ಎಂಎಸ್ ಧೋನಿ (MS Dhoni)… ಕ್ರಿಕೆಟ್ ಜಗತ್ತಿನಲ್ಲಿ ಈ ಹೆಸರನ್ನು ಕೇಳದವರೆ ಇಲ್ಲ. ಕಷ್ಟದ ಸಮಯದಲ್ಲಿ ತಾಳ್ಮೆ ಮತ್ತು ಸಂಯಮದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವ ನಾಯಕ ಮತ್ತು ತನ್ನದೇ ಆದ ಯೋಜನೆಗಳಿಂದ ತಂಡವನ್ನು ಚಾಂಪಿಯನ್ ಮಾಡಿದ ನಾಯಕ. ಅಷ್ಟಕ್ಕೂ ಧೋನಿ ಈಗ ನಾಯಕತ್ವವನ್ನು ತೊರೆದಿದ್ದಾರೆ. ಐಪಿಎಲ್ (IPL 2022) ನ 15 ನೇ ಸೀಸನ್ ಪ್ರಾರಂಭವಾಗುವ ಮೊದಲು, ಧೋನಿ (MS Dhoni Quits CSK Captaincy) ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಧೋನಿ ಈಗ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕೆ ಪ್ರವೇಶಿಸಲಿದ್ದಾರೆ. ಧೋನಿ ಚೆನ್ನೈ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದಾರೆ. ಧೋನಿ ನಾಯಕತ್ವ ತೊರೆಯುವುದರೊಂದಿಗೆ ಐಪಿಎಲ್ ಯುಗ ಅಂತ್ಯಗೊಂಡಿದೆ. ತಮ್ಮ ನಾಯಕತ್ವದಲ್ಲಿ ಚೆನ್ನೈ ತಂಡವನ್ನು ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಮಾಡಿ, ಚೆನ್ನೈಗೆ ಎರಡು ಬಾರಿ ಚಾಂಪಿಯನ್ಸ್ ಲೀಗ್ ಗೆದ್ದುಕೊಟ್ಟ ಧೋನಿ ಈಗ ಮೈದಾನದಲ್ಲಿ ಸಾಮಾನ್ಯ ಆಟಗಾರನಾಗಲಿದ್ದಾರೆ.
ಧೋನಿ ತಮ್ಮ ನಾಯಕತ್ವದಲ್ಲಿ ಸಾಕಷ್ಟು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಆದರೆ ಅವರು ತಮ್ಮ ಐಪಿಎಲ್ ನಾಯಕತ್ವದ ಕಳೆದ 3 ವರ್ಷಗಳಲ್ಲಿ, ಪ್ರಮುಖ 3 ವಿವಾದಗಳಲ್ಲಿ ಕಾಣಿಸಿಕೊಂಡಿದ್ದರು ಎಂಬುದು ಎಲ್ಲರನ್ನು ಅಚ್ಚರಿಗೊಳಿಸಿತ್ತು. ಅಂಪೈರ್‌ಗಳೊಂದಿಗೆ ವಾದ ಮಾಡಿದ್ದಾಗಲಿ ಅಥವಾ ಆಟಗಾರರ ಮೇಲೆ ಕೋಪ ಹೊರಹಾಕಿದ್ದಾಗಲಿ, ಧೋನಿ ಯಾರೂ ನಿರೀಕ್ಷಿಸದ 3 ವಿವಾದಗಳಿಗೆ ಕೊರಳೊಡ್ಡಿದ್ದರು. ಕೂಲ್ ಕ್ಯಾಪ್ಟನ್ ಧೋನಿ ಮೂರು ಸಂದರ್ಭಗಳಲ್ಲಿ ತಮ್ಮ ತಾಳ್ಮೆಯನ್ನ ಕಳೆದುಕೊಂಡ ಘಟನೆಯ ಬಗ್ಗೆ ಇಲ್ಲಿದೆ ವಿವರ.
ಧೋನಿಯ ಮೊದಲ ವಿವಾದ
ಐಪಿಎಲ್ 2019 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ಧೋನಿ ಡಗೌಟ್‌ನಿಂದ ಪಂದ್ಯ ನಡೆಯುತ್ತಿರುವಾಗಲೆ ಮೈದಾನಕ್ಕೆ ಬಂದು ಅಂಪೈರ್‌ಗಳೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದರು. ಧೋನಿಯ ಈ ವರ್ತನೆಗೆ ಕಾರಣವೆಂದರೆ, ಅಂದಿನ ಪಂದ್ಯದ ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 18 ರನ್‌ಗಳ ಅಗತ್ಯವಿತ್ತು. ಮೊದಲ ಮೂರು ಎಸೆತಗಳಲ್ಲಿ 10 ರನ್ ನೀಡಿದ್ದ ಸ್ಟೋಕ್ಸ್ ನಾಲ್ಕನೇ ಎಸೆತದಲ್ಲಿ ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದರು. ಬೆನ್ ಸ್ಟೋಕ್ಸ್ ಅವರ ನಾಲ್ಕನೇ ಎಸೆತವು ಹೆಚ್ಚಿನ ಫುಲ್ ಟಾಸ್ ಆಗಿತ್ತು. ಅದರಲ್ಲಿ ಮಿಚೆಲ್ ಸ್ಯಾಂಟ್ನರ್ ಎರಡು ರನ್ ಗಳಿಸಿದರು. ಇದಾದ ನಂತರ ಜಡೇಜಾ ಮತ್ತು ಸ್ಯಾಂಟ್ನರ್ ಅಂಪೈರ್‌ನಿಂದ ನೋ ಬಾಲ್‌ಗೆ ಬೇಡಿಕೆಯಿಟ್ಟರು ಆದರೆ ಅಂಪೈರ್ ಅದನ್ನು ಅಲ್ಲಗಳೆದರು. ಮೈದಾನದಲ್ಲಿದ್ದ ಜಡೇಜಾ ಅಂಪೈರ್ ಜೊತೆ ವಾದ ಮುಂದುವರೆಸಿದರು. ಇದನ್ನು ಡಗೌಟ್‌ನಿಂದ ನೋಡುತ್ತಿದ್ದ ಧೋನಿ ಕೋಪಗೊಂಡು ಮೈದಾನಕ್ಕೆ ಪ್ರವೇಶಿಸಿದರು. ನಂತರ ಅಂಪೈರ್‌ಗಳೊಂದಿಗೆ ಅದು ನೋಬಾಲ್ ಎಮದು ವಾದಕ್ಕಿಳಿದರು. ಆದರೆ ಅಂಪೈರ್ ಧೋನಿ ವಾದಕ್ಕೆ ಸೊಪ್ಪು ಹಾಕದೆ ತಮ್ಮ ನಿರ್ಧಾರವನ್ನು ಎತ್ತಿಹಿಡಿದರು. ಆದರೂ ಅಂತಿಮವಾಗಿ ಜಯ ಚೆನ್ನೈ ಪಾಲಾಯಿತು.
ಧೋನಿಯ ಎರಡನೇ ವಿವಾದ
ಧೋನಿ ಅಪ್ಪಿತಪ್ಪಿಯೂ ಆಟದ ವೇಳೆ ಆಟಗಾರರ ಮೇಲೆ ಕೆಟ್ಟ ಭಾಷೆ ಬಳಸುವವರಲ್ಲ. ಆದರೆ 2020 ರ ಐಪಿಎಲ್ನಲ್ಲಿ ಧೋನಿ ಆಡಿದ ಮಾತುಗಳನ್ನು ಬಹುಶಃ ಯಾರೂ ನಿರೀಕ್ಷಿಸಿರಲಿಲ್ಲ. ಐಪಿಎಲ್ 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 7 ನೇ ಪಂದ್ಯದಲ್ಲಿ ಸೋಲು ಖಂಡಿತ್ತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಧೋನಿ, ತಮ್ಮ ತಂಡದ ಯುವ ಆಟಗಾರರ ವಿರುದ್ಧ ಹೇಳಿಕೆ ನೀಡಿದರು. ಮೊದಲ 10 ಪಂದ್ಯಗಳಲ್ಲಿ ನಾನು ಏಕೆ ಯುವ ಆಟಗಾರರಿಗೆ ಅವಕಾಶ ನೀಡಲಿಲ್ಲವೆಂದರೆ, ಅವರಲ್ಲಿ ಪಂದ್ಯ ಗೆಲ್ಲುವ ಕಿಚ್ಚನ್ನ ನಾನು ನೋಡಲಿಲ್ಲ ಎಂದು ಧೋನಿ ಹೇಳಿ ಬಿಟ್ಟಿದ್ದರು. ಇದರಿಂದ ತಂಡದ ಆಟಗಾರರು ಕೊಂಚ ಹೊತ್ತು ದಿಗ್ಭ್ರಮೆಗೊಂಡಿದ್ದರು.
ಧೋನಿಯ ಮೂರನೇ ವಿವಾದ
ಕಳೆದ ಸೀಸನ್ನಲ್ಲಿಯೇ ಧೋನಿಯ ಮೂರನೇ ವಿವಾದ ಕಾಣಿಸಿಕೊಂಡಿತ್ತು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ಶಾರ್ದೂಲ್ ಠಾಕೂರ್ ಆಫ್ ಸ್ಟಂಪ್‌ನ ಹೊರಗೆ ಬೌಲ್ ಮಾಡಿದ್ದರು. ಇದನ್ನು ಕಂಡ ಅಂಪೈರ್ ಪಾಲ್ ರೈಫಲ್ ವೈಡ್ ನೀಡಲು ಮುಂದಾದರು. ಆದರೆ ಅಷ್ಟರಲ್ಲಾಗಲೇ ಧೋನಿ ಇದ್ದಕ್ಕಿದ್ದಂತೆ ವಿಕೆಟ್ ಹಿಂದಿನಿಂದ ಕೂಗಿದರು. ಇದನ್ನು ಕಂಡ ಅಂಪೈರ್ ರೈಫಲ್ ಅರ್ಧಕ್ಕೆ ಎತ್ತಿದ್ದ ಕೈಯನ್ನು ಕೆಳಗಿಸಿದರು. ಹಾಗೆಯೇ ಅಂಪೈರ್ ಆ ಚೆಂಡನ್ನು ವೈಡ್ ಎಂದು ಘೋಷಿಸಲಿಲ್ಲ. ಇದು ಕೂಡ ಕೆಲವು ದಿನಗಳ ಕಾಲ ಕ್ರಿಕೆಟ್ ಪರಿಣಿತರ ಕೆಂಗಣಿಗೆ ಗುರಿಯಾಗಿತ್ತು.
ಇದನ್ನೂ ಓದಿ:MS Dhoni Quits CSK Captaincy: 6 ಬಾರಿ ಚಾಂಪಿಯನ್! ಏಕಾಏಕಿ ನಾಯಕತ್ವ ತೊರೆದ ಧೋನಿ ಮಾಡಿದ ದಾಖಲೆಗಳಿವು