IPL 2025: ಇಂಗ್ಲೆಂಡ್​ಗೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟವ ಈಗ ಮುಂಬೈ ತಂಡಕ್ಕೆ ಕೋಚ್

|

Updated on: Dec 14, 2024 | 5:38 PM

Mumbai Indians Appoints New Fielding Coach: 2025ರ ಐಪಿಎಲ್ ಟೂರ್ನಿ ಮಾರ್ಚ್‌ನಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಫೀಲ್ಡಿಂಗ್ ಕೋಚ್ ಆಗಿ ಇಂಗ್ಲೆಂಡ್‌ನ ಅನುಭವಿ ಆಟಗಾರ ಕಾರ್ಲ್ ಹಾಪ್ಕಿನ್ಸನ್ ಅವರನ್ನು ನೇಮಿಸಿಕೊಂಡಿದೆ. ಹಾಪ್ಕಿನ್ಸನ್ ಅವರು ಇಂಗ್ಲೆಂಡ್ ತಂಡದ ಏಕದಿನ ಮತ್ತು ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

IPL 2025: ಇಂಗ್ಲೆಂಡ್​ಗೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟವ ಈಗ ಮುಂಬೈ ತಂಡಕ್ಕೆ ಕೋಚ್
ಮುಂಬೈ ಇಂಡಿಯನ್ಸ್
Follow us on

2025 ರ ಐಪಿಎಲ್ ಮಾರ್ಚ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಇತ್ತೀಚೆಗಷ್ಟೇ ಈ ಸೀಸನ್​ನ ಹರಾಜು ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಿದ್ದವು. ಇದೀಗ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳ ಕೋಚಿಂಗ್ ಸಿಬ್ಬಂದಿಗಳಲ್ಲಿ ಬದಲಾವಣೆಗೆ ಮುಂದಾಗಿವೆ. ಅದರಂತೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ಕೂಡ ತನ್ನ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ಅನ್ನು ನೇಮಿಸಿದೆ. ಮುಂಬೈ ಇಂಡಿಯನ್ಸ್ ತನ್ನ ಫೀಲ್ಡಿಂಗ್ ಕೋಚ್ ಆಗಿ ಇಂಗ್ಲೆಂಡ್‌ನ ಅನುಭವಿ ಆಟಗಾರ ಕಾರ್ಲ್ ಹಾಪ್ಕಿನ್ಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಕಾರ್ಲ್ ಹಾಪ್ಕಿನ್ಸನ್ ಅವರ ಕೋಚಿಂಗ್ ಅಡಿಯಲ್ಲಿ ಇಂಗ್ಲೆಂಡ್‌ ತಂಡ ಏಕದಿನ ಮತ್ತು ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದೆ.

ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ

ಅಚ್ಚರಿಯ ಸಂಗತಿಯೆಂದರೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿರುವ 43 ವರ್ಷದ ಹಾಪ್ಕಿನ್ಸನ್ ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಆದರೆ 64 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು 2705 ರನ್ ಗಳಿಸಿದ್ದಾರೆ. ಇದರ ಜೊತೆಗೆ 92 ಲಿಸ್ಟ್ ಎ ಪಂದ್ಯಗಳಲ್ಲಿ 1400 ರನ್ ಕಲೆಹಾಕಿದ್ದಾರೆ ಆದರೆ ಕೋಚ್ ಆಗಿ ಸಾಕಷ್ಟು ಯಶಸ್ಸು ಸಾಧಿಸಿರುವ ಕಾರ್ಲ್, ಫೀಲ್ಡಿಂಗ್ ಕೋಚ್ ಆಗಿ 2019ರ ಏಕದಿನ ವಿಶ್ವಕಪ್ ಮತ್ತು 2022ರ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮುಂಬೈ ತಂಡಕ್ಕೆ ಹಾರ್ದಿಕ್ ನಾಯಕ

ಮುಂಬರುವ ಐಪಿಎಲ್ ಮಾರ್ಚ್ 14 ರಿಂದ ಆರಂಭವಾಗಲಿದ್ದು, ಈ ಬಾರಿಯೂ ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ 2013, 2015, 2017, 2019 ಮತ್ತು 2022ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ 5 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. ಆದರೆ ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಹೀಗಾಗಿ 2025 ರಲ್ಲಿ ತನ್ನ ಹಳೆಯ ಲಯಕ್ಕೆ ಮರಳಲು ಅಂಬಾನಿ ಪಡೆ ಯತ್ನಿಸಲಿದೆ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಜೋಫ್ರಾ ಆರ್ಚರ್, ನಮನ್ ಧೀರ್, ರಾಬಿನ್ ಮಿನ್ನೆಸ್, ಕರ್ಣ್ ಶರ್ಮಾ, ರಯಾನ್ ರಿಕಲ್ಟನ್, ದೀಪಕ್ ಚಹಾರ್, ಅಲ್ಲಾ ಗಜನ್ಫರ್, ವಿಲ್ ಜಾಕ್ಸ್, ಕೆಎಲ್ ಶ್ರೀಜಿತ್, ರೀಸ್ ಟೋಪ್ಲಿ, ಮಿಚೆಲ್ ಸ್ಯಾಂಟ್ನರ್, ರಾಜ್ ಅಂಗದ್ ಬಾವಾ, ವಿ. ಸತ್ಯನಾರಾಯಣ್, ಬೆವನ್ ಜೇಕಬ್ಸ್, ವಿಘ್ನೇಶ್ ಪುತ್ತೂರು, ಅರ್ಜುನ್ ತೆಂಡೂಲ್ಕರ್, ಲಿಜ್ದಾಡ್ ವಿಲಿಯಮ್ಸ್, ಅಶ್ವನಿ ಕುಮಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ