15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ಗೆ (IPL 2022) ಚಾಲನೆ ದೊರಕಿದ್ದು ಶನಿವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡ ಭರ್ಜರಿ ಗೆಲುವು ದಾಖಲಿಸಿದೆ. ಇಬ್ಬರು ನೂತನ ನಾಯಕರ ಕಾದಾಟದಲ್ಲಿ ಶ್ರೇಯಸ್ ಅಯ್ಯರ್ ಮೇಲುಗೈ ಸಾಧಿಸಿದರು. ಈ ಮೂಲಕ ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿತವಾಗಿರುವ ಅಯ್ಯರ್ಗೆ ಕೆಕೆಆರ್ ನಾಯಕ ಪಟ್ಟದಲ್ಲಿ ಮೊದಲ ಯಶಸ್ಸು ದಕ್ಕಿದೆ. ಇತ್ತ ಅಗ್ನಿ ಪರೀಕ್ಷೆಗೆ ಇಳಿದಿದ್ದ ರವೀಂದ್ರ ಜಡೇಜಾ ಅವರಿಗೆ ಭಾರೀ ಹಿನ್ನಡೆಯಾಗಿದೆ. ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅರ್ಧಶತಕದ ಹೊರತಾಗಿಯೂ ಸಿಎಸ್ಕೆ ಸೋಲು ಕಂಡಿತು. ಇತ್ತ ಕೆಕೆಆರ್ ಪರ ಕಳಪೆ ಫಾರ್ಮ್ನಿಂದಾಗಿ ಭಾರತ ತಂಡದಿಂದ ಹೊರಬಿದ್ದಿದ್ದ ಅಜಿಂಕ್ಯಾ ರಹಾನೆ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು. ರುತುರಾಜ್ ಗಾಯಕ್ವಾಡ್ ಅವರು ಉಮೇಶ್ ಯಾದವ್ ಬೌಲಿಂಗ್ನಲ್ಲಿ ಶೂನ್ಯಕ್ಕೆ ಔಟ್ ಆದರು. ಹಾಗೂ ಮತ್ತೋರ್ವ ಆರಂಭಿಕ ಆಟಗಾರ ಡಿವೋನ್ ಕಾನ್ವೆ ಕೂಡ 3 ರನ್ ಗಳಿಸಿ ಔಟ್ ಆದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಬಿನ್ ಉತ್ತಪ್ಪ 21 ಎಸೆತಗಳಲ್ಲಿ 28 ರನ್ ಗಳಿಸಿ ಔಟ್ ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಂಬಟಿ ರಾಯುಡು 17 ಎಸೆತಗಳಿಗೆ 15 ರನ್ ನೀಡಿ ಔಟ್ ಆದರು ಹಾಗೂ ತಂಡದ ಆಲ್ರೌಂಡರ್ ಶಿವಮ್ ದುಬೆ 6 ಎಸೆತಗಳಲ್ಲಿ 3 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಹೀಗೆ ಚೆನ್ನೈ ಬೇಗನೇ ತನ್ನ ಮೊದಲ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಗ ತಂಡಕ್ಕೆ ಆಸರೆಯಾದದ್ದು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಂಎಸ್ ಧೋನಿ. ಇವರಿಗೆ ನಾಯಕ ಜಡೇಜಾ ಕೂಡ ಉತ್ತಮ ಸಾಥ್ ನೀಡಿದರು. ತಾವು ಎದುರಿಸಿದ್ದ ಮೊದಲ 10 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದ ಧೋನಿ ಅಂತಿಮ 28 ಎಸೆತಗಳಲ್ಲಿ 48 ರನ್ ಬಾರಿಸಿದರು. ಇದು ಐಪಿಎಲ್ನಲ್ಲಿ ಧೋನಿ ಬ್ಯಾಟ್ನಿಂದ ಸಿಡಿದ 24ನೇ ಅರ್ಧಶತಕವಾಗಿದೆ. ಮಹಿ ಕೊನೆಯದಾಗಿ 2019ರಲ್ಲಿ ಬೆಂಗಳೂರಿನಲ್ಲಿ ಆರ್ಸಿಬಿ ವಿರುದ್ಧ ಫಿಫ್ಟಿ ಗಳಿಸಿದ್ದರು. ಅಲ್ಲದೆ 40ರ ಹರೆಯದಲ್ಲೂ ಅದ್ಭುತ ಫಿಟ್ನೆಸ್ ಹಾಗೂ ಬ್ಯಾಟಿಂಗ್ ಕೌಶಲ್ಯ ಮೆರೆಯುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.
ಧೋನಿ ನೆಲಕಚ್ಚಿ ನಿಂತ ನಂತರ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 38 ಎಸೆತಗಳಲ್ಲಿ ಅಜೇಯ 50 ರನ್ ಬಾರಿಸಿದರು. ಇನ್ನು ಧೋನಿಗೆ ಸಾಥ್ ನೀಡಿದ ನಾಯಕ ಜಡೇಜಾ 28 ಎಸೆತಗಳಲ್ಲಿ ಅಜೇಯ 26 ರನ್ ಬಾರಿಸಿದರು. ಸಿಎಸ್ಕೆ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿತು. ಕೆಕೆಆರ್ ಪರ ಉಮೇಶ್ ಯಾದವ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಹಾಗೂ ಆಂಡ್ರೆ ರಸೆಲ್ ತಲಾ ಒಂದೊಂದು ವಿಕೆಟ್ ಪಡೆದರು.
132 ರನ್ಗಳ ಗುರಿ ಬೆನ್ನಟ್ಟಿದ ಕೆಕೆಆರ್ಗೆ ಆರಂಭಿಕರಾದ ಅಂಜಿಕ್ಯಾ ರಹಾನೆ ಹಾಗೂ ವೆಂಕಟೇಶ್ ಅಯ್ಯರ್ 43 ರನ್ಗಳ ಜೊತೆಯಾಟ ನೀಡಿದರು. ಅಯ್ಯರ್, ಬ್ರಾವೋಗೆ ವಿಕೆಟ್ ಒಪ್ಪಿಸಿದರು. ಬಳಿಕ ನಿತಿಶ್ ರಾಣಾ 21 ರನ್ಗಳಿಸಲಷ್ಟೇ ಶಕ್ತರಾದರು. ಕೆಕೆಆರ್ ತಂಡ 76ರನ್ಗಳಿಸಿದ್ದಾಗ ಮತ್ತೆ ಬ್ರಾವೋಗೆ ನಿತಿಶ್ ರಾಣಾ ಔಟ್ ಆದರು. ಆರಂಭಿಕ ಆಟಗಾರನಾಗಿ ಬಂದಿದ್ದ ಅಜಿಂಕ್ಯಾ ರಹಾನೆ ಉತ್ತಮ್ಮ ಪ್ರದರ್ಶನ ನೀಡಿದರು 34 ಬಾಲ್ಗಳಲ್ಲಿ 44 ರನ್ಗಳಿಸಿ ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿ ಔಟ್ ಆದರು.
ನಿತೀಶ್ ರಾಣಾ ಔಟ್ ಆಗುತ್ತಿದ್ದಂತೆ ಗೆಲುವಿಗೆ ಹೋರಾಟ ನಡೆಸಿದ ನಾಯಕ ಶ್ರೇಯಸ್ ಅಯ್ಯರ್ ತಾಳ್ಮೆ ಕಳೆದುಕೊಳ್ಳದೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಗೆ ಸಾಥ್ ನೀಡಿದ ಸ್ಯಾಮ್ ಬಿಲ್ಲಿಂಗ್ಸ್ ಅದ್ಭುತ ಆಟವಾಡಿದರು. ಸ್ಯಾಮ್ ಬಿಲ್ಲಿಂಗ್ಸ್ 22 ಬಾಲ್ಗೆ 25 ರನ್ ಗಳಿಸಿ ಔಟ್ ಆದರು. ಇನ್ನೂ ಶ್ರೇಯಸ್ ಅಯ್ಯರ್ ಔಟಾಗದೆ 19 ಬಾಲ್ಗಳಲ್ಲಿ20 ರನ್ಗಳಿಸಿದರು. ಅಂತಿಮವಾಗಿ ಕೆಕೆಆರ್ 18.3 ಓವರ್ನಲ್ಲೇ 4 ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ 6 ವಿಕೆಟ್ಗಳ ಜಯ ಕಂಡಿತು. ಉಮೇಶ್ ಯಾದವ್ ಪಂದ್ಯಶ್ರೇಷ್ಠ ಬಾಜಿಕೊಂಡರು.
PBKS vs RCB Playing XI IPL 2022: ಆರ್ಸಿಬಿ ತಂಡದ ಇಬ್ಬರು ಅಲಭ್ಯ: ಹೇಗಿರಲಿದೆ ಪ್ಲೇಯಿಂಗ್ 11