ಟೀಮ್ ಇಂಡಿಯಾದಲ್ಲಿಲ್ಲ ಸ್ಥಾನ: ದೇಶೀಯ ತಂಡಕ್ಕೆ ಮೊಹಮ್ಮದ್ ಶಮಿ ಆಯ್ಕೆ
Mohammed Shami: ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವಾಡಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ. ಇದಾದ ಬಳಿಕ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಏಷ್ಯಾಕಪ್ ಟೂರ್ನಿಗೆ ಶಮಿ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ಟೀಮ್ ಇಂಡಿಯಾ ವೇಗಿಯನ್ನು ಹೊರಗಿಡಲಾಗಿದೆ.

ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಬಹಳ ಸಮಯದಿಂದ ಟೀಮ್ ಇಂಡಿಯಾದಿಂದ ದೂರವಿದ್ದಾರೆ. 2025 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ಶಮಿ ಯಾವುದೇ ಅಂತರರಾಷ್ಟ್ರೀಯ ಪಂದ್ಯವಾಡಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಶಮಿ ಅವರನ್ನು ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಿರಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಆಯ್ಕೆ ಮಾಡಲಾದ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿಲ್ಲ.
ದೇಶೀಯ ತಂಡಕ್ಕೆ ಶಮಿ ಆಯ್ಕೆ:
ಭಾರತ ತಂಡದಿಂದ ಹೊರಬಿದ್ದಿರುವ ಮೊಹಮ್ಮದ್ ಶಮಿ ಇದೀಗ ದೇಶೀಯ ಕ್ರಿಕೆಟ್ಗೆ ಮರಳಲು ನಿರ್ಧರಿಸಿದ್ದಾರೆ. ಅದರಂತೆ ಇದೀಗ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಕಣಕ್ಕಿಳಿಯಲಿದ್ದಾರೆ. ಅಕ್ಟೋಬರ್ 15 ರಿಂದ ಶುರುವಾಗಲಿರುವ ರಣಜಿ ಟೂರ್ನಿಗಾಗಿ ಬಂಗಾಳ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿದೆ.
ಇನ್ನು ಈ ತಂಡವನ್ನು ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಮತ್ತೋರ್ವ ಆಟಗಾರ ಅಭಿಮನ್ಯು ಈಶ್ವರನ್ ಮುನ್ನಡೆಸಲಿದ್ದಾರೆ. ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ಅಭಿಷೇಕ್ ಪೊರೆಲ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ .
ಗ್ರೂಪ್ ಸಿ ನಲ್ಲಿ ಬಂಗಾಳ ತಂಡ:
ಬಂಗಾಳ ತಂಡವು ರಣಜಿ ಟ್ರೋಫಿಯಲ್ಲಿ ಗುಜರಾತ್, ಹರಿಯಾಣ,ರೈಲ್ವೇಸ್, ತ್ರಿಪುರ , ಉತ್ತರಾಖಂಡ್ ಮತ್ತು ಅಸ್ಸಾಂ ಜೊತೆಗೆ ಎಲೈಟ್ ಗ್ರೂಪ್ ಸಿ ನಲ್ಲಿ ಸ್ಥಾನ ಪಡೆದಿದೆ . ಅದರಂತೆ ಅಕ್ಟೋಬರ್ 15 ರಂದು ಕೋಲ್ಕತ್ತಾದ ಐಕಾನಿಕ್ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಉತ್ತರಾಖಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ . ಇದರ ನಂತರ ಅಕ್ಟೋಬರ್ 25 ರಂದು ಗುಜರಾತ್ ವಿರುದ್ಧ ಮತ್ತೊಂದು ತವರು ಪಂದ್ಯ ಆಡಲಿದೆ.
ಆ ಬಳಿಕ ಬಂಗಾಳ ತಂಡವು ಹರಿಯಾಣ, ರೈಲ್ವೇಸ್, ತ್ರಿಪುರ ಮತ್ತು ಅಸ್ಸಾಂ ತಂಡಗಳನ್ನು ಎದುರಿಸಲಿದೆ. ಇತ್ತ ಬಲಿಷ್ಠ ಪಡೆಯನ್ನು ರೂಪಿಸಿಕೊಂಡಿರುವ ಬಂಗಾಳ ತಂಡವು ಈ ಬಾರಿಯ ಟೂರ್ನಿಯಲ್ಲಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 13 ಭರ್ಜರಿ ಸಿಕ್ಸ್… 29 ಎಸೆತಗಳಲ್ಲಿ ವಿಸ್ಫೋಟಕ ಶತಕ
ರಣಜಿ ಟ್ರೋಫಿಗೆ ಬಂಗಾಳ ತಂಡ : ಅಭಿಮನ್ಯು ಈಶ್ವರನ್ (ನಾಯಕ), ಅಭಿಷೇಕ್ ಪೊರೆಲ್ (ಉಪನಾಯಕ), ಸುದೀಪ್ ಕುಮಾರ್ ಘರಾಮಿ, ಅನುಸ್ತಪ್ ಮಜುಂದಾರ್, ಸುದೀಪ್ ಚಟರ್ಜಿ, ಸುಮಂತ ಗುಪ್ತಾ, ಸೌರಭ್ ಕುಮಾರ್ ಸಿಂಗ್, ವಿಶಾಲ್ ಭಾಟಿ, ಮೊಹಮ್ಮದ್ ಶಮಿ, ಆಕಾಶ್ ದೀಪ್, ಸೂರಜ್ ಸಿಂಧು ಜೈಸ್ವಾಲ್, ಶಾಕಿರ್ ಹಜಿಬ್ ಗಾಂಧಿ (ವಿಕೆಟ್ ಕೀಪರ್), ಇಶಾನ್ ಪೊರೆಲ್, ಖಾಝಿ ಜುನೈದ್ ಸೈಫಿ, ರಾಹುಲ್ ಪ್ರಸಾದ್, ಸುಮಿತ್ ಮೊಹಂತ ಮತ್ತು ವಿಕಾಶ್ ಸಿಂಗ್.
