ಅಶ್ವಿನ್ ವಿಶ್ವ ದಾಖಲೆ ಅಳಿಸಿ ಹಾಕಿದ ನೊಮಾನ್ ಅಲಿ
Noman Ali Record: ಪಾಕಿಸ್ತಾನ್ ತಂಡದ ಹಿರಿಯ ಸ್ಪಿನ್ನರ್ ನೊಮಾನ್ ಅಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ 39ನೇ ವಯಸ್ಸಿನಲ್ಲಿ. ಈ ದಾಖಲೆಯೊಂದಿಗೆ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.
Updated on: Oct 15, 2025 | 7:30 AM

ಪಾಕಿಸ್ತಾನ್ ಸ್ಪಿನ್ನರ್ ನೊಮಾನ್ ಅಲಿ (Noman Ali) ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಟೀಮ್ ಇಂಡಿಯಾದ ಲೆಜೆಂಡ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ.

ಲಾಹೋರ್ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 35 ಓವರ್ಗಳನ್ನು ಎಸೆದ ನೊಮಾನ್ ಅಲಿ 112 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಆರು ವಿಕೆಟ್ಗಳೊಂದಿಗೆ ಪಾಕ್ ಸ್ಪಿನ್ನರ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅತ್ಯಧಿಕ ಬಾರಿ 6 ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 41 ಪಂದ್ಯಗಳನ್ನಾಡಿರುವ ಅಶ್ವಿನ್ ಒಟ್ಟು 5 ಬಾರಿ 6 ವಿಕೆಟ್ ಕಬಳಿಸಿದ್ದರು. ಈ ಮೂಲಕ WTC ನಲ್ಲಿ ಅತ್ಯಧಿಕ ಬಾರಿ 6 ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ನೊಮಾನ್ ಅಲಿ ಯಶಸ್ವಿಯಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಈವರೆಗೆ 18 ಪಂದ್ಯಗಳನ್ನು ಮಾತ್ರ ಆಡಿರುವ ನೊಮಾನ್ ಅಲಿ ಒಟ್ಟು 6 ಬಾರಿ 6 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ WTC ನಲ್ಲಿ ಅತೀ ಹೆಚ್ಚು ಬಾರಿ 6 ವಿಕೆಟ್ ಕಬಳಿಸಿದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂದಹಾಗೆ ನೊಮಾನ್ ಅಲಿ ಟೆಸ್ಟ್ ಕೆರಿಯರ್ ಆರಂಭಿಸಿದ್ದು 2021 ರಲ್ಲಿ. ಈವರೆಗೆ ಕೇವಲ 20 ಪಂದ್ಯಗಳನ್ನು ಮಾತ್ರ ಆಡಿರುವ ಅವರು ಒಟ್ಟು 91 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೀಗ 39ನೇ ವಯಸ್ಸಿನಲ್ಲೂ ಸ್ಪಿನ್ ಮೋಡಿ ಮಾಡಿ ವಿಶ್ವ ದಾಖಲೆ ಬರೆದಿರುವುದು ವಿಶೇಷ.
