ಪಾಕ್ ತಂಡದ ಹುದ್ದೆಗೆ ಮೊರ್ನೆ ಮೊರ್ಕೆಲ್ ರಾಜೀನಾಮೆ..!

| Updated By: ಝಾಹಿರ್ ಯೂಸುಫ್

Updated on: Nov 13, 2023 | 9:19 PM

Morne Morkel: ಮೊರ್ನೆ ಮೊರ್ಕೆಲ್ ಅವರ ಸ್ಥಾನಕ್ಕೆ ಮಾಜಿ ವೇಗದ ಬೌಲರ್ ಉಮರ್ ಗುಲ್ ಅವರನ್ನು ಹೊಸ ಬೌಲಿಂಗ್ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆಯಿದೆ. ಇತ್ತ ವಿಶ್ವಕಪ್‌ಗೂ ಮುನ್ನ 2023ರ ಏಷ್ಯಾಕಪ್‌ನಲ್ಲೂ ಪಾಕಿಸ್ತಾನ್ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ನಾಯಕ ಬಾಬರ್ ಆಝಂ ಅವರ ಸ್ಥಾನಕ್ಕೂ ಕುತ್ತು ಎದುರಾಗುವ ಸಾಧ್ಯತೆಯಿದೆ.

ಪಾಕ್ ತಂಡದ ಹುದ್ದೆಗೆ ಮೊರ್ನೆ ಮೊರ್ಕೆಲ್ ರಾಜೀನಾಮೆ..!
Morne Morkel
Follow us on

ಈ ಬಾರಿಯ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವು ಕಳಪೆ ಪ್ರದರ್ಶನ ನೀಡಿತ್ತು. ಲೀಗ್ ಹಂತದಲ್ಲಿ ಆಡಿದ 9 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್​ಗಳಲ್ಲಿ ಮಾತ್ರ ಜಯ ಸಾಧಿಸಿದ್ದ ಪಾಕ್ ಪಡೆಯು ಅಂಕ ಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ವಿಶ್ವಕಪ್​ ಪಯಣ ಅಂತ್ಯಗೊಳಿಸಿದೆ. ಈ ಹೀನಾಯ ಪ್ರದರ್ಶನದ ಬೆನ್ನಲ್ಲೇ ಇದೀಗ ಪಾಕಿಸ್ತಾನ್ ತಂಡದ ಬೌಲಿಂಗ್ ಕೋಚ್ ಮೊರ್ನೆ ಮೊರ್ಕೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಶ್ವಕಪ್​ನಿಂದ ಪಾಕ್ ತಂಡ ಹೊರಬಿದ್ದ ಬೆನ್ನಲ್ಲೇ ಮೊರ್ನೆ ಮೊರ್ಕೆಲ್ ತಮ್ಮ ಬೌಲಿಂಗ್ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದು, ಇದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.

ಈ ವರ್ಷದ ಜೂನ್‌ನಲ್ಲಿ ಸೌತ್ ಆಫ್ರಿಕಾದ ಮಾಜಿ ವೇಗದ ಬೌಲರ್ ಮೊರ್ಕೆಲ್ ಅವರನ್ನು ಪಾಕಿಸ್ತಾನ್ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿತ್ತು. ಇದೀಗ ಕೇವಲ 5 ತಿಂಗಳಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಜಿಯೋ ನ್ಯೂಸ್‌ನ ವರದಿ ಪ್ರಕಾರ, ಪಿಸಿಬಿ ಮೊರ್ನೆ ಮೊರ್ಕೆಲ್ ಅವರೊಂದಿಗೆ 6 ತಿಂಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಒಪ್ಪಂದ ಮುಗಿಯುವ ಮುನ್ನವೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇನ್ನು ಮೊರ್ನೆ ಮೊರ್ಕೆಲ್ ಅವರ ಸ್ಥಾನಕ್ಕೆ ಮಾಜಿ ವೇಗದ ಬೌಲರ್ ಉಮರ್ ಗುಲ್ ಅವರನ್ನು ಹೊಸ ಬೌಲಿಂಗ್ ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆಯಿದೆ. ಇತ್ತ ವಿಶ್ವಕಪ್‌ಗೂ ಮುನ್ನ 2023ರ ಏಷ್ಯಾಕಪ್‌ನಲ್ಲೂ ಪಾಕಿಸ್ತಾನ್ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ನಾಯಕ ಬಾಬರ್ ಆಝಂ ಅವರ ಸ್ಥಾನಕ್ಕೂ ಕುತ್ತು ಎದುರಾಗುವ ಸಾಧ್ಯತೆಯಿದೆ.

ಏಕೆಂದರೆ ಪಾಕಿಸ್ತಾನ್ ತಂಡವು ಶೀಘ್ರದಲ್ಲೇ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಒಳಪಡಲಿದ್ದು, ಹೀಗಾಗಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಸೆಮಿಫೈನಲ್​ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಒಟ್ಟಿನಲ್ಲಿ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್​ನಲ್ಲಿ ಕಳಪೆ ಪ್ರದರ್ಶನ ನೀಡಿರುವ ಪಾಕಿಸ್ತಾನ್ ತಂಡಕ್ಕೆ ಮೇಜರ್ ಸರ್ಜರಿಯಾಗುವ ಎಲ್ಲಾ ಸಾಧ್ಯತೆಗಳಿದ್ದು, ಇಲ್ಲಿ ಯಾರೆಲ್ಲಾ ತಲೆದಂಡವಾಗಲಿದೆ ಕಾದು ನೋಡಬೇಕಿದೆ.