Virat Kohli: ಕಿಂಗ್ ಕೊಹ್ಲಿಯ ಆರ್ಭಟಕ್ಕೆ ಕ್ರಿಸ್ ಗೇಲ್ ವಿಶ್ವ ದಾಖಲೆಯೇ ಶೇಕಿಂಗ್
Virat Kohli Records: ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಈವರೆಗೆ 413 ಪಂದ್ಯಗಳನ್ನಾಡಿದ್ದು, ಈ ವೇಳೆ 396 ಇನಿಂಗ್ಸ್ ಆಡಿದ್ದಾರೆ. ಈ ಇನಿಂಗ್ಸ್ಗಳ ಮೂಲಕ ಒಟ್ಟು 13500 ರನ್ ಕಲೆಹಾಕಿದ್ದಾರೆ. ಇನ್ನು ಈ 396 ಇನಿಂಗ್ಸ್ಗಳಲ್ಲಿ ಕೊಹ್ಲಿ ಬ್ಯಾಟ್ನಿಂದ 9 ಭರ್ಜರಿ ಶತಕಗಳು ಹಾಗೂ 105 ಅರ್ಧಶತಕಗಳು ಮೂಡಿ ಬಂದಿವೆ.
Updated on: Jun 01, 2025 | 1:55 PM

ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ (Virat Kohli) ಮತ್ತೊಂದು ಮೈಲುಗಲ್ಲು ಮುಟ್ಟಿದ್ದಾರೆ. ಅದು ಕೂಡ 13500 ರನ್ ಕಲೆಹಾಕುವ ಮೂಲಕ. ಅಂದರೆ ಟಿ20 ಕ್ರಿಕೆಟ್ನಲ್ಲಿ ಹದಿಮೂರು ಸಾವಿರದ ಐನೂರು ರನ್ ಕಲೆಹಾಕಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಕಿಂಗ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಈ ದಾಖಲೆಯೊಂದಿಗೆ ವಿರಾಟ್ ಕೊಹ್ಲಿ ಟಿ20 ರನ್ ಸರದಾರರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಒಂದು ವೇಳೆ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಶತಕ ಮೂಡಿಬಂದರೆ, ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಬಹುದು. ಏಕೆಂದರೆ ಕೊಹ್ಲಿಗಿಂತ ಮುಂದಿರುವ ಕೀರನ್ ಪೊಲಾರ್ಡ್ (13537) ಹಾಗೂ ಶೊಯೆಬ್ ಮಲಿಕ್ 13571 ರನ್ ಕಲೆಹಾಕಿದ್ದಾರೆ.

ಹೀಗಾಗಿ ಜೂನ್ 3 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ನಿಂದ ಮೂರಂಕಿ ರನ್ ಮೂಡಿಬಂದರೆ ಭರ್ಜರಿ ದಾಖಲೆ ನಿರ್ಮಾಣವಾಗಲಿದೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆಯಲು ಕೊಹ್ಲಿಗೆ ಬೇಕಿರುವುದು ಕೇವಲ 1063 ರನ್ಗಳು ಮಾತ್ರ.

ಸದ್ಯ ಈ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್ 463 ಟಿ20 ಪಂದ್ಯಗಳಲ್ಲಿ 455 ಇನಿಂಗ್ಸ್ ಆಡಿದ್ದು, ಈ ವೇಳೆ 22 ಶತಕ ಹಾಗೂ 88 ಅರ್ಧಶತಕಗಳೊಂದಿಗೆ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸದ್ಯ ಐಪಿಎಲ್ನಲ್ಲಿ ಮಾತ್ರ ಟಿ20 ಪಂದ್ಯಗಳನ್ನಾಡುತ್ತಿರುವ ವಿರಾಟ್ ಕೊಹ್ಲಿ ಮುಂಬರುವ ಸೀಸನ್ಗಳ ಮೂಲಕ 1063 ರನ್ಗಳನ್ನು ಕಲೆಹಾಕಿದರೆ, ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಹೀಗಾಗಿಯೇ ಮುಂಬರುವ ಐಪಿಎಲ್ ಮೂಲಕ ಕೊಹ್ಲಿ ಕಡೆಯಿಂದ ಈ ಭರ್ಜರಿ ದಾಖಲೆಯನ್ನು ನಿರೀಕ್ಷಿಸಬಹುದು.
