
ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ನೈಜ ಹೋರಾಟಗಾರ. ತಂಡಕ್ಕಾಗಿ ಸರ್ವಸ್ವವನ್ನು ನೀಡುತ್ತಾರೆ. ಅಂತಹ ಆಟಗಾರರು ತಂಡದಲ್ಲಿರಬೇಕೆಂದು ಎಲ್ಲರೂ ಬಯಸುತ್ತಾರೆ ಎಂದು ಇಂಗ್ಲೆಂಡ್ ತಂಡದ ಜೋ ರೂಟ್ ಹೇಳಿದ್ದಾರೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ 4ನೇ ದಿನದಾಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೂಟ್ ಟೀಮ್ ಇಂಡಿಯಾ ವೇಗಿಯನ್ನು ಹಾಡಿ ಹೊಗಳಿದ್ದಾರೆ.
ಮೊಹಮ್ಮದ್ ಸಿರಾಜ್ ಯಾವುದೇ ಪರಿಸ್ಥಿತಿಯಲ್ಲಿ ತನ್ನ ತಂಡಕ್ಕಾಗಿ ಹೋರಾಡುವ ಆಟಗಾರ. ಅವರು ಯಾವಾಗಲೂ ಮೈದಾನದಲ್ಲಿ ಎಲ್ಲವನ್ನೂ ನೀಡುತ್ತಾರೆ. ಕೆಲವೊಮ್ಮೆ ನಕಲಿ ಕೋಪವನ್ನು ಸಹ ಪ್ರದರ್ಶಿಸುತ್ತಾರೆ. ಆ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ ಎಂದು ಜೋ ರೂಟ್ ನಕ್ಕರು.
ಆದರೆ ಅವರು ನಿಜಕ್ಕೂ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿ. ಕಠಿಣ ಪರಿಶ್ರಮಿ, ತುಂಬಾ ಕೌಶಲ್ಯಪೂರ್ಣರು ಮತ್ತು ಅದಕ್ಕಾಗಿಯೇ ಅವರು ಇಷ್ಟೊಂದು ವಿಕೆಟ್‌ಗಳನ್ನು ಪಡೆದಿದ್ದಾರೆ. ಸಿರಾಜ್‌ನಂತಹ ಆಟಗಾರನೊಂದಿಗೆ ಆಡುವುದು ಖುಷಿಯಾಗುತ್ತದೆ. ಏಕೆಂದರೆ ಅವರು ಯಾವಾಗಲೂ ಹಸನ್ಮುಖಿಯಾಗಿರುತ್ತಾರೆ ಎಂದು ಜೋ ರೂಟ್ ಸಿರಾಜ್ ಅವರನ್ನು ಹೊಗಳಿದ್ದಾರೆ.
ಮೊಹಮ್ಮದ್ ಸಿರಾಜ್ ತಂಡಕ್ಕಾಗಿ ಸರ್ವಸ್ವವನ್ನು ಅರ್ಪಿಸುವಂತಹ ಆಟಗಾರ. ಅಂತಹ ಆಟಗಾರರಿಂದ ಯುವ ಆಟಗಾರರು ಸಾಕಷ್ಟು ಕಲಿಯಬಹುದು. ಈ ಮೂಲಕ ಯುವ ಕ್ರಿಕೆಟರಿಗೆ ಸಿರಾಜ್ ಮಾದರಿಯಾಗಿದ್ದಾರೆ ಎಂದು ಜೋ ರೂಟ್ ಇದೇ ವೇಳೆ ಹೇಳಿದರು.
ಇನ್ನು ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ, ಈ ಸರಣಿಯಲ್ಲಿ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇಲ್ಲಿಯವರೆಗೆ 5 ಟೆಸ್ಟ್ ಪಂದ್ಯಗಳಲ್ಲಿ 36.85 ಸರಾಸರಿಯಲ್ಲಿ ಒಟ್ಟು 20 ವಿಕೆಟ್ ಪಡೆದಿದ್ದಾರೆ.
ಐದನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿದ್ದ ಸಿರಾಜ್ ದ್ವಿತೀಯ ಇನಿಂಗ್ಸ್ನಲ್ಲಿ ಈವರೆಗೆ 2 ವಿಕೆಟ್ ಪಡೆದಿದ್ದಾರೆ. ಇದೀಗ ಪಂದ್ಯವು ಕೊನೆಯ ದಿನದಾಟಕ್ಕೆ ಕಾಲಿಟ್ಟಿದೆ.
ಈ ಮ್ಯಾಚ್ನಲ್ಲಿ ಗೆಲ್ಲಲು ಇಂಗ್ಲೆಂಡ್ ತಂಡ ಇನ್ನೂ 35 ರನ್ಗಳಿಸಬೇಕಿದೆ. ಇತ್ತ ಟೀಮ್ ಇಂಡಿಯಾ 4 ವಿಕೆಟ್ ಕಬಳಿಸಿದರೆ ಮಾತ್ರ ಪಂದ್ಯ ಗೆಲ್ಲಬಹುದು. ಹೀಗಾಗಿ ಐದನೇ ದಿನದಾಟದ ಮೊದಲ ಸೆಷನ್ನಲ್ಲೇ ಪಂದ್ಯದ ಫಲಿತಾಂಶವನ್ನು ನಿರೀಕ್ಷಿಸಬಹುದು.
ಭಾರತ ಮತ್ತು ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್ ನಲ್ಲಿ 224 ರನ್ ಕಲೆಹಾಕಿದರೆ, ಇಂಗ್ಲೆಂಡ್ 247 ರನ್ ಗಳಿಸಿತು.
ಇದನ್ನೂ ಓದಿ: 46 ವರ್ಷಗಳ ಬಳಿಕ ಟೀಮ್ ಇಂಡಿಯಾದ ಶತಕಗಳ ದಾಖಲೆ ಮುರಿದ ಯಂಗ್ ಇಂಡಿಯಾ
ಇನ್ನು ದ್ವಿತೀಯ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾ 396 ರನ್ ಗಳಿಸಿತು. ಮೊದಲ ಇನಿಂಗ್ಸ್ ನಲ್ಲಿನ 23 ರನ್ ಗಳ ಮುನ್ನಡೆಯೊಂದಿಗೆ 374 ರನ್ ಗಳ ಗುರಿ ಪಡೆದ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ. ಸದ್ಯ ಕ್ರೀಸ್ನಲ್ಲಿ ಜೇಮಿ ಸ್ಮಿತ್ ಹಾಗೂ ಜೇಮಿ ಓವರ್ಟನ್ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಐದನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.