IND vs ENG: ಸಿರಾಜ್ ಭುಜಬಲದ ಪರಾಕ್ರಮಕ್ಕೆ ಐಸಿಸಿಯಿಂದ ಬಿತ್ತು ದಂಡದ ಬರೆ

Mohammed Siraj Fined by ICC: ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದಲ್ಲಿ, ಮೊಹಮ್ಮದ್ ಸಿರಾಜ್ ವಿಕೆಟ್ ಪಡೆದ ನಂತರ ಆಕ್ರಮಣಕಾರಿಯಾಗಿ ಆಚರಿಸಿದ್ದಕ್ಕಾಗಿ ಐಸಿಸಿ ದಂಡ ವಿಧಿಸಿದೆ. ಬೆನ್ ಡಕೆಟ್ ಅವರ ಭುಜಕ್ಕೆ ತನ್ನ ಭುಜವನ್ನು ತಾಗಿಸಿದ್ದಕ್ಕಾಗಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದು ಕಳೆದ 24 ತಿಂಗಳಲ್ಲಿ ಸಿರಾಜ್‌ನ ಎರಡನೇ ಅಪರಾಧವಾಗಿದ್ದು, ಮುಂದಿನ ತಪ್ಪು ಪಂದ್ಯ ನಿಷೇಧಕ್ಕೆ ಕಾರಣವಾಗಬಹುದು.

IND vs ENG: ಸಿರಾಜ್ ಭುಜಬಲದ ಪರಾಕ್ರಮಕ್ಕೆ ಐಸಿಸಿಯಿಂದ ಬಿತ್ತು ದಂಡದ ಬರೆ
Mohammed Siraj

Updated on: Jul 14, 2025 | 4:20 PM

ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ರೋಚಕಘಟ್ಟದತ್ತ ಸಾಗಿದೆ. ಲಾರ್ಡ್ಸ್‌ ಮೈದಾನದಲ್ಲಿ (Lords Test) ಗೆಲುವಿಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬರುತ್ತಿದೆ. ಈ ನಡುವೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್​ಗೆ (Mohammed Siraj) ಐಸಿಸಿ ದಂಡದ ಬರೆ ಎಳೆದಿದೆ. ವಾಸ್ತವವಾಗಿ ಈ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಬೌಲಿಂಗ್ ಮಾಡುವ ವೇಳೆ ಮೊಹಮ್ಮದ್ ಸಿರಾಜ್, ಐಸಿಸಿ (ICC) ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು. ಇಂಗ್ಲೆಂಡ್‌ ಆರಂಭಿಕ ಆಟಗಾರ ಬೆನ್ ಡಕೆಟ್ ವಿಕೆಟ್ ಉರಳಿಸಿದ್ದ ಸಿರಾಜ್, ಅವರ ಬಳಿ ಹೋಗಿ ಆಕ್ರಮಣಕಾರಿಯಾಗಿ ಸಂಭ್ರಮಾಚರಿಸಿದಲ್ಲದೆ, ಈ ವೇಳೆ ಅವರ ಭುಜಕ್ಕೆ ತಮ್ಮ ಭುಜ ತಾಗಿಸಿದ್ದರು. ಹೀಗಾಗಿ ಸಿರಾಜ್ ಐಸಿಸಿ ನೀತಿ ಸಂಹಿತೆಯ ಸೆಕ್ಷನ್ 2.5 ರ ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದು, ದಂಡ ವಿಧಿಸಲಾಗಿದೆ.

ಭುಜಬಲದ ಪರಾಕ್ರಮ

ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್ ಡಕೆಟ್ ರೂಪದಲ್ಲಿ ಸಿರಾಜ್ ತಮ್ಮ ಮೊದಲ ವಿಕೆಟ್ ಉರುಳಿಸಿದರು. ನಾಲ್ಕನೇ ದಿನದ ಮೊದಲ ಸೆಷನ್​ನಲ್ಲಿ ಸಿರಾಜ್ ಈ ವಿಕೆಟ್ ಪಡೆದರು. ಡಕೆಟ್ ಅವರನ್ನು ಔಟ್ ಮಾಡಿದ ನಂತರ, ಸಿರಾಜ್ ವಿಕೆಟ್ ಪಡೆದ ಸಂಭ್ರಮದಲ್ಲಿ ಸ್ವಲ್ಪ ಆಕ್ರಮಣಕಾರಿಯಾದರು. ಈ ವೇಳೆ ಸಿರಾಜ್, ಬೆನ್ ಡಕೆಟ್‌ ಅವರ ಭುಜಕ್ಕೂ ತಮ್ಮ ಭುಜ ತಾಗಿಸಿದ್ದರು.

ಈ ತಪ್ಪಿಗೆ ಸಿರಾಜ್‌ಗೆ ದಂಡ ವಿಧಿಸಲಾಗಿದ್ದು, ಅವರ ಖಾತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿದೆ. ಈ ಮೂಲಕ ಸಿರಾಜ್​ ಇದುವರೆಗೆ ಒಟ್ಟು 2 ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದಿದ್ದಾರೆ. ಕಳೆದ 24 ತಿಂಗಳಲ್ಲಿ ಇದು ಸಿರಾಜ್ ಮಾಡಿದ ಎರಡನೇ ತಪ್ಪಾಗಿದ್ದು, ಸಿರಾಜ್​ಗೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗುವ ಭೀತಿ ಎದುರಾಗಿದೆ.

ಐಸಿಸಿಯಿಂದ ಮಾಹಿತಿ

4 ವಿಕೆಟ್ ಕಬಳಿಸಿದ ಸಿರಾಜ್

ಲಾರ್ಡ್ಸ್ ಟೆಸ್ಟ್​ನಲ್ಲಿ ಸಿರಾಜ್ 116 ರನ್​ಗಳಿಗೆ 4 ವಿಕೆಟ್ ಕಬಳಿಸಿದ್ದಾರೆ. ಇದರಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ 85 ರನ್ ಗಳಿಗೆ 2 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್​ನಲ್ಲಿ 31 ರನ್​ಗಳಿಗೆ ಉಳಿದ 2 ವಿಕೆಟ್​ಗಳನ್ನು ಕಬಳಿಸಿದ್ದರು. ಲಾರ್ಡ್ಸ್ ಟೆಸ್ಟ್​ಗೆ ಸಂಬಂಧಿಸಿದಂತೆ ಹೇಳುವುದಾದರೆ, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಎಂದು ಹೇಳುವುದು ಕಷ್ಟಕರವಾಗಿದೆ. ಟೀಂ ಇಂಡಿಯಾ ಈಗಾಗಲೇ ತನ್ನ ಪ್ರಮುಖ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದು. ಸೋಲಿನ ಭೀತಿಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Mon, 14 July 25