ನಾಲ್ವರ ಸೊನ್ನೆ ಸಾಧನೆ; ಇಡೀ ತಂಡ ಕೇವಲ 17 ರನ್​ಗಳಿಗೆ ಆಲೌಟ್

|

Updated on: Aug 31, 2024 | 5:51 PM

ICC Mens T20 World Cup Asia Qualifier A 2024: ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಂಕಾಂಗ್ ಮತ್ತು ಮಂಗೋಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಂಗೋಲಿಯ ತಂಡ ಕೇವಲ 17 ರನ್​ಗಳಿಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಎರಡನೇ ಬಾರಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

ನಾಲ್ವರ ಸೊನ್ನೆ ಸಾಧನೆ; ಇಡೀ ತಂಡ ಕೇವಲ 17 ರನ್​ಗಳಿಗೆ ಆಲೌಟ್
ಹಾಂಕಾಂಗ್ ತಂಡ
Follow us on

ಮಲೇಷ್ಯಾದ ಕೌಲಾಲಂಪುರ್​ನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಂಕಾಂಗ್ ಮತ್ತು ಮಂಗೋಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಂಗೋಲಿಯ ತಂಡ ಕೇವಲ 17 ರನ್​ಗಳಿಗೆ ಆಲೌಟ್ ಆಗುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಎರಡನೇ ಬಾರಿಗೆ ಅತ್ಯಂತ ಕಡಿಮೆ ಮೊತ್ತಕ್ಕೆ ಇನ್ನಿಂಗ್ಸ್ ಮುಗಿಸಿದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ವಾಸ್ತವವಾಗಿ ಇದೇ ಮಂಗೋಲಿಯದ ಹೆಸರಿನಲ್ಲೇ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ದಾಖಲೆಯೂ ಇದೆ. 2024 ರ ಮೇ 18 ರಂದು ನಡೆದಿದ್ದ ಜಪಾನ್ ವಿರುದ್ಧದ ಪಂದ್ಯದಲ್ಲಿ ಮಂಗೋಲಿಯ ತಂಡ ಕೇವಲ 12 ರನ್​ಗಳಿಗೆ ಆಲೌಟ್ ಆಗುವ ಮೂಲಕ ಈ ಬೇಡದ ದಾಖಲೆಯನ್ನು ನಿರ್ಮಿಸಿತ್ತು.

ನಾಲ್ವರ ಶೂನ್ಯ ಸಾಧನೆ

ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾಂಕಾಂಗ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ಹಾಂಕಾಂಗ್ ತಂಡದ ಪೆವಿಲಿಯನ್ ಪರೇಡ್ ಮೊದಲ ಓವರ್​ನಿಂದಲೇ ಆರಂಭವಾಯಿತು. ಆದಾಗ್ಯೂ ಇಡೀ ತಂಡ 14.2 ಓವರ್​ಗಳನ್ನು ಆಡಿತ್ತಾದರೂ, 20 ರನ್​ಗಳನ್ನೂ ಸಹ ದಾಖಲಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಮಂಗೋಲಿಯಾದ ನಾಲ್ವರು ಆಟಗಾರರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿ ಯಾವುದೇ ಬ್ಯಾಟ್ಸ್‌ಮನ್​ಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ಮಂಗೋಲಿಯಾ ಪರ ಮೋಹನ್ ವಿವೇಕಾನಂದ 5 ರನ್‌ಗಳ ಗರಿಷ್ಠ ಇನ್ನಿಂಗ್ಸ್‌ ಆಡಿದರೆ, ಮೂವರು ಆಟಗಾರರು ತಲಾ 2 ರನ್ ಮತ್ತು ಇನ್ನು ಮೂವರು ಆಟಗಾರರು ತಲಾ 1 ರನ್ ಬಾರಿಸಿದರು.

ಇನ್ನು ಮಂಗೋಲಿಯಾ ತಂಡವನ್ನು ಇಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಹಾಂಕಾಂಗ್ ತಂಡದ ವೇಗಿಗಳ ಕೊಡುಗೆ ಪ್ರಮುಖವಾಗಿತ್ತು. ತಂಡದ ಪರ ಎಹ್ಸಾನ್ ಖಾನ್ 3 ಓವರ್ ಬೌಲ್ ಮಾಡಿ ಅಧಿಕ 4 ವಿಕೆಟ್ ಪಡೆದರೆ, ಯಾಸಿಮ್ ಮುರ್ತಾಜಾ ಹಾಗೂ ಅನಸ್ ಖಾನ್ ತಲಾ 2 ವಿಕೆಟ್ ಉರುಳಿಸಿದರು. ಉಳಿದಂತೆ ಆಯುಷ್ ಶುಕ್ಲಾ ಹಾಗೂ ಅತೀಕ್ ಇಕ್ಬಾಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

4 ಓವರ್​ ಮೇಡನ್

ಇದಲ್ಲದೇ ಹಾಂಕಾಂಗ್ ಪರ ಆಯುಷ್ ಶುಕ್ಲಾ ಅದ್ಭುತ ಬೌಲಿಂಗ್ ಮಾಡಿದರು. ಈ ಪಂದ್ಯದಲ್ಲಿ ಆಯುಷ್ ನಾಲ್ಕು ಓವರ್‌ಗಳನ್ನು ಬೌಲ್ ಮಾಡಿ ಯಾವುದೇ ರನ್ ಬಿಟ್ಟುಕೊಡಲಿಲ್ಲ. ಅಂದರೆ ಆಯುಷ್ ಬೌಲ್ ಮಾಡಿದ ಎಲ್ಲಾ ನಾಲ್ಕು ಓವರ್‌ಗಳು ಮೇಡನ್ ಆಗಿದ್ದವು. ಈ ನಾಲ್ಕು ಓವರ್‌ಗಳನ್ನು ಆಯುಷ್ ಮೇಡನ್ ಮಾಡಿದಲ್ಲದೆ ಒಂದು ವಿಕೆಟ್ ಸಹ ಪಡೆದರು.

ಹಾಂಕಾಂಗ್​ಗೆ 9 ವಿಕೆಟ್‌ ಜಯ

ಮಂಗೋಲಿಯ ನೀಡಿದ 17 ರನ್​ಗಳ ಅತ್ಯಲ್ಪ ಮೊತ್ತವನ್ನು ಬೆನ್ನಟ್ಟಿದ ಹಾಂಕಾಂಗ್ ತಂಡ ಈ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದುಕೊಂಡಿತು. 18 ರನ್‌ಗಳ ಗುರಿಯನ್ನು ತಂಡ 1.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಸಾಧಿಸಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Sat, 31 August 24