ಆಸ್ಟ್ರೇಲಿಯಾ ಸರಣಿ ಮಧ್ಯೆ ಶಮಿ ಎಂಟ್ರಿ ಸಾಧ್ಯತೆ

|

Updated on: Oct 28, 2024 | 9:27 AM

Mohammed Shami: ಮೊಹಮ್ಮದ್ ಶಮಿ ಟೀಮ್ ಇಂಡಿಯಾ ಪರ 64 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 229 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದಾಗ್ಯೂ ಶಮಿ ಅವರನ್ನು ಫಿಟ್​ನೆಸ್ ಸಮಸ್ಯೆಯ ಕಾರಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿಲ್ಲ. ಆದರೀಗ ಕಂಬ್ಯಾಕ್ ಮಾಡಲು ಟೀಮ್ ಇಂಡಿಯಾ ವೇಗಿ ಸಜ್ಜಾಗಿದ್ದಾರೆ.

ಆಸ್ಟ್ರೇಲಿಯಾ ಸರಣಿ ಮಧ್ಯೆ ಶಮಿ ಎಂಟ್ರಿ ಸಾಧ್ಯತೆ
Mohammed Shami
Follow us on

ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್​ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 18 ಸದಸ್ಯರ ಈ ತಂಡದಲ್ಲಿ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ ಕಾಣಿಸಿಕೊಂಡಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಅವರ ಫಿಟ್​ನೆಸ್ ಸಮಸ್ಯೆ. ಪಾದದ ನೋವಿನಿಂದ ಚೇತರಿಸಿಕೊಂಡಿರುವ ಶಮಿ ಇದೀಗ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್​​ನೆಸ್ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.

ಅತ್ತ ಫಿಟ್​​ನೆಸ್​ ಪಡೆಯಲು ಕಸರತ್ತು ಶುರು ಮಾಡಿದರೂ ಶಮಿ ಅವರನ್ನು ಆಸ್ಟ್ರೇಲಿಯಾ ಸರಣಿಗೆ ಪರಿಗಣಿಸದಿರಲು ಕಾರಣ, ಅವರು ಒಂದು ವರ್ಷದಿಂದ ಯಾವುದೇ ಪಂದ್ಯವನ್ನಾಡದಿರುವುದು. ಹೀಗಾಗಿಯೇ ಮೊಹಮ್ಮದ್ ಶಮಿ ದೇಶೀಯ ಅಂಗಳದಲ್ಲಿ ಒಂದೆರಡು ಪಂದ್ಯಗಳನ್ನಾಡಿ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇದೀಗ ಬೌಲಿಂಗ್ ಅಭ್ಯಾಸ ಶುರು ಮಾಡಿರುವ ಮೊಹಮ್ಮದ್ ಶಮಿ ನವೆಂಬರ್ 6 ರಿಂದ ರಣಜಿ ಕ್ರಿಕೆಟ್​ಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಈ ವರದಿಯಂತೆ ಶಮಿ ಡಿಸೆಂಬರ್ ಒಳಗೆ ಎರಡು ಮೂರು ರಣಜಿ ಪಂದ್ಯಗಳನ್ನಾಡಿದರೆ ಅವರನ್ನು ಆಸ್ಟ್ರೇಲಿಯಾ ಸರಣಿಗೆ ಪರಿಗಣಿಸಲಿದ್ದಾರೆ. ಅದರಂತೆ ಮೊಹಮ್ಮದ್ ಶಮಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯದ ವೇಳೆ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಅಂದರೆ ಬ್ರಿಸ್ಬೇನ್​ನಲ್ಲಿ ಡಿಸೆಂಬರ್ 14 ರಿಂದ ಶುರುವಾಗಲಿರುವ ಗಬ್ಬಾ ಟೆಸ್ಟ್​ಗೂ ಮುನ್ನ ಶಮಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ನಡುವೆಯೇ ಮೊಹಮ್ಮದ್ ಶಮಿ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟರೂ ಅಚ್ಚರಿಪಡಬೇಕಿಲ್ಲ.

ಬಾರ್ಡರ್-ಗವಾಸ್ಕರ್​ ಟೆಸ್ಟ್​ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ವಿರಾಟ್ ಕೊಹ್ಲಿ , ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್​ಮನ್ ಗಿಲ್ , ಸರ್ಫರಾಝ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್ , ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ , ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.

ಮೀಸಲು ಆಟಗಾರರು: ಮುಖೇಶ್ ಕುಮಾರ್, ಖಲೀಲ್ ಅಹ್ಮದ್, ನವದೀಪ್ ಸೈನಿ.

ಇದನ್ನೂ ಓದಿ: 4 ಓವರ್​ಗಳಲ್ಲಿ 93 ರನ್​ಗಳು… 7 ರನ್​ಗಳಿಂದ ಬೌಲರ್​ಗೆ ಶತಕ ಮಿಸ್..!

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳಾಪಟ್ಟಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 22 ನವೆಂಬರ್ 2024 7:50 AM ಪರ್ತ್
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) ಶುಕ್ರವಾರ, 6 ಡಿಸೆಂಬರ್ 2024 9:30 AM ಅಡಿಲೇಡ್
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶನಿವಾರ, 14 ಡಿಸೆಂಬರ್ 2024 5:50 AM ಬ್ರಿಸ್ಬೇನ್
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಗುರುವಾರ, 26 ಡಿಸೆಂಬರ್ 2024 5 AM ಮೆಲ್ಬೋರ್ನ್
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 3 ಜನವರಿ 2025 5 AM ಸಿಡ್ನಿ