೆ ಅವಕಾಶ ನೀಡಿಲ್ಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು.
ಏಕೆಂದರೆ ಶಮಿ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೀಗ ಟೀಮ್ ಇಂಡಿಯಾದ ಪ್ರಮುಖ ಬೌಲರ್‌ಗಳು ಹೊರಗುಳಿದಿರುವ ಕಾರಣ ಶಮಿಗೆ ಅವಕಾಶ ನೀಡಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ಟಿ20 ಕ್ರಿಕೆಟ್ಗೆ ಶಮಿಯ ಅವಶ್ಯಕೆತೆ ಟೀಮ್ ಇಂಡಿಯಾಗಿಲ್ಲ ಎಂಬ ಅಭಿಪ್ರಾಯವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮುಂದಿಟ್ಟಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿರುವ ಪಾಂಟಿಂಗ್, ಮೊಹಮ್ಮದ್ ಶಮಿ ಅವರ ಸಾಮರ್ಥ್ಯವು ಟೆಸ್ಟ್ ಕ್ರಿಕೆಟ್ಗೆ ಸೂಕ್ತ. ಭಾರತದ ಟಿ20 ಕ್ರಿಕೆಟ್‌ನಲ್ಲಿ ಅವರಿಗಿಂತ ಉತ್ತಮ ವೇಗದ ಬೌಲರ್‌ಗಳು ಇದ್ದಾರೆ. ಹೀಗಾಗಿ ಅವರ ಅನುಪಸ್ಥಿತಿಯನ್ನು ಸರಿದೂಗಿಸಬಲ್ಲ ವೇಗಿಗಳು ಟೀಮ್ ಇಂಡಿಯಾದಲ್ಲಿದ್ದಾರೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟರು.
ಈ ಬಾರಿಯ ಏಷ್ಯಾಕಪ್ಗೆ ಬಿಸಿಸಿಐ ವೇಗಿಗಳಾಗಿ ಭುವನೇಶ್ವರ್ ಕುಮಾರ್ , ಅವೇಶ್ ಖಾನ್ ಮತ್ತು ಅರ್ಷದೀಪ್ ಸಿಂಗ್ ಅವರನ್ನು ವೇಗಿಗಳಾಗಿ ಆಯ್ಕೆ ಮಾಡಿದೆ. ಹಾಗೆಯೇ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಾಲ್ಕನೇ ವೇಗಿಯಾಗಿ ತಂಡದಲ್ಲಿದ್ದಾರೆ.
ಶಮಿ ಬಹಳ ಸಮಯದಿಂದ ಭಾರತ ತಂಡದ ಉತ್ತಮ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ನೀವು ಅವರ ಸಾಮರ್ಥ್ಯಗಳನ್ನು ನೋಡಿದರೆ, ಅವರ ಟೆಸ್ಟ್ ಕ್ರಿಕೆಟ್ ಹೆಚ್ಚು ಹೊಂದಿಕೊಳ್ಳುತ್ತಾರೆ. ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಶಮಿಗಿಂತ ಉತ್ತಮ ವೇಗದ ಬೌಲರ್‌ಗಳಿದ್ದಾರೆ ಇದಾಗ್ಯೂ ಅವರು ಕೇವಲ ಮೂವರನ್ನು ಮಾತ್ರ (ಏಷ್ಯಾ ಕಪ್‌ಗಾಗಿ) ಹೆಸರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇನ್ನು ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಟೀಮ್ ಇಂಡಿಯಾ ನಾಲ್ವರು ವೇಗಿಗಳನ್ನು ಆಯ್ಕೆ ಮಾಡಬಹುದು ಎಂದು ಇದೇ ವೇಳೆ ಪಾಂಟಿಂಗ್ ತಿಳಿಸಿದ್ದಾರೆ.
ಏಷ್ಯಾಕಪ್ ಬಳಿಕ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ದ ಸರಣಿಗಳನ್ನು ಆಡಲಿದೆ. ಅಷ್ಟೇ ಅಲ್ಲದೆ ಈ ಬಾರಿಯ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಅದಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ದತೆಯಲ್ಲಿದೆ.
ಈ ಬಾರಿಯ ಏಷ್ಯಾ ಕಪ್ ಯುಎಇ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ರಿಕಿ ಪಾಂಟಿಂಗ್ ಭಾರತವನ್ನು ಆಯ್ಕೆ ಮಾಡಿರುವುದು ವಿಶೇಷ.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.