Irani Cup 2024: ಸರ್ಫರಾಝ್ ದ್ವಿಶತಕಕ್ಕೆ, ಅಭಿಮನ್ಯು ಶತಕದ ಪ್ರತ್ಯುತ್ತರ

|

Updated on: Oct 03, 2024 | 5:05 PM

Irani Cup 2024: ಇರಾನಿ ಕಪ್ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತದೆ. ಪ್ರತಿ ಸೀಸನ್​ನ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಶೇಷ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಅದರಂತೆ ಇದೀಗ ಹಾಲಿ ರಣಜಿ ಚಾಂಪಿಯನ್ ಮುಂಬೈ ಹಾಗೂ ಶೇಷ ಭಾರತ ತಂಡ ಇರಾನಿ ಕಪ್ ಪಂದ್ಯವಾಡುತ್ತಿದೆ.

Irani Cup 2024: ಸರ್ಫರಾಝ್ ದ್ವಿಶತಕಕ್ಕೆ, ಅಭಿಮನ್ಯು ಶತಕದ ಪ್ರತ್ಯುತ್ತರ
Abhimanyu - Sarfaraz Khan
Follow us on

ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇರಾನಿ ಕಪ್​ ಟೂರ್ನಿಯಲ್ಲಿ ಭರ್ಜರಿ ಪೈಪೋಟಿ ಮುಂದುವರೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಮುಂಬೈ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಕೇವಲ 37 ರನ್​ಗಳಿಸುವಷ್ಟರಲ್ಲಿ ಪೃಥ್ವಿ ಶಾ (4), ಆಯುಷ್ (19) ಹಾಗೂ ಹಾರ್ದಿಕ್ ತಮೋರೆ (0) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಅಜಿಂಕ್ಯ ರಹಾನೆ 97 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ 57 ರನ್ ಸಿಡಿಸಿದರು. ಈ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಇನ್ನು ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಯುವ ದಾಂಡಿಗ ಸರ್ಫರಾಝ್ ಖಾನ್ 253 ಎಸೆತಗಳಲ್ಲಿ 23 ಫೋರ್ ಹಾಗೂ 3 ಸಿಕ್ಸ್​ಗಳೊಂದಿಗೆ ದ್ವಿಶತಕ ಪೂರೈಸಿದರು. ಈ ಮೂಲಕ ಇರಾನಿ ಕಪ್​ನಲ್ಲಿ ಮುಂಬೈ ಪರ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದರು.

ಈ ಮೂಲಕ ಮೂರನೇ ದಿನದಾಟದಲ್ಲೂ ಬ್ಯಾಟಿಂಗ್ ಮುಂದುವರೆಸಿದ್ದ ಸರ್ಫರಾಝ್ ಖಾನ್ ಒಂದೆಡೆ ಅಜೇಯರಾಗಿ ಉಳಿದರೆ, ಮತ್ತೊಂದೆಡೆ ವಿಕೆಟ್​ ಪತನಗೊಂಡಿತು. ಪರಿಣಾಮ ಮುಂಬೈ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 537 ರನ್​ಗಳಿಸಿ ಆಲೌಟ್ ಆಗಿದೆ.

ಮುಂಬೈ ಪರ 286 ಎಸೆತಗಳನ್ನು ಎದುರಿಸಿದ ಸರ್ಫರಾಝ್ ಖಾನ್ 4 ಸಿಕ್ಸ್ ಹಾಗೂ 25 ಫೋರ್​ಗಳೊಂದಿಗೆ 222 ರನ್​ ಬಾರಿಸಿ ಅಜೇಯರಾಗಿ ಉಳಿದರು. ಶೇಷ ಭಾರತ ತಂಡದ ಪರ ಮುಖೇಶ್ ಕುಮಾರ್ 5 ವಿಕೆಟ್ ಕಬಳಿಸಿದರೆ, ಯಶ್ ದಯಾಳ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ 2 ವಿಕೆಟ್ ಪಡೆದು ಮಿಂಚಿದರು.

537 ರನ್​ಗಳಿಗೆ ಪ್ರತ್ಯುತ್ತರವಾಗಿ ಇನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡವು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 9 ರನ್​ಗಳಿಸಿ ಔಟಾದರು. ಇನ್ನು ಸಾಯಿ ಸುದರ್ಶನ್ 32 ರನ್ ಬಾರಿಸಿದರೆ, ದೇವದತ್ ಪಡಿಕ್ಕಲ್ (16) ಹಾಗೂ ಇಶಾನ್ ಕಿಶನ್ 38 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ಆಡಿದ ಅಭಿಮನ್ಯು ಈಶ್ವರನ್ ಕೇವಲ 117 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ತಂಡದ ಮೊತ್ತ 250ರ ಗಡಿದಾಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಂತೆ ಮೂರನೇ ದಿನದಾಟದ ಅಂತ್ಯಕ್ಕೆ ಶೇಷ ಭಾರತ ತಂಡವು 4 ವಿಕೆಟ್ ಕಳೆದುಕೊಂಡು 289 ರನ್ ಕಲೆಹಾಕಿದೆ.

ಸದ್ಯ ಕ್ರೀಸ್​ನಲ್ಲಿ 212 ಎಸೆತಗಳಲ್ಲಿ 11 ಫೋರ್ ಹಾಗೂ 1 ಸಿಕ್ಸ್​ನೊಂದಿಗೆ ಅಜೇಯ 151 ರನ್ ಬಾರಿಸಿದ ಅಭಿಮನ್ಯು ಈಶ್ವರನ್ ಹಾಗೂ ಧ್ರುವ್ ಜುರೇಲ್ (30) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮುಂಬೈ ಪ್ಲೇಯಿಂಗ್ 11: ಪೃಥ್ವಿ ಶಾ , ಆಯುಷ್ ಮ್ಹಾತ್ರೆ , ಶ್ರೇಯಸ್ ಅಯ್ಯರ್ , ಅಜಿಂಕ್ಯ ರಹಾನೆ (ನಾಯಕ) , ಸರ್ಫರಾಝ್ ಖಾನ್ , ಹಾರ್ದಿಕ್ ತಮೋರೆ (ವಿಕೆಟ್ ಕೀಪರ್) , ಶಾರ್ದೂಲ್ ಠಾಕೂರ್ , ಶಮ್ಸ್ ಮುಲಾನಿ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ , ಎಂ ಜುನೇದ್ ಖಾನ್.

ಇದನ್ನೂ ಓದಿ: ಹೆಚ್ಚುವರಿ 36 ಎಸೆತಗಳಿಂದ ಟೀಮ್ ಇಂಡಿಯಾ ಕೈ ತಪ್ಪಿದ ಸಾರ್ವಕಾಲಿಕ ಶ್ರೇಷ್ಠ ದಾಖಲೆ

ಶೇಷ ಭಾರತ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ) , ದೇವದತ್ ಪಡಿಕ್ಕಲ್ , ಅಭಿಮನ್ಯು ಈಶ್ವರನ್ , ಸಾಯಿ ಸುದರ್ಶನ್ , ಇಶಾನ್ ಕಿಶನ್ , ಧ್ರುವ್ ಜುರೆಲ್ (ವಿಕೆಟ್ ಕೀಪರ್) , ಮಾನವ್ ಸುತಾರ್ , ಸರನ್ಶ್ ಜೈನ್ , ಯಶ್ ದಯಾಳ್ , ಪ್ರಸಿದ್ಧ್ ಕೃಷ್ಣ , ಮುಖೇಶ್ ಕುಮಾರ್.