T20 World Cup 2022: ಟಿ20 ವಿಶ್ವಕಪ್ಗಾಗಿ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ಟೀಮ್ ಇಂಡಿಯಾದ (Team India) 14 ಸದಸ್ಯರು ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಇದಾಗ್ಯೂ ಬೆನ್ನು ನೋವಿನ ಸಮಸ್ಯೆಯ ಕಾರಣ ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಬದಲಿ ಆಟಗಾರ ಇನ್ನೂ ಕೂಡ ತೆರಳಿಲ್ಲ. ಅಲ್ಲದೆ ಬುಮ್ರಾ ಸ್ಥಾನದಲ್ಲಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಕೂಡ ಹಾಗೆಯೇ ಉಳಿದಿದೆ. ಇದೀಗ ಟೀಮ್ ಇಂಡಿಯಾ ಯಾರ್ಕರ್ ಕಿಂಗ್ ಸ್ಥಾನದಲ್ಲಿ ಮತ್ತೋರ್ವ ಅನುಭವಿ ವೇಗಿಗೆ ಸ್ಥಾನ ಸಿಗಲಿದೆ ಎಂಬುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ವರದಿಗಳ ಪ್ರಕಾರ ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿದೆ. ಸದ್ಯ ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್ನಲ್ಲಿದ್ದಾರೆ. ಈಗಾಗಲೇ ಬಹುತೇಕ ಟೆಸ್ಟ್ನಲ್ಲಿ ಶಮಿ ಪಾಸಾಗಿದ್ದು, ಹೀಗಾಗಿ 3-4 ದಿನಗಳಲ್ಲಿ ಅವರು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ ಎಂದು ವರದಿಯಾಗಿದೆ.
ಅಂದರೆ ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಮೊಹಮ್ಮದ್ ಶಮಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾದಂತಾಗಿದೆ. ಸದ್ಯ ಟಿ20 ವಿಶ್ವಕಪ್ಗೆ ಆಯ್ಕೆಯಾದ ಮೀಸಲು ಆಟಗಾರರ ಪಟ್ಟಿಯಲ್ಲಿ ಶಮಿ ಇದ್ದು, ಅವರು ಮುಖ್ಯ ಬಳಗಕ್ಕೆ ಸೇರ್ಪಡೆಗೊಂಡರೆ ಮೀಸಲು ಆಟಗಾರನಾಗಿ ಮತ್ತೋರ್ವ ಆಟಗಾರನನ್ನು ಕೂಡ ಬಿಸಿಸಿಐ ಆಯ್ಕೆ ಮಾಡಲಿದೆ.
ಒಂದು ವರ್ಷದ ಬಳಿಕ ಕಂಬ್ಯಾಕ್:
ಮೊಹಮ್ಮದ್ ಶಮಿ ಟ20 ವಿಶ್ವಕಪ್ 2021 ರ ಬಳಿಕ ಟೀಮ್ ಇಂಡಿಯಾ ಪರ ಯಾವುದೇ ಟಿ20 ಪಂದ್ಯವಾಡಿಲ್ಲ. ಇದಾಗ್ಯೂ ಐಪಿಎಲ್ 2021 ರಲ್ಲಿ 20 ವಿಕೆಟ್ ಕಬಳಿಸುವ ಮೂಲಕ ಹಿರಿಯ ವೇಗಿ ಗುಜರಾತ್ ಟೈಟಾನ್ಸ್ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಜಸ್ಪ್ರೀತ್ ಬುಮ್ರಾ ಸ್ಥಾನದಲ್ಲಿ ಅನುಭವಿ ವೇಗಿಗೆ ಮಣೆಹಾಕಲು ಮುಂದಾಗಿದೆ. ಅದರಂತೆ ಈ ವಾರದೊಳಗೆ ಮೊಹಮ್ಮದ್ ಶಮಿ ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.
ಈ ಹಿಂದೆ ಮೊಹಮ್ಮದ್ ಶಮಿ ಅವರನ್ನು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಕೊರೋನಾ ಸೋಂಕಿಗೆ ಒಳಗಾಗಿದ್ದ ಕಾರಣ ಅವರು ಈ ಎರಡು ಸರಣಿಗಳನ್ನು ತಪ್ಪಿಸಿಕೊಂಡಿದ್ದರು. ಇದಾಗ್ಯೂ ಅವರನ್ನು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಜಸ್ಪ್ರೀತ್ ಬುಮ್ರಾ ಹೊರಗುಳಿದಿರುವುದು ಎನ್ನಲಾಗಿದೆ. ಅಂದರೆ ಬುಮ್ರಾ ಸ್ಥಾನದಲ್ಲಿ ಶಮಿ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಈ ಹಿಂದೆಯೇ ಪ್ಲ್ಯಾನ್ ರೂಪಿಸಿರುವ ಕಾರಣ ಅವರನ್ನು ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.