BGT 2025: ಬಾರ್ಡರ್-ಗವಾಸ್ಕರ್ ಸರಣಿ ಗೆಲ್ಲೋರು ಯಾರೆಂದು ತಿಳಿಸಿದ ರಿಕಿ ಪಾಟಿಂಗ್
India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಮೊದಲ ಪಂದ್ಯವು ಪರ್ತ್ನಲ್ಲಿ ನಡೆದರೆ, 2ನೇ ಪಂದ್ಯಕ್ಕೆ ಅಡಿಲೇಡ್ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿದೆ. ಅಂದರೆ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಚರ್ಚೆಗಳು ಶುರುವಾಗಿದೆ. ನವೆಂಬರ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಸರಣಿಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಉತ್ತರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಿಕಿ ಪಾಂಟಿಂಗ್, ಇದು ಸ್ಪರ್ಧಾತ್ಮಕ ಸರಣಿಯಾಗಲಿದೆ. ಕಳೆದ ಎರಡು ಸರಣಿಗಳಲ್ಲಿ ಇಲ್ಲಿ ಏನಾಯಿತು ಎಂಬುದರ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತವರಿನಲ್ಲಿ ಪುಟಿದೇಳಲು ಇದು ಸುವರ್ಣಾವಕಾಶವಾಗಿರುತ್ತದೆ.
ಏಕೆಂದರೆ ಈ ಬಾರಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಕೇವಲ ನಾಲ್ಕು ಟೆಸ್ಟ್ ಪಂದ್ಯಗಳಿದ್ದವು. ಐದು ಟೆಸ್ಟ್‌ಗಳನ್ನು ಆಡಲು ಪ್ರತಿಯೊಬ್ಬರೂ ನಿಜವಾಗಿಯೂ ಉತ್ಸುಕರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಹಾಗೆಯೇ ಐದು ಪಂದ್ಯಗಳಿರುವುದರಿಂದ ಕೆಲ ಮ್ಯಾಚ್ಗಳು ಡ್ರಾ ಆಗಬಹುದು. ಇದಾಗ್ಯೂ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ 3-1 ಅಂತರದಿಂದ ಗೆಲ್ಲಲಿದೆ ಎಂದು ರಿಕಿ ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.
ಅಂದರೆ ರಿಕಿ ಪಾಂಟಿಂಗ್ ಪ್ರಕಾರ, ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಗೆಲ್ಲಲಿದೆ. ಅತ್ತ ಆಸೀಸ್ ಪಡೆ 3 ಮ್ಯಾಚ್ಗಳಲ್ಲಿ ಜಯ ಸಾಧಿಸುವ ಮೂಲಕ 3-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಪಾಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ. ಗ್ಯಾರಂಟಿ..!
ಅಂದಹಾಗೆ ಆಸ್ಟ್ರೇಲಿಯಾ ತಂಡವು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಕೊನೆಯ ಬಾರಿಗೆ ಗೆದ್ದಿರುವುದು 2014-15 ರಲ್ಲಿ. ಇದಾದ ಬಳಿಕ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಸರಣಿ ಜಯಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಕಳೆದ ಎರಡು ಸರಣಿಗಳನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದಿರುವುದು ವಿಶೇಷ.
ಬಾರ್ಡರ್-ಗವಾಸ್ಕರ್ ಟ್ರೋಫಿ ವಿಜೇತರು:
ಸೀಸನ್ | ವಿಜೇತರು | ಪಂದ್ಯಗಳು | ಅಂತರ | ಆತಿಥ್ಯ |
1996/97 | ಭಾರತ | 1 | 1-0 | ಭಾರತ |
1997/98 | ಭಾರತ | 3 | 2-1 | ಭಾರತ |
1999/00 | ಆಸ್ಟ್ರೇಲಿಯಾ | 3 | 3-0 | ಆಸ್ಟ್ರೇಲಿಯಾ |
2000/01 | ಭಾರತ | 3 | 2-1 | ಭಾರತ |
2003/04 | ಡ್ರಾ | 4 | 1-1 | ಆಸ್ಟ್ರೇಲಿಯಾ |
2004/05 | ಆಸ್ಟ್ರೇಲಿಯಾ | 4 | 2-1 | ಭಾರತ |
2007/08 | ಆಸ್ಟ್ರೇಲಿಯಾ | 4 | 2-1 | ಆಸ್ಟ್ರೇಲಿಯಾ |
2008/09 | ಭಾರತ | 4 | 2-0 | ಭಾರತ |
2010/11 | ಭಾರತ | 2 | 2-0 | ಭಾರತ |
2011/12 | ಆಸ್ಟ್ರೇಲಿಯಾ | 4 | 4-0 | ಆಸ್ಟ್ರೇಲಿಯಾ |
2012/13 | ಭಾರತ | 4 | 4-0 | ಭಾರತ |
2014/15 | ಆಸ್ಟ್ರೇಲಿಯಾ | 4 | 2-0 | ಆಸ್ಟ್ರೇಲಿಯಾ |
2016/17 | ಭಾರತ | 4 | 2-1 | ಭಾರತ |
2018/19 | ಭಾರತ | 4 | 2-1 | ಆಸ್ಟ್ರೇಲಿಯಾ |
2020/21 | ಭಾರತ | 4 | 2-1 | ಆಸ್ಟ್ರೇಲಿಯಾ |
ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 22 ನವೆಂಬರ್ 2024 | 7:50 AM | ಪರ್ತ್ |
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |
Published On - 1:06 pm, Tue, 13 August 24