IND vs ENG: ವಿರಾಟ್ ಕೊಹ್ಲಿಗೆ ಧನ್ಯವಾದ ತಿಳಿಸಿದ ಮೊಹಮ್ಮದ್ ಸಿರಾಜ್

India vs England 2nd Test: ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 7 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ಪಡೆದ ಸಿರಾಜ್, ದ್ವಿತೀಯ ಇನಿಂಗ್ಸ್​ನಲ್ಲಿ ಮೊದಲ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

IND vs ENG: ವಿರಾಟ್ ಕೊಹ್ಲಿಗೆ ಧನ್ಯವಾದ ತಿಳಿಸಿದ ಮೊಹಮ್ಮದ್ ಸಿರಾಜ್
Virat Kohli - Siraj

Updated on: Jul 07, 2025 | 8:54 AM

ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಆತಿಥೇಯ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 587 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್​ 407 ರನ್​ಗಳಿಸಲಷ್ಟೇ ಶಕ್ತರಾದರು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ 427 ರನ್​ಗಳಿಸಿ ಭಾರತ ತಂಡವು ಡಿಕ್ಲೇರ್ ಘೋಷಿಸಿತು. ಮೊದಲ ಇನಿಂಗ್ಸ್​ನಲ್ಲಿನ ಹಿನ್ನಡೆಯೊಂದಿಗೆ 608 ರನ್​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಕೇವಲ 271 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 336 ರನ್​ಗಳ ಅಮೋಘ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಟೀಮ್ ಇಂಡಿಯಾದ ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿನಂದನೆ ಸಲ್ಲಿಸಿದ್ದರು.”ಎಡ್ಜ್‌ಬಾಸ್ಟನ್‌ನಲ್ಲಿ ಭಾರತಕ್ಕೆ ಅದ್ಭುತ ಗೆಲುವು. ನಿರ್ಭೀತರಾಗಿ ಇಂಗ್ಲೆಂಡ್ ತಂಡವನ್ನು ಸೋಲಿನತ್ತ ತಳ್ಳುತ್ತಲೇ ಇದ್ದರು. ಶುಭ್‌ಮನ್ ಬ್ಯಾಟಿಂಗ್ ಮತ್ತು ಫೀಲ್ಡ್‌ನಲ್ಲಿ ಅದ್ಭುತ ನಾಯಕತ್ವ ವಹಿಸಿದರು. ಅಲ್ಲದೆ ಎಲ್ಲರ ಪ್ರಭಾವಶಾಲಿ ಪ್ರದರ್ಶನ ನೀಡಿದರು. ಅದರಲ್ಲೂ ಈ ಪಿಚ್‌ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ ಎಂದು ಕೊಹ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇತ್ತ ತನ್ನ ಮಾಜಿ ಟೆಸ್ಟ್ ನಾಯಕನಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದಂತೆ ಮೊಹಮ್ಮದ್ ಸಿರಾಜ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಥ್ಯಾಂಕ್ಯೂ ಭಯ್ಯಾ ಎಂದು ರಿಪ್ಲೈ ಮಾಡುವ ಮೂಲಕ ಸಿರಾಜ್ ಸಂತಸ ಹಂಚಿಕೊಂಡಿದ್ದಾರೆ. ಇದೀಗ ಮೊಹಮ್ಮದ್​ ಸಿರಾಜ್ ಹಾಗೂ ವಿರಾಟ್ ಕೊಹ್ಲಿಯ ಪೋಸ್ಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿವೃತ್ತಿ ಸಂದರ್ಭದಲ್ಲಿ ಬೇಸರ ಹೊರಹಾಕಿದ್ದ ಸಿರಾಜ್:

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದಾಗ ಮೊಹಮ್ಮದ್ ಸಿರಾಜ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪತ್ರ ಹಂಚಿಕೊಂಡಿದ್ದರು. ಈ ಪತ್ರದ ಸಾರಾಂಶ ಹೀಗಿದೆ….

ನನ್ನ ಸೂಪರ್ ಹೀರೋಗೆ…  ಟೆಸ್ಟ್ ಕ್ರಿಕೆಟ್‌ನಲ್ಲಿ ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯುತ್ತದೆ. ನೀವು ನನ್ನಂತಹ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿ ನೀಡಿದ್ದೀರಿ. ನಿಮ್ಮ ಸಾಧನೆಗಳನ್ನು ಮತ್ತು ಅದನ್ನು ಮುಂದುವರಿಸುತ್ತೀರಿ ಭಯ್ಯಾ. ನೀವು ಇಲ್ಲದ ಡ್ರೆಸ್ಸಿಂಗ್ ರೂಮ್, ಈ ಹಿಂದಿನಂತೆ ಇರುವುದಿಲ್ಲ.

ಯಾವಾಗಲೂ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ನನ್ನನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಶುಭ ಹಾರೈಸುತ್ತೇನೆ. ಕಿಂಗ್ ವಿರಾಟ್ ಕೊಹ್ಲಿ ಭಯ್ಯಾ ಎಂದು ಮೊಹಮ್ಮದ್ ಸಿರಾಜ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಮೂಲಕ ತನ್ನನ್ನು ಕೆರಿಯರ್​ನ ಉದ್ದಕ್ಕೂ ಬೆಂಬಲಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಸಿರಾಜ್ ಧನ್ಯವಾದಗಳನ್ನು ಅರ್ಪಿಸಿದ್ದರು.

ಇದನ್ನೂ ಓದಿ: IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ

ಇದೀಗ ಮೊಹಮ್ಮದ್ ಸಿರಾಜ್ ಅವರ ಪ್ರದರ್ಶನವನ್ನು ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಇದರ ಬೆನ್ನಲ್ಲೇ ಸಿರಾಜ್ ಕೂಡ ತನ್ನ ಗುರುವಿಗೆ ಧನ್ಯವಾದ ತಿಳಿಸುವ ಮೂಲಕ ಗಮನ ಸೆಳೆದಿದ್ದಾರೆ.