ನಾನು ರೆಡಿ ಇದ್ದೆ, ಆದರೂ ಆಯ್ಕೆ ಮಾಡಿಲ್ಲ: ಮೊಹಮ್ಮದ್ ಶಮಿ ಬೇಸರ
Asia Cup 2025: ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿಗೆ ಸ್ಥಾನ ನೀಡಲಾಗಿಲ್ಲ.

ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕಾಣಿಸಿಕೊಂಡಿಲ್ಲ. ಇದೀಗ ಏಷ್ಯಾಕಪ್ ಆಡಲು ನಾನು ರೆಡ್ಡಿ ಇದ್ದೇ, ಇದಾಗ್ಯೂ ಆಯ್ಕೆ ಮಾಡಲಾಗಿಲ್ಲ ಎಂದು ಶಮಿ ಬೇಸರ ಹೊರಹಾಕಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೊಹಮ್ಮದ್ ಶಮಿ, ನಾನು ದುಲೀಪ್ ಟ್ರೋಫಿ ಆಡಲು ಸಿದ್ಧನಾಗಿದ್ದೇನೆ. ಈ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ನನಗೆ ಟಿ20 ಕ್ರಿಕೆಟ್ ಆಡಲು ಸಾಧ್ಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ಫಿಟ್ನೆಸ್ ಸಮಸ್ಯೆಯ ಕಾರಣ ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ ಎಂಬ ಸುದ್ದಿಗಳು ಹರದಿದಾಡಿದ್ದವು. ಆದರೀಗ ಆಗಸ್ಟ್ 28 ರಿಂದ ಶುರುವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಪೂರ್ವ ವಲಯ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಶಮಿ ಏಷ್ಯಾಕಪ್ಗೆ ಆಯ್ಕೆಯಾಗದಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.
ನನ್ನನ್ನು ಆಯ್ಕೆ ಮಾಡದಿರುವ ಬಗ್ಗೆ ನಾನು ಯಾರನ್ನೂ ದೂಷಿಸುವುದಿಲ್ಲ ಅಥವಾ ಅದರ ಬಗ್ಗೆ ದೂರು ನೀಡುವುದಿಲ್ಲ. ನಾನು ತಂಡಕ್ಕೆ ಸರಿಯಾಗಿದ್ದರೆ, ನನ್ನನ್ನು ಆಯ್ಕೆ ಮಾಡಿ. ನಾನು ಸರಿಯಾಗಿಲ್ಲದಿದ್ದರೆ, ನನಗೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ.
ಟೀಮ್ ಇಂಡಿಯಾಗೆ ಉತ್ತಮವಾದದ್ದನ್ನು ಮಾಡುವ ಜವಾಬ್ದಾರಿ ಆಯ್ಕೆದಾರರ ಮೇಲಿದೆ. ನನಗೆ ಅವಕಾಶ ಸಿಕ್ಕಾಗ, ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಅಲ್ಲದೆ ನನ್ನ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆ ಇದೆ. ನಾನು ಕಷ್ಟಪಟ್ಟು ಕಾರ್ಯ ನಿರ್ವಹಿಸುತ್ತಿದ್ದೇನೆ.
ಇದೀಗ ಸಂಪೂರ್ಣ ಫಿಟ್ನೆಸ್ ಹೊಂದಿರುವ ಕಾರಣ ದುಲೀಪ್ ಟ್ರೋಫಿಗೆ ಆಯ್ಕೆಯಾಗಿದ್ದೇನೆ. ದುಲೀಪ್ ಟ್ರೋಫಿ ಆಡಲು ಸಾಧ್ಯವಾದರೆ, ನನಗೆ ಟಿ20 ಕ್ರಿಕೆಟ್ ಆಡಲು ಏಕೆ ಸಾಧ್ಯವಾಗುವುದಿಲ್ಲ? ಎಂಬುದೇ ನನ್ನ ಪ್ರಶ್ನೆ ಎಂದು ಏಷ್ಯಾಕಪ್ ತಂಡದಿಂದ ಕೈ ಬಿಟ್ಟಿರುವ ಬಗ್ಗೆ ಮೊಹಮ್ಮದ್ ಶಮಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕುತೂಹಲಕಾರಿ ವಿಷಯ ಎಂದರೆ ಟೀಮ್ ಇಂಡಿಯಾ ಆಡಿದ ಕೊನೆಯ ಟಿ20 ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಂಡಿದ್ದರು. ಅಂದರೆ ಅವರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಲಾಗಿತ್ತು. ಆದರೀಗ ಏಷ್ಯಾಕಪ್ ತಂಡದಿಂದ ಕೈ ಬಿಡಲಾಗಿದೆ. ಹೀಗಾಗಿಯೇ ಆಯ್ಕೆಗಾರರ ನಿರ್ಧಾರರ ಬಗ್ಗೆ ಮೊಹಮ್ಮದ್ ಶಮಿ ಪ್ರಶ್ನೆಗಳನ್ನೆತ್ತಿದ್ದಾರೆ.
ಇದನ್ನೂ ಓದಿ: IPL 2026: ಕೆಎಲ್ ರಾಹುಲ್ ಖರೀದಿಗೆ ಮುಂದಾದ KKR
Published On - 8:23 am, Thu, 28 August 25
