
ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಟಿ20 ತ್ರಿಕೋನ ಸರಣಿಯಲ್ಲಿ ಟರ್ಕಿ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮುಹಮ್ಮದ್ ಫಹಾದ್ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ. ಅದು ಕೂಡ ಕೇವಲ 29 ಎಸೆತಗಳಲ್ಲಿ ಎಂಬುದೇ ಅಚ್ಚರಿ. ಸೋಫಿಯಾದ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಬಲ್ಗೇರಿಯಾ ಹಾಗೂ ಟರ್ಕಿ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಟರ್ಕಿ ತಂಡವು ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ ಮೊದಲ ವಿಕೆಟ್ಗೆ ಆರಂಭಿಕರಾದ ಮುಹಮ್ಮದ್ ಫಹಾದ್ ಹಾಗೂ ಇಲ್ಯಾಸ್ ಅತಾವುಲ್ಲ 154 ರನ್ಗಳ ಜೊತೆಯಾಟವಾಡಿದರು. ಅದು ಕೂಡ ಕೇವಲ 9.2 ಓವರ್ಗಳಲ್ಲಿ.
ಇದರ ನಡುವೆ ಮುಹಮ್ಮದ್ ಫಹಾದ್ ಕೇವಲ 29 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಸೆಂಚುರಿ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡರು. ಇದಾದ ಬಳಿಕ ಕೂಡ ಆರ್ಭಟ ಮುಂದುವರೆಸಿದ ಫಹಾದ್ 34 ಎಸೆತಗಳಲ್ಲಿ 12 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 120 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು.
ಫಹಾದ್ ಹಾಗೂ ಇಲ್ಯಾಸ್ ಅತಾವುಲ್ಲಾ (44) ವಿಕೆಟ್ ಪತನಗೊಳ್ಳುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ಟರ್ಕಿ ತಂಡವು 19.3 ಓವರ್ಗಳಲ್ಲಿ 237 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಬಲ್ಗೇರಿಯಾ ತಂಡಕ್ಕೆ 238 ರನ್ಗಳ ಕಠಿಣ ಗುರಿ ನೀಡಿದೆ.
238 ರನ್ಗಳ ಬೃಹತ್ ಮೊತ್ತ ಗುರಿ ಪಡೆದ ಬಲ್ಗೇರಿಯಾ ತಂಡವು ವಿಸ್ಫೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ ಆರಂಭಿಕನಾಗಿ ಕಣಕ್ಕಿಳಿದ ನಾಯಕ ಕ್ರಿಸ್ ಹಿಸ್ಟೊ ಬ್ಯಾಟ್ನಿಂದ 29 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 78 ರನ್ಗಳು ಮೂಡಿಬಂತು. ಆದರೆ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ. ಪರಿಣಾಮ 16.5 ಓವರ್ಗಳಲ್ಲಿ 178 ರನ್ಗಳಿಸಿ ಬಲ್ಗೇರಿಯಾ ತಂಡವು ಆಲೌಟ್ ಆಗಿದೆ. ಈ ಮೂಲಕ ಟರ್ಕಿ ತಂಡ 59 ರನ್ಗಳ ಜಯ ಸಾಧಿಸಿತು.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 30 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿರುವುದು ಕೇವಲ ಇಬ್ಬರು ಬ್ಯಾಟರ್ಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಈಸ್ಟೋನಿಯಾ ತಂಡದ ಸಾಹಿಲ್ ಚೌಹಾಣ್. 2024 ರಲ್ಲಿ ನಡೆದ ಸೈಪ್ರಸ್ ವಿರುದ್ಧದ ಟಿ20 ಪಂದ್ಯದಲ್ಲಿ ಸಾಹಿಲ್ ಕೇವಲ 27 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
ಇದನ್ನೂ ಓದಿ: ಒಂದು ಸೆಂಚುರಿಯೊಂದಿಗೆ 6 ಭರ್ಜರಿ ದಾಖಲೆ ಬರೆದ ಕೆಎಲ್ ರಾಹುಲ್
ಇದೀಗ ಮುಹಮ್ಮದ್ ಫಹಾದ್ ಕೂಡ 30 ಕ್ಕಿಂತ ಕಡಿಮೆ ಎಸೆತಗಳಲ್ಲಿ ಸೆಂಚುರಿ ಪೂರೈಸಿದ್ದಾರೆ. ಬಲ್ಗೇರಿಯಾ ವಿರುದ್ಧ ಕೇವಲ 29 ಎಸೆತಗಳಲ್ಲಿ ಮೂರಂಕಿ ಮೊತ್ತ ಕಲೆಹಾಕುವ ಮೂಲಕ ಫಹಾದ್ ಈ ಸಾಧನೆ ಮಾಡಿದ್ದಾರೆ.