AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈ ಇಂಡಿಯನ್ಸ್‌ಗೆ ಹಳೆಯ ಆಟಗಾರರೇ ಹೊಸ ಕೋಚ್‌ಗಳು; ಯಾರಿಗೆ ಯಾವ ಜವಾಬ್ದಾರಿ?

ಐಪಿಎಲ್‌ನಲ್ಲಿ ಯಶಸ್ವಿ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಕೋಚಿಂಗ್ ಸಿಬ್ಬಂದಿಯನ್ನು ಬದಲಾಯಿಸಿವೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಕೀರನ್ ಪೊಲಾರ್ಡ್ ಮುಖ್ಯ ಕೋಚ್ ಆಗಿದ್ದು, ರಾಬಿನ್ ಉತ್ತಪ್ಪ ಬ್ಯಾಟಿಂಗ್ ಕೋಚ್ ಆಗಿ 18 ವರ್ಷಗಳ ನಂತರ ಮರಳಿದ್ದಾರೆ. ಮಿಚೆಲ್ ಮೆಕ್‌ಕ್ಲೆನಾಘನ್ ಮತ್ತು ಧವಳ್ ಕುಲಕರ್ಣಿ ಕೂಡ ಬೌಲಿಂಗ್ ಕೋಚ್‌ಗಳಾಗಿ ಸೇರಿದ್ದಾರೆ.

ಮುಂಬೈ ಇಂಡಿಯನ್ಸ್‌ಗೆ ಹಳೆಯ ಆಟಗಾರರೇ ಹೊಸ ಕೋಚ್‌ಗಳು; ಯಾರಿಗೆ ಯಾವ ಜವಾಬ್ದಾರಿ?
Mumbai IndiansImage Credit source: Mumbai Indians x
ಪೃಥ್ವಿಶಂಕರ
|

Updated on:Oct 30, 2026 | 12:04 PM

Share

ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳೆನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಈಗ ಹೊಸ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ಸಿದ್ಧವಾಗುತ್ತಿವೆ. ಕಳೆದ ಕೆಲವು ಆವೃತ್ತಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿರುವ ಈ ಎರಡೂ ತಂಡಗಳು ತಮ್ಮ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿವೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹೊಸ ಮುಖ್ಯ ಕೋಚ್ ಹಾಗೂ ಸಹಾಯಕ ಸಿಬ್ಬಂದಿಯನ್ನು ಘೋಷಿಸಿದೆ. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಕೂಡ ತನ್ನ ಕೋಚಿಂಗ್ ತಂಡವನ್ನು ಹೊಸದಾಗಿ ರೂಪಿಸಿದೆ.

ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ್ದ ತಂಡ, ಇದೀಗ ಭಾರತದ ಮಾಜಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅವರಿಗೆ ಬ್ಯಾಟಿಂಗ್ ಕೋಚ್ ಜವಾಬ್ದಾರಿ ನೀಡಿದೆ. ಇದರ ಜೊತೆಗೆ ಇಬ್ಬರು ಬೌಲಿಂಗ್ ಕೋಚ್‌ಗಳು ಹಾಗೂ ಒಬ್ಬ ಫೀಲ್ಡಿಂಗ್ ಕೋಚ್ ಅವರನ್ನೂ ನೇಮಕ ಮಾಡಿದೆ.

2020ರಲ್ಲಿ ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದ ಮುಂಬೈ ಇಂಡಿಯನ್ಸ್, ನಾಯಕ ಹಾರ್ದಿಕ್ ಪಾಂಡ್ಯ ಅವರ ವಿಚಾರದಲ್ಲಿ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಕೋಚಿಂಗ್ ವಿಭಾಗದಲ್ಲಿ ಮಾತ್ರ ದೊಡ್ಡ ಮಟ್ಟದ ಬದಲಾವಣೆ ಮಾಡಿದೆ. ಮುಖ್ಯ ಕೋಚ್ ಆಗಿದ್ದ ಮಹೇಲ ಜಯವರ್ಧನೆ ಅವರ ಸ್ಥಾನಕ್ಕೆ ತಂಡದ ಮಾಜಿ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಅವರನ್ನು ನೇಮಿಸಲಾಗಿದೆ. ಇದರ ಬೆನ್ನಲ್ಲೇ ಲಸಿತ್ ಮಾಲಿಂಗ ಮತ್ತು ಪರಾಸ್ ಮಹಾಂಬ್ರೆ ಸೇರಿದಂತೆ ಹಲವು ಅನುಭವಿ ಕೋಚಿಂಗ್ ಸಿಬ್ಬಂದಿಗೆ ತಂಡದಿಂದ ಗೇಟ್‌ಪಾಸ್ ನೀಡಲಾಗಿದೆ. ಇದೀಗ ಹೊಸ ಕೋಚಿಂಗ್ ತಂಡದ ವಿವರಗಳನ್ನು ಮುಂಬೈ ಇಂಡಿಯನ್ಸ್ ಪ್ರಕಟಿಸಿದೆ.

ಮುಂಬೈ ತಂಡಕ್ಕೆ ಮರಳಿದ ಉತ್ತಪ್ಪ

ಈ ಹೊಸ ನೇಮಕಾತಿಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ರಾಬಿನ್ ಉತ್ತಪ್ಪ ಅವರ ಆಯ್ಕೆ. 2008ರಲ್ಲಿ ಮುಂಬೈ ಇಂಡಿಯನ್ಸ್ ಪರವೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಉತ್ತಪ್ಪ, ಇದೀಗ ಬರೋಬ್ಬರಿ 18 ವರ್ಷಗಳ ಬಳಿಕ ಮತ್ತೆ ಅದೇ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ಪರ ತಮ್ಮ ಮೊದಲ ಆವೃತ್ತಿಯಲ್ಲಿ 14 ಪಂದ್ಯಗಳನ್ನಾಡಿದ್ದ ಉತ್ತಪ್ಪ 320 ರನ್ ಗಳಿಸಿದ್ದರು. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಆಡಿದ್ದರು.

ಈ ಅವಧಿಯಲ್ಲಿ 2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪರ ಐಪಿಎಲ್ ಚಾಂಪಿಯನ್ ಆಗಿದ್ದರು. ವಿಶೇಷವೆಂದರೆ, 2014ರ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿ ಆರೆಂಜ್ ಕ್ಯಾಪ್ ಕೂಡ ತಮ್ಮದಾಗಿಸಿಕೊಂಡಿದ್ದರು. ಇದೀಗ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವ ಹೊಣೆ ಉತ್ತಪ್ಪ ಹೆಗಲೇರಿದೆ.

ಐಪಿಎಲ್ 2027: ಮುಂಬೈ ಇಂಡಿಯನ್ಸ್ ತಂಡ ತೊರೆದ ದಿಗ್ಗಜ ಕ್ರಿಕೆಟಿಗ

ಬೌಲಿಂಗ್ ಕೋಚ್‌ಗಳ ನೇಮಕ

ರಾಬಿನ್ ಉತ್ತಪ್ಪ ಮಾತ್ರವಲ್ಲದೆ, ಮುಂಬೈ ಇಂಡಿಯನ್ಸ್ ಪರ ಈ ಹಿಂದೆ ಆಡಿದ್ದ ಇನ್ನಿಬ್ಬರು ಆಟಗಾರರು ಕೂಡ ಇದೀಗ ಕೋಚಿಂಗ್ ಸಿಬ್ಬಂದಿಯಾಗಿ ತಂಡಕ್ಕೆ ಮರಳಿದ್ದಾರೆ. ಇಬ್ಬರಿಗೂ ಬೌಲಿಂಗ್ ವಿಭಾಗದ ಜವಾಬ್ದಾರಿ ನೀಡಲಾಗಿದೆ. ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಮಿಚೆಲ್ ಮೆಕ್‌ಕ್ಲೆನಾಘನ್ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. 2015ರಿಂದ 2019ರವರೆಗೆ ಮುಂಬೈ ತಂಡದ ಪರ ಆಡಿದ್ದ ಅವರು, ಒಟ್ಟು 56 ಪಂದ್ಯಗಳಲ್ಲಿ 71 ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಅವಧಿಯಲ್ಲಿ ಮುಂಬೈ ಇಂಡಿಯನ್ಸ್ ಮೂರು ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು ಭಾರತದ ಅನುಭವಿ ವೇಗಿ ಧವಳ್ ಕುಲಕರ್ಣಿ ಕೂಡ ಮುಂಬೈ ಇಂಡಿಯನ್ಸ್ ಕೋಚಿಂಗ್ ತಂಡವನ್ನು ಸೇರಿಕೊಂಡಿದ್ದಾರೆ. ಮುಂಬೈ ಮೂಲದವರೇ ಆಗಿರುವ ಧವಳ್, 2008ರಿಂದ 2013ರವರೆಗೆ ಹಾಗೂ 2020ರಿಂದ 2021ರವರೆಗೆ ತಂಡದ ಪರ ಆಡಿದ್ದರು. ಈ ಅವಧಿಯಲ್ಲಿ 36 ವಿಕೆಟ್‌ಗಳನ್ನು ಕಬಳಿಸಿದ್ದ ಅವರು, ಎರಡು ಬಾರಿ ಪ್ರಶಸ್ತಿ ಗೆದ್ದ ಮುಂಬೈ ತಂಡದ ಭಾಗವಾಗಿದ್ದರು. ಇದೀಗ ಧವಳ್ ಕುಲಕರ್ಣಿ ಅವರಿಗೆ ಡೆವಲಪ್‌ಮೆಂಟ್ ಬೌಲಿಂಗ್ ಕೋಚ್ ಜವಾಬ್ದಾರಿ ನೀಡಲಾಗಿದೆ. ಒಟ್ಟಿನಲ್ಲಿ ಹೊಸ ಕೋಚಿಂಗ್ ತಂಡದೊಂದಿಗೆ ಮುಂಬೈ ಇಂಡಿಯನ್ಸ್ ಮುಂದಿನ ಐಪಿಎಲ್‌ನಲ್ಲಿ ಮತ್ತೆ ತನ್ನ ಹಳೆಯ ವೈಭವವನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Fri, 30 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More