ಟೀಮ್ ಇಂಡಿಯಾದ ಮಾಜಿ ಆಟಗಾರ… ಅಪ್ಪನೊಂದಿಗೆ ಇನಿಂಗ್ಸ್ ಆರಂಭಿಸಿದ ಮಗ

ಮುರಳಿ ವಿಜಯ್ ಟೀಮ್ ಇಂಡಿಯಾ ಪರ 61 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ವೇಳೆ ಒಟ್ಟು 3982 ರನ್ ಕಲೆಹಾಕಿದ್ದಾರೆ. ಹಾಗೆಯೇ 17 ಏಕದಿನ ಪಂದ್ಯಗಳಿಂದ 339 ರನ್ಸ್ ಹಾಗೂ 9 ಟಿ20 ಪಂದ್ಯಗಳಿಂದ 169 ರನ್​ ಗಳಿಸಿದ್ದಾರೆ. ಇದೀಗ ಮುರಳಿ ವಿಜಯ್ ಅವರ ಪುತ್ರ ನಿವಾನ್ ಕೂಡ ತಂದೆಯ ಹಾದಿಯಲ್ಲಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಆಟಗಾರ... ಅಪ್ಪನೊಂದಿಗೆ ಇನಿಂಗ್ಸ್ ಆರಂಭಿಸಿದ ಮಗ
Murali - Vivan

Updated on: Jun 01, 2025 | 12:31 PM

ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಪುತ್ರ, ವೀರೇಂದ್ರ ಸೆಹ್ವಾಗ್ ಅವರ ಮಗ ಈಗಾಗಲೇ ದೇಶೀಯ ಅಂಗಳದಲ್ಲಿ ಇನಿಂಗ್ಸ್ ಆರಂಭಿಸಿದ್ದಾರೆ. ಇದೀಗ ಈ ಪಟ್ಟಿಗೆ ಸೇರ್ಪಡೆಯಾಗಲು ಹೊರಟ್ಟಿದ್ದಾರೆ ಭಾರತ ತಂಡದ ಮಾಜಿ ಆಟಗಾರ ಮುರಳಿ ವಿಜಯ್ ಅವರ ಪುತ್ರ ನಿವಾನ್.

ಮುರಳಿ ವಿಜಯ್ ಹಾಗೂ ನಿವಾನ್ ಜೊತೆಯಾಗಿ ಕ್ಲಬ್​ ಕ್ರಿಕೆಟ್ ಪಂದ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸ್ಮರಣೀಯ ಕ್ಷಣದ ವಿಡಿಯೋವನ್ನು ಮುರಳಿ ವಿಜಯ್ ಅವರ ಪತ್ನಿ ನಿಕಿತಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ದಶಕದಲ್ಲಿ ಟೀಮ್ ಇಂಡಿಯಾ ಪರ ಟೆಸ್ಟ್ ಆರಂಭಿಕ ಆಟಗಾರನಾಗಿ ಹಲವು ಶ್ರೇಷ್ಠ ಇನ್ನಿಂಗ್ಸ್ ಆಡಿರುವ ಮುರಳಿ ವಿಜಯ್, ಇದೀಗ ಮತ್ತೆ ಪ್ಯಾಡ್ ಧರಿಸಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅವರ ಜೊತೆ ಪುತ್ರ ನಿವಾನ್ ಇದ್ದರು ಎಂಬುದು ವಿಶೇಷ.

ತಂದೆಯೊಂದಿಗೆ ಇನಿಂಗ್ಸ್ ಆರಂಭಿಸಿದ ನಿವಾನ್ ಅತ್ಯುತ್ತಮ ಹೊಡೆತಗಳ ಮೂಲಕ ಗಮನ ಸೆಳೆದರು. ಅದರಲ್ಲೂ ಅವರು ಆಡಿದ ಶೈಲಿ, ಫುಟ್‌ವರ್ಕ್, ಬ್ಯಾಕ್‌ಲಿಫ್ಟ್ ಮತ್ತು ಫಾಲೋಥ್ರೂ ಅವರ ತಂದೆ ಮುರಳಿ ವಿಜಯ್ ಅವರಂತೆಯೇ ಇತ್ತು ಎಂಬುದು ವಿಶೇಷ. ಇನ್ನು 41 ವರ್ಷದ ಮುರಳಿ ವಿಜಯ್, ತಮ್ಮ ಬ್ಯಾಟಿಂಗ್‌ನಲ್ಲಿ ಕಲಾತ್ಮಕತೆಯನ್ನು ಪ್ರದರ್ಶಿಸಿದರು.

ಇದರ ಜೊತೆಗೆ ತಂದೆ-ಮಗ ಬೌಲಿಂಗ್​ನಲ್ಲೂ ಪರಾಕ್ರಮ ಮೆರೆದರು. ಆದರೆ ಇಲ್ಲಿ ಮುರಳಿ ವಿಜಯ್ ಎಂದಿನಂತೆ ಸ್ಪಿನ್ ದಾಳಿ ಸಂಘಟಿಸಿದರೆ, ನಿವಾನ್ ವೇಗದ ಬೌಲರ್​ ಆಗಿ ಕಾಣಿಸಿಕೊಂಡರು. ಅಂದರೆ ಮುಂಬರುವ ದಿನಗಳಲ್ಲಿ ನಿವಾನ್ ಆಲ್​ರೌಂಡರ್​ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: IPL 2025: ಈ ಬಾರಿ ಕಪ್ ಗೆಲ್ಲೋರು ಇವರೇ ಎಂದ ಡೇವಿಡ್ ವಾರ್ನರ್

ವಿಡಿಯೋ ಹಂಚಿಕೊಂಡ ನಿಕಿತಾ:

ತಂದೆ-ಮಗನ ಜುಗಲ್​ಬಂಧಿಯ ಈ ವಿಡಿಯೋವನ್ನು ಮುರಳಿ ವಿಜಯ್ ಅವರ ಪತ್ನಿ ನಿಕಿತಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮುರಳಿ ವಿಜಯ್ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಅದೇ ನೆಲದಲ್ಲೇ ನಿವಾನ್ ಕೂಡ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​ಗೆ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಶಿಖರ್ ಧವನ್ ಮತ್ತು  ಸುರೇಶ್ ರೈನಾ ಹಾಗೂ ವರುಣ್ ಆರೋನ್ ಲೈಕ್ ಒತ್ತಿದ್ದಾರೆ.