ಐಸಿಸಿ ಟೂರ್ನಿಗಳಲ್ಲಿ (ICC Tourny) ಟೀಂ ಇಂಡಿಯಾ ಪದೇಪದೇ ಎಡವುತ್ತಿದೆ. ಸೆಮಿ ಫೈನಲ್, ಫೈನಲ್ಗಳಲ್ಲಿ ಪಂದ್ಯ ಸೋತು ಕಪ್ ಇಲ್ಲದೆ ಮನೆಗೆ ಬರುವುತ್ತಿರುವುದು ಸಾಕಷ್ಟು ಬಾರಿ ಮರುಕಳಿಸಿದೆ. ಹಲವು ಘಟಾನುಘಟಿ ಆಟಗಾರರು ಇದ್ದ ಹೊರತಾಗಿಯೂ ಈ ರೀತಿಯ ತಪ್ಪುಗಳು ಆಗುತ್ತಲೇ ಇವೆ. ಇದನ್ನು ಬಿಸಿಸಿಐ (BCCI) ಗಂಭೀರವಾಗಿ ಪರಿಗಣಿಸಿದೆ. ತಂಡವನ್ನು ಸುಧಾರಿಸಲು ಟೀಂ ಇಂಡಿಯಾದ ಮಾಜಿ ಹಾಗೂ ಯಶಸ್ವಿ ಕ್ಯಾಪ್ಟನ್ ಎಂ.ಎಸ್. ಧೋನಿ ಅವರನ್ನು ಕರೆತಂದು ಪ್ರಮುಖ ಹುದ್ದೆ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.
ಮೂರು ಫಾರ್ಮ್ಯಾಟ್ಗೆ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿದ್ದಾರೆ. ಇದನ್ನು ನಿಭಾಯಿಸಲು ಅವರಿಗೆ ಹೆಚ್ಚು ಹೊರೆ ಆಗುತ್ತಿದೆ. ಹೀಗಾಗಿ, ಟಿ20ಗೆ ಪ್ರತ್ಯೇಕ ಕೋಚ್ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಟಿ20 ಫಾರ್ಮ್ಯಾಟ್ನಲ್ಲಿ ತಂಡದಲ್ಲಿ ಮಾಡಬೇಕಿರುವ ಬದಲಾವಣೆ ಬಗ್ಗೆ ಧೋನಿಯಿಂದ ಸಲಹೆ ಪಡೆಯಲು ಬಿಸಿಸಿಐ ಚಿಂತನೆ ನಡೆಸಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.
ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತಿತ್ತು. ಮುಂದಿನ ದಿನಗಳಲ್ಲಿ ಈ ತಪ್ಪು ಆಗದಂತೆ ನೋಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ, ಯಶಸ್ವಿ ಕ್ಯಾಪ್ಟನ್ ಧೋನಿಗೆ ಟಿ20 ಕ್ರಿಕೆಟ್ನ ನಿರ್ದೇಶಕ ಹುದ್ದೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.
2021ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಧೋನಿ ಅವರು ಟೀಂ ಇಂಡಿಯಾದಲ್ಲಿ ಸಲಹೆಗಾರರಾಗಿದ್ದರು. ಆದರೆ, ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ಆಯ್ಕೆ ಕೊನೆಯ ಹಂತದಲ್ಲಿ ಆಗಿತ್ತು. ಹೆಚ್ಚು ಸಮಯ ಸಿಗದ ಕಾರಣ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಿರಲಿಲ್ಲ ಎಂಬುದು ಬಿಸಿಸಿಐ ಅಭಿಪ್ರಾಯ.
ಇದನ್ನೂ ಓದಿ: ನಿರ್ಮಾಣದ ಜತೆಗೆ ನಟನೆ ಆರಂಭಿಸಿದ ಧೋನಿ? ಹಿಟ್ ನಿರ್ದೇಶಕನ ಚಿತ್ರದಲ್ಲಿ ಕೂಲ್ ಕ್ಯಾಪ್ಟನ್
ಧೋನಿ ಅವರು ಸದ್ಯ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂದಿನ ವರ್ಷ ಅವರು ಐಪಿಎಲ್ನಿಂದ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. ಆ ಬಳಿಕ ಅವರು ಬಿಸಿಸಿಐ ನೀಡುವ ಪ್ರಮುಖ ಹುದ್ದೆ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ನಡೆವ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಮೀಟಿಂಗ್ನಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
Published On - 8:06 pm, Tue, 15 November 22