IPL 2025: ಈ ಬಾರಿ ಕಪ್ ಗೆಲ್ಲೋರು ಇವರೇ ಎಂದ ಡೇವಿಡ್ ವಾರ್ನರ್
IPL 2025 Final: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಜೂನ್ 3 ರಂದು ನಡೆಯಲಿರುವ ಅಂತಿಮ ಪಂದ್ಯಕ್ಕೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟ್ರಿ ಕೊಟ್ಟಿದ್ದು, ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
Updated on:Jun 01, 2025 | 9:07 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಗೆದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ಗೇರಿದರೆ, ಇದೀಗ ದ್ವಿತೀಯ ಕ್ವಾಲಿಫೈಯರ್ನಲ್ಲಿ ಕಣಕ್ಕಿಳಿಯಲು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸಜ್ಜಾಗಿದೆ.

ಅದರಂತೆ ಜೂನ್ 1 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೇರಲಿದೆ. ಅಂದರೆ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡದ ಎದುರಾಳಿಯಾಗಿ ಮುಂಬೈ ಇಂಡಿಯನ್ಸ್ ಅಥವಾ ಪಂಜಾಬ್ ಕಿಂಗ್ಸ್ ಕಣಕ್ಕಿಳಿಯುವುದು ಖಚಿತ. ಆದರೆ ದ್ವಿತೀಯ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನವೇ ಐಪಿಎಲ್ನ ಮಾಜಿ ಆಟಗಾರ ಡೇವಿಡ್ ವಾರ್ನರ್, ಈ ಬಾರಿ ಕಪ್ ಗೆಲ್ಲುವ ತಂಡ ಯಾವುದೆಂದು ಹೆಸರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ವಾರ್ನರ್, ನನ್ನ ಪ್ರಕಾರ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯಲಿದೆ ಎಂದಿದ್ದಾರೆ. ಅಲ್ಲದೆ ಫೈನಲ್ ಪಂದ್ಯದಲ್ಲಿ ಮಿಂಚುವ ಮೂಲಕ ಜೋಶ್ ಹೇಝಲ್ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಸಹ ಭವಿಷ್ಯ ನುಡಿದಿದ್ದಾರೆ.

ಕಳೆದ 17 ವರ್ಷಗಳಲ್ಲಿ ಮೂರು ಬಾರಿ ಕಪ್ ಗೆಲ್ಲುವ ಸನಿಹಕ್ಕೆ ಬಂದಿದ್ದ ಆರ್ಸಿಬಿ ತಂಡವು ಕೊನೆಯ ಹಂತದಲ್ಲಿ ಎಡವಿತ್ತು. ಇದೀಗ 9 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ಅದು ಕೂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ. ಹೀಗಾಗಿಯೇ ಈ ಬಾರಿಯ ಐಪಿಎಲ್ನಲ್ಲಿ ಟ್ರೋಫಿ ಎತ್ತಿ ಹಿಡಿಯುವ ಫೇವರೇಟ್ ತಂಡವಾಗಿ ಆರ್ಸಿಬಿ ಗುರುತಿಸಿಕೊಂಡಿದೆ.

ಅದರಂತೆ ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಕಾದು ನೋಡಬೇಕಿದೆ.
Published On - 9:04 am, Sun, 1 June 25
