- Kannada News Photo gallery Cricket photos Virat Kohli could easily get 30 Crores in IPL auction: IPL Hugh Edmeades
Virat Kohli: ವಿರಾಟ್ ಕೊಹ್ಲಿ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ. ಗ್ಯಾರಂಟಿ..!
Virat Kohli: ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಾತ್ರ ಕಣಕ್ಕಿಳಿದಿದ್ದಾರೆ. 2008 ರಲ್ಲಿ 12 ಲಕ್ಷ ರೂ. ಸಂಭಾವನೆಯೊಂದಿಗೆ ಶುರುವಾದ ಜರ್ನಿಯು ಇದೀಗ 15 ಕೋಟಿ ರೂ.ಗೆ ಬಂದು ನಿಂತಿದೆ. ಇನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ 15 ಕೋಟಿ ರೂ.ಗೂ ಅಧಿಕ ಮೊತ್ತ ನೀಡಿ ವಿರಾಟ್ ಕೊಹ್ಲಿಯನ್ನು ಆರ್ಸಿಬಿ ಉಳಿಸಿಕೊಳ್ಳಲಿದೆ.
Updated on: Aug 13, 2024 | 8:03 AM

ಐಪಿಎಲ್ (IPL 2025) ಮೆಗಾ ಹರಾಜಿನ ಸಿದ್ಧತೆಗಳು ಶುರುವಾಗಿದೆ. ಈ ಹರಾಜಿಗೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸುವಲ್ಲಿ ಐಪಿಎಲ್ ಆಡಳಿತ ಮಂಡಳಿ ನಿರತರಾಗಿದ್ದಾರೆ. ಇದರ ನಡುವೆ ಈ ಬಾರಿಯ ಹರಾಜಿಗೂ ಮುನ್ನ 6 ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಹೀಗಾಗಿ ಈ ಬಾರಿಯ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವುದು ಖಚಿತ. ಒಂದು ವೇಳೆ ಕೆಲ ಪ್ರಮುಖ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಂಡರೆ ಕೋಟಿ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಅದರಲ್ಲೂ ಬ್ಯಾಟಿಂಗ್ ಮೆಸ್ಟ್ರೋ ವಿರಾಟ್ ಕೊಹ್ಲಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ 30 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಹರಾಜಾಗುವುದು ಖಚಿತ. ಹೀಗೆ ಅಂದಿದ್ದು ಮತ್ಯಾರೂ ಅಲ್ಲ, ಅನುಭವಿ ಹರಾಜುದಾರ ಹ್ಯೂ ಎಡ್ಮೀಡ್ಸ್. ಎಡ್ಮೀಡ್ಸ್ 2018 ರಿಂದ 2022 ರವರೆಗೆ ಐಪಿಎಲ್ನಲ್ಲಿ ಹರಾಜುದಾರನಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ವಿಶ್ವದಾದ್ಯಂತ ಅವರು 2,500 ಕ್ಕೂ ಹೆಚ್ಚು ಹರಾಜುಗಳನ್ನು ನಡೆಸಿದ್ದಾರೆ.

ಹೀಗೆ ಹಲವು ಹರಾಜುಗಳಲ್ಲಿ ಪಾಲ್ಗೊಂಡಿರುವ ಹ್ಯೂ ಎಡ್ಮೀಡ್ಸ್ ಅವರ ಪ್ರಕಾರ, ಐಪಿಎಲ್ನ ಸ್ಟಾರ್ ಎಂದರೆ ವಿರಾಟ್ ಕೊಹ್ಲಿ. ಅವರೇನಾದರೂ ಹರಾಜಿನ ಭಾಗವಾದರೆ 30 ಕೋಟಿ ರೂ.ಗೂ ಅಧಿಕ ಮೊತ್ತಕ್ಕೆ ಬಿಕರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಿಂಗ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರ ಎನಿಸಿಕೊಳ್ಳಲಿದ್ದಾರೆ ಎಂದು ಎಡ್ಮೀಡ್ಸ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ 2008 ರಲ್ಲಿ 12 ಲಕ್ಷ ರೂ.ಗೆ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ ವಿರಾಟ್ ಕೊಹ್ಲಿ ಆ ಬಳಿಕ ಯಾವತ್ತೂ ಹರಾಜಿನಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ಪರ ಅತೀ ವರ್ಷ ಆಡಿದ ಆಟಗಾರ ಎಂಬ ದಾಖಲೆ ಕೂಡ ಕಿಂಗ್ ಕೊಹ್ಲಿ ಹೆಸರಿನಲ್ಲಿದೆ.

ಇನ್ನು ಈ ಬಾರಿ ಐಪಿಎಲ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ ಆರ್ಸಿಬಿ ವಿರಾಟ್ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಈ ಬಾರಿ ಸಹ ಕಿಂಗ್ ಕೊಹ್ಲಿಯನ್ನು ಹರಾಜಿನಲ್ಲಿ ನಿರೀಕ್ಷಿಸುವಂತಿಲ್ಲ.
