
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಶಮಿ ಅವರನ್ನು ಮುಂಬರುವ ಆಸ್ಟ್ರೇಲಿಯಾ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಅದರಲ್ಲೂ ಕೆಲ ದಿನಗಳ ಹಿಂದೆಯಷ್ಟೇ ಮುಗಿದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಹೊರಗಿಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಮೊಹಮ್ಮದ್ ಶಮಿ ಅವರ ಫಿಟ್ನೆಸ್ ಸಮಸ್ಯೆ ಎನ್ನಲಾಗಿತ್ತು. ಆದರೀಗ ನಾನು ಸಂಪೂರ್ಣ ಫಿಟ್ ಆಗಿದ್ದೇನೆ ಎನ್ನುವ ಮೂಲಕ ಮೊಹಮ್ಮದ್ ಶಮಿ ರಂಗಕ್ಕೆ ಇಳಿದಿದ್ದಾರೆ.
ರಣಜಿ ಟೂರ್ನಿಯ ಪಂದ್ಯವಾಡಲು ಈಡನ್ ಗಾರ್ಡನ್ಸ್ ಮೈದಾನಕ್ಕೆ ಆಗಮಿಸಿದ ಮೊಹಮ್ಮದ್ ಶಮಿ ಅವರಲ್ಲಿ ಫಿಟ್ನೆಸ್ ಬಗ್ಗೆ ಕೇಳಲಾಗಿದೆ. ಈ ವೇಳೆ ಮಾತನಾಡಿದ ಅವರು ನಾನು ಸಂಪೂರ್ಣ ಫಿಟ್ ಆಗಿದ್ದೇನೆ. ಇದಾಗ್ಯೂ ನನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದಿದ್ದಾರೆ.
ಟೀಮ್ ಇಂಡಿಯಾಗೆ ಆಯ್ಕೆ ನನ್ನ ಕೈಯಲ್ಲಿಲ್ಲ ಎಂದು ನಾನು ಮೊದಲೇ ಹೇಳಿದ್ದೆ. ಫಿಟ್ನೆಸ್ ಸಮಸ್ಯೆಯಾಗಿದ್ದರೆ, ನಾನು ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಆಡಬಾರದು. ನಾನು 2025 ರ ಚಾಂಪಿಯನ್ಸ್ ಟ್ರೋಫಿ, 2025 ರ ಐಪಿಎಲ್ ಮತ್ತು ದುಲೀಪ್ ಟ್ರೋಫಿಯಲ್ಲಿ ಆಡಿದ್ದೇನೆ. ಅಲ್ಲದೆ ಸಂಪೂರ್ಣ ಫಿಟ್ನೆಸ್ ಅನ್ನು ಸಹ ಹೊಂದಿದ್ದೇನೆ ಎಂದು ಶಮಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡದಿರುವ ಬಗ್ಗೆ ಈಗ ಮಾತನಾಡುವ ಮತ್ತು ವಿವಾದವನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ನಾಲ್ಕು ದಿನಗಳ ಕ್ರಿಕೆಟ್ ಆಡಲು ಸಾಧ್ಯವಾದರೆ, 50 ಓವರ್‌ಗಳ ಕ್ರಿಕೆಟ್ ಅನ್ನು ಸಹ ಆಡಬಲ್ಲೆ.
ನಾನು ಫಿಟ್ ಇದ್ದೇನೆಯೇ ಅಥವಾ ಇಲ್ಲವಾ ಎಂದು ಆಯ್ಕೆದಾರರು ಕೇಳಬೇಕು. ಆದರೆ ಅವರು ಯಾರು ಸಹ ನನಗೆ ಕರೆ ಮಾಡಿಲ್ಲ. ನನ್ನಲ್ಲಿ ಕೇಳಿಲ್ಲ. ನನ್ನ ಫಿಟ್ನೆಸ್ ಮಾಹಿತಿಯನ್ನು ನಾನೇ ಕರೆ ಮಾಡಿ ತಿಳಿಸುವುದು ಸರಿಯಲ್ಲ ಅಥವಾ ಬೇಡಿಕೆ ಇಡುವುದು ನನ್ನ ಜವಾಬ್ದಾರಿಯಲ್ಲ. ನನ್ನ ಕೆಲಸ NCA (ಸೆಂಟರ್ ಆಫ್ ಎಕ್ಸಲೆನ್ಸ್) ಗೆ ಹೋಗುವುದು, ಪಂದ್ಯಗಳಿಗಾಗಿ ನನ್ನ ಫಿಟ್ನೆಸ್ ಸಾಬೀತುಪಡಿಸುವುದು. ಈ ಬಗ್ಗೆ ಮಾಹಿತಿ ನೀಡುವುದು ಎನ್ಸಿಎ ಕೆಲಸ. ಆದರೆ ಅವರು ಏನು ಮಾಹಿತಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ.
ಇದನ್ನೂ ಓದಿ: ಅಶ್ವಿನ್ ವಿಶ್ವ ದಾಖಲೆ ಅಳಿಸಿ ಹಾಕಿದ ನೊಮಾನ್ ಅಲಿ
ಆದರೆ ನಾನಂತು ಸಂಪೂರ್ಣ ಫಿಟ್ ಆಗಿದ್ದೇನೆ. ಇದೇ ಕಾರಣಕ್ಕೆ ಇದೀಗ ರಣಜಿ ಪಂದ್ಯವಾಡಲು ಸಿದ್ಧನಾಗಿದ್ದೇನೆ. ರಣಜಿ ಮ್ಯಾಚ್ ಆಡಲು ಸಾಧ್ಯವಾಗುವುದಾದರೆ, ಏಕದಿನ ಪಂದ್ಯವನ್ನು ಆಡಲು ನಾನು ರೆಡಿ ಇದ್ದೇ ಎಂದರ್ಥ. ಇದಾಗ್ಯೂ ಆಯ್ಕೆ ಎಂಬುದು ನನ್ನ ಕೈಯಲ್ಲಿ ಇಲ್ಲ ಎಂದು ಮೊಹಮ್ಮದ್ ಶಮಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.